ಪರಮೇಶ್ವರ್. ಕೆಪಿಸಿಸಿಯ ಮಾಜಿ ಅಧ್ಯಕ್ಷ. ಈಗ ಡಿಕೆ ಶಿವಕುಮಾರ್ ಇರುವ ಸ್ಥಾನದಲ್ಲಿ ಇದ್ದ ನಾಯಕ. ಮೇಲಾಗಿ ದಲಿತ. 2013ರಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಸೋಲು ಕಾಣದೇ ಇದ್ದರೆ ಸಿಎಂ ಆಗುವ ರೇಸಿನಲ್ಲಿ ಪರಮೇಶ್ವರ್ ಅವರೂ ಇರುತ್ತಿದ್ದರು. ಕೆಪಿಸಿಸಿ ಸಂಪ್ರದಾಯ ಮುಂದುವರಿಸಿದ್ದೇ ಆದಲ್ಲಿ 2013ರಲ್ಲಿ ಸಿಎಂ ಕೂಡಾ ಆಗುತ್ತಿದ್ದರು. ಆದರೆ ಒಂದು ಸೋಲು ಎಲ್ಲವನ್ನೂ ಉಲ್ಟಾ ಮಾಡಿಬಿಟ್ಟಿತು. ಈಗ ಅವುಗಳನ್ನೆಲ್ಲ ನೆನಪಿಸಿಕೊಳ್ಳಬೇಕಷ್ಟೆ..


ಪರಮೇಶ್ವರ್ ಅಸಮಾಧಾನಕ್ಕೆ ಕಾರಣವೇನು?
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ 200 ಯುನಿಟ್ ವಿದ್ಯುತ್ ಫ್ರೀ, ಗೃಹಲಕ್ಷ್ಮಿಯರಿಗೆ ಮನೆ ಮನೆಗೆ ಮಾಸಿಕ 2 ಸಾವಿರ ರೂ. ಘೋಷಣೆ ಮಾಡಿಬಿಟ್ಟಿದ್ದಾರೆ, ಆದರೆ ಇದಾವುದು ಕೂಡಾ ಪರಮೇಶ್ವರ್ ಗಮನಕ್ಕೆ ಬಂದಿಲ್ಲ. ಅವರಿಗೂ ಪತ್ರಿಕೆ, ಘೋಷಣೆಗಳ ನಂತರವಷ್ಟೇ ಗೊತ್ತಾಗಿರುವುದು. ಪರಮೇಶ್ವರ್, ಮಾಜಿ ಅಧ್ಯಕ್ಷರಷ್ಟೇ ಅಲ್ಲ, ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಹೇಗಿರಬೇಕು ಎಂದು ನಿರ್ಧಾರ ಮಾಡುವ ಕಮಿಟಿಯ ಅಧ್ಯಕ್ಷರೂ ಹೌದು. ಆದರೆ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷರಾದ ತಮಗೇ ಮಾಹಿತಿ ನೀಡದೆ ಎಲ್ಲವನ್ನೂ ಘೋಷಿಸುತ್ತಿದ್ದರೆ ಅಧ್ಯಕ್ಷ ಸ್ಥಾನವಾದರೂ ಏಕೆ ಬೇಕು? ಪ್ರಣಾಳಿಕೆ ರಚನಾ ಸಮಿತಿಯಾದರೂ ಏಕಿರಬೇಕು? ಅನ್ನೋದು ಪರಮೇಶ್ವರ್ ಪ್ರಶ್ನೆ.


ಪರಮೇಶ್ವರ್ ಅವರಿಗೆ ಈ ರೀತಿ ಹಿನ್ನಡೆಯಾಗುತ್ತಿರುವುದು ಹೊಸದೇನೂ ಅಲ್ಲ. 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೂ ಈ ಪರಿಸ್ಥಿತಿ ಅನುಭವಿಸಿದ್ದವರೇ. ಸೋತ ನಂತರವಂತೂ ಪರಿಸ್ಥಿತಿ ಕಷ್ಟವಾಗಿತ್ತು. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಯಿತಾದರೂ ಸಂಪುಟಕ್ಕೂ ಸೇರಿಸಿಕೊಳ್ಳಲಿಲ್ಲ. ಮುಖ್ಯಮಂತ್ರಿಯಾಗುವ ಕನಸು ಇಟ್ಟುಕೊಂಡಿದ್ದ ಪರಮೇಶ್ವರ್, ಸೋತ ನಂತರ ಡಿಸಿಎಂ ಆಗುವ ಇಚ್ಛೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಆದರೆ ಕೊನೆಗೆ ಹೇಗೋ ಮಂತ್ರಿಪಟ್ಟ ಸಿಕ್ಕರೆ ಸಾಕು ಎಂಬುವಲ್ಲಿಗೆ ಪರಮೇಶ್ವರ್ ಬಂದ ಮೇಲೆಯೇ ಸಚಿವ ಸ್ಥಾನ ಸಿಕ್ಕಿದ್ದು. ಹೋಮ್ ಮಿನಿಸ್ಟರ್ ಆದರು. ಆದರೆ ಗೃಹ ಸಚಿವರ ಹುದ್ದೆಯನ್ನು ಸಿದ್ದರಾಮಯ್ಯ ತಮ್ಮ ಆಪ್ತ ಕೆಂಪಯ್ಯನವರ ಮೂಲಕ ಕಂಟ್ರೋಲಿನಲ್ಲಿಟ್ಟುಕೊಂಡಿದ್ದರು ಎನ್ನುವುದು ಬಿಜೆಪಿ ಆರೋಪ.


ಆದರೆ ದಲಿತ ನಾಯಕರೂ ಆಗಿರುವ ಪರಮೇಶ್ವರ್ ಅವರು ಸಿಟ್ಟು ಮಾಡಿಕೊಳ್ಳುವುದು ಕಾಂಗ್ರೆಸ್ಸಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಅತ್ತ ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಸಮಾಧಾನಗೊಂಡಿದ್ದಾರೆಯೋ.. ಇಲ್ಲವೋ.. ಎನ್ನವುದು ಸ್ಪಷ್ಟವಾಗಿಲ್ಲ. ಹೀಗಿರುವಾಗ ಪಕ್ಷದ ಇನ್ನೊಬ್ಬ ದಲಿತ ನಾಯಕ ಅಸಮಾಧಾನಗೊಳ್ಳುವುದು ಪಕ್ಷದ ಹಿತದೃಷ್ಟಿಯಿಂದ ಶುಭ ಸುದ್ದಿಯಂತೂ ಅಲ್ಲ. ಸಮೀಕ್ಷೆಗಳ ಪ್ರಕಾರ ಸದ್ಯಕ್ಕೆ ಲೀಡ್`ನಲ್ಲಿರುವ ಕಾಂಗ್ರೆಸ್`ಗೆ ಇದು ತೊಡಕಾಗಬಹುದು.



