ರಮೇಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ಸಮರ ದಿನದಿಂದ ತಾರಕಕ್ಕೇರುತ್ತಿದೆ. ರಮೇಶ್ ಜಾರಕಿಹೊಳಿ ಹಣಿಯಲು ಡಿಕೆ ತಂತ್ರ ರೂಪಿಸಿದ್ದರು. ಸಿ.ಡಿಯಲ್ಲಿದ್ದ ಯುವತಿ, ನರೇಶ್ ಸೇರಿದಂತೆ ಹಲವರನ್ನು ಒಟ್ಟುಗೂಡಿಸಿ ಖೆಡ್ಡಾ ತೋಡಿ ಕೆಡವಿದರು ಎನ್ನುವುದು ಒಂದು ಕಡೆಯಾದರೆ, ಡಿಕೆ ವಿರುದ್ಧ ಸಿಡಿದೆದ್ದಿರುವ ರಮೇಶ್ ಜಾರಕಿಹೊಳಿ ಕಥೆಯೇ ಬೇರೆ. ಡಿಕೆ ವಿರುದ್ಧ ಅಟ್ಯಾಕ್ ಮಾಡುತ್ತಿರುವ ರಮೇಶ್ ಜಾರಕಿಹೊಳಿ ಒಂಟಿಯಾಗಿಲ್ಲ. ತಮ್ಮ ಲಖನ್ ಜಾರಕಿಹೊಳಿ ಅಣ್ಣನ ಜೊತೆಯಲ್ಲೇ ಇದ್ದಾರೆ.


ವೈಯಕ್ತಿಕ ನಿಂದನೆ ಬೇಡ ಎಂದು ಮನವಿ ಮಾಡಿರುವುದು ರಮೇಶ್ ಜಾರಕಿಹೊಳಿಯ ಇನ್ನೊಬ್ಬ ತಮ್ಮ ಬಾಲಚಂದ್ರ ಜಾರಕಿಹೊಳಿ. ರಮೇಶ್, ಲಖನ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮೂವರಿಗೂ ಮನವಿ ಮಾಡಿದ್ದಾರೆ. ಆದರೆ ಅಣ್ಣನಿಗೆ ಅನ್ಯಾಯ ಆಗಿರುವುದು ನಿಜ ಎಂದೂ ಹೇಳಿದ್ದಾರೆ.


ರಮೇಶ್ ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ ಎನ್ನೋ ಮೂಲಕ ವಿವಾದವನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ದವರು ಡಿಕೆ ಶಿವಕುಮಾರ್. ಆದರೆ ಜಾರಕಿಹೊಳಿ ಸಿಡಿದೆದ್ದ ಮೇಲೆ ಮಾತನಾಡಿಲ್ಲ. ಡಿಕೆ ಬೆಂಬಲಿಗರು ಕೆಲವರು ರಮೇಶ್ ಜಾರಕಿಹೊಳಿ ಮನೆಗೆ ಮುತ್ತಿಗೆ ಹಾಕಿದರು. ಆದರೆ ನಾಯಕರು ಸ್ವಲ್ಪ ಮಟ್ಟಿಗೆ ಸೈಲೆಂಟ್. ಎಲ್ಲರೂ ಕಾಯುತ್ತಿರುವುದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆಗೆ. ಆದರೆ ಕಾಂಗ್ರೆಸ್ಸಿನಲ್ಲಿರುವ ರಮೇಶ್ ಜಾರಕಿಹೊಳಿ ತಮ್ಮನಾಗಿರುವ ಸತೀಶ್ ಜಾರಕಿಹೊಳಿ, ಈ ವಿಚಾರದಲ್ಲಿ ಸದ್ಯಕ್ಕೆ ಸೈಲೆಂಟ್. ಹಾಗೆ ನೋಡಿದರೆ ರಮೇಶ್ ಜಾರಕಿಹೊಳಿ ವಿಷಯದಲ್ಲಿ ಟೀಕೆ ಮಾಡಿದ್ದರೂ, ಅವರ ನಿಲುವು ಮತ್ತು ನಡೆಗಳ ನಿಗೂಢತೆ ಅವರಿಗಷ್ಟೇ ಗೊತ್ತು. ಸಿದ್ದರಾಮಯ್ಯ ಅವರಾಗಲೀ, ಎಂಬಿ ಪಾಟೀಲ್ ಅವರಾಗಲೀ ರಮೇಶ್ ಜಾರಕಿಹೊಳಿ ವರ್ಸಸ್ ಡಿಕೆ ಶಿವಕುಮಾರ್ ಸಮರಕ್ಕೆ ನೋ ಕಮೆಂಟ್ಸ್ ಎಂದಿದ್ದಾರೆ.


ಅಚ್ಚರಿ ಎನಿಸಿರುವುದು ಇದು. ಸದ್ಯಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ಮೌನಕ್ಕೆ ಜಾರಿದ್ಧಾರೆ. ಇದೇ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕಾಂಗ್ರೆಸ್ಸಿಗೆ ಕರೆತಂದು ಟಿಕೆಟ್ ಕೊಡಿಸಿದ್ದೇ ನಾನು, ಡಿಕೆ ಒಪ್ಪಿರಲಿಲ್ಲ ಎಂದಿದ್ದಾರೆ ರಮೇಶ್. ಆದರೆ ಸಾಹುಕಾರನ ಮಾತಿಗೆ ಉತ್ತರ ಕೊಟ್ಟಿರುವುದು ತಮ್ಮ. ಅವರ ಪ್ರಕಾರ ರಮೇಶ್ ಜಾರಕಿಹೊಳಿ ಅಕ್ಕನನ್ನು ಬಿಜೆಪಿಗೆ ಕರೆದರು. ಅವರು ಹೋಗಲಿಲ್ಲ ಎಂದಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ, ಲಕ್ಷಿ ವಿರುದ್ದ ಕೆಟ್ಟಹುಳ, ವಿಷಕನ್ಯೆ ಎಂದೆಲ್ಲ ಕರೆದಿದ್ದಾರೆ. ಡಿಕೆ ಮತ್ತು ತಮ್ಮ ಬಾಂಧವ್ಯ ಹಾಳಾಗಲು ಆಕೆಯೇ ಕಾರಣ ಎಂದೂ ಹೇಳಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಸದ್ಯದ ಮಟ್ಟಿಗೆ ಸೈಲೆಂಟ್.



