ಕುಮಾರಸ್ವಾಮಿ ಮತ್ತೊಮ್ಮೆ ಹೇಳಿಕೆ ಕೊಟ್ಟಿದ್ದಾರೆ. ನಾನು ಬ್ರಾಹ್ಮಣರ ವಿರೋಧಿ ಅಲ್ಲ. ನಾನು ಜಾತಿಯನ್ನು ಗುರಿಯಾಗಿಟ್ಟುಕೊಂಡು ನಿಂದನೆ ಮಾಡಿಲ್ಲ. ಇದೂವರೆಗೆ ನೀಡಿದ ಹೇಳಿಕೆಗಳಿಗೆ ನಾನು ಬದ್ಧ ಎನ್ನುವುದು ಕುಮಾರಸ್ವಾಮಿ ಹೇಳಿಕೆ. ಪೇಶ್ವೆ ಜಾತಿಯವರೇ ಎಲ್ಲದಕ್ಕೂ ಕಾರಣ ಎನ್ನುವ ಅವರ ಹೇಳಿಕೆ ಅದು ಹೇಗೆ ಜಾತಿ ವಿರೋಧಿ ಎಲ್ಲ ಎನ್ನುವುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಅದು ಸೈಡಿಗೆ ಇರಲಿ, ಈ ಹೇಳಿಕೆ ನಿರೀಕ್ಷೆಯಂತೆಯೇ ಚಿತ್ರ ವಿಚಿತ್ರ ತಿರುವು ಪಡೆಯುತ್ತಿದೆ. ಈ ಲೆಕ್ಕವನ್ನು ಮೊದಲಿನಿಂದಲೇ ಊಹಿಸಿದ್ದರೂ ಅದಕ್ಕೆ ಸರಿಯಾದ ಸ್ವರೂಪ ಸಿಕ್ಕಿರಲಿಲ್ಲ. ಇದೀಗ ಅವರ ಹೇಳಿಕೆಯ ಒಂದೊಂದೇ ಅಂಶಗಳನ್ನು ತೆಗೆದುಕೊಂಡು ವಿಶ್ಲೇಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ.
ಕುಮಾರಸ್ವಾಮಿ ತಂತ್ರಗಾರಿಕೆ ಕಥೆ ನಂ.1
ಯಡಿಯೂರಪ್ಪರನ್ನು ಬಿಜೆಪಿ ಕಡೆಗಣಿಸುತ್ತಿದೆ. ಅವರ ಮಗನಿಗೂ ಸೂಕ್ತ ಸ್ಥಾನಮಾನ ನೀಡಿಲ್ಲ ಎನ್ನುವ ಆರೋಪದದ ಮೂಲಕ ಯಡಿಯೂರಪ್ಪ ಅವರಿಂದಾಗಿ ಬಿಜೆಪಿ ಜೊತೆಯಲ್ಲಿರೋ ಲಿಂಗಾಯತರನ್ನು ವಿಭಜಿಸುವಂತೆ ಮಾಡುವ ತಂತ್ರವಿದೆ ಎನ್ನುವುದು ವಿಶ್ಲೇಷಣೆ. ಆದರೆ ಇದನ್ನು ಖುದ್ದು ಯಡಿಯೂರಪ್ಪ ಹಾಗೂ ವಿಜಯೇಂದ್ರ ನಿರಾಕರಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಒಂದು ಸಮಾವೇಶದ ಮೂಲಕ ಮತದಾರರನ್ನು ಚೇಂಜ್ ಮಾಡುವ ಶಕ್ತಿಯಿರುವ ನಾಯಕ. ಇತ್ತೀಚೆಗೆ ಯಡಿಯೂರಪ್ಪ ಮೈಸೂರು ಕರ್ನಾಟಕಕ್ಕೂ ಬರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ವೋಟ್ ಬ್ಯಾಂಕ್ ರಕ್ಷಿಸಿಕೊಳ್ಳುವ ತಂತ್ರ ಇರಬಹುದು. ಮೈಸೂರು ಕರ್ನಾಟಕದಲ್ಲಿ ಜೆಡಿಎಸ್`ಗೆ ಲಿಂಗಾಯತರ ಬೆಂಬಲವೂ ದೊಡ್ಡದಾಗಿಯೇ ಇದೆ.
ಕುಮಾರಸ್ವಾಮಿ ತಂತ್ರಗಾರಿಕೆ ಕಥೆ ನಂ.2
ಯಡಿಯೂರಪ್ಪ ಅವರಿಗೆ ಅಧಿಕಾರ ತಪ್ಪಿಸಿದ್ದು ನಾನಲ್ಲ. ಬಿಜೆಪಿಯವರೇ. ದೆಹಲಿಯಲ್ಲಿದ್ದ ಪೇಶ್ವೆ ಜಾತಿಗೆ ಸೇರಿದ ನಾಯಕರೇ ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡದಂತೆ ತಪ್ಪಿಸಿದರು ಎನ್ನುವುದು ಕುಮಾರಸ್ವಾಮಿ ಅವರ ಹೊಸ ಹೇಳಿಕೆ.

ಕುಮಾರಸ್ವಾಮಿ ತಂತ್ರಗಾರಿಕೆ ಕಥೆ ನಂ.3
ವಾದ ಪ್ರತಿವಾದಗಳೇನೇ ಇರಲಿ, ದೇಶದಲ್ಲಿ ದಲಿತರ ಮೇಲೆ ಶೋಷಣೆ ಮಾಡಿದ್ದು ಬ್ರಾಹ್ಮಣರು ಮಾತ್ರ, ಮಿಕ್ಕವರ್ಯಾರೂ ಶೋಷಣೆ ಮಾಡಿಲ್ಲ ಎನ್ನುವಂತೆ ಒಂದು ವರ್ಗ ನಂಬುತ್ತದೆ. ಹಾಗೆಯೇ ವಾದಿಸುತ್ತದೆ ಕೂಡಾ. ಹಲವು ದಶಕಗಳಿಂದ ಇದನ್ನೇ ಕೇಳಿ ಬಂದಿರುವ ದಲಿತ ವರ್ಗದಲ್ಲಿ ಬ್ರಾಹ್ಮಣರ ಬಗ್ಗೆ ಒಂದು ಅಸಹನೆ ಇದೆ. ಆದರೆ ಕರ್ನಾಟಕದಲ್ಲೇ ದಲಿತರ ಒಂದು ದೊಡ್ಡ ಗುಂಪು ಬಿಜೆಪಿ ಜೊತೆಯಲ್ಲಿದೆ. ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿದ್ದು ಹಾಗೂ ಲಂಬಾಣಿಗಳಿಗೆ ದೇಶದಲ್ಲೇ ಮೊದಲ ಹಕ್ಕು ಪತ್ರ ನೀಡುವ ಮೂಲಕ ಮತ್ತು ಮೀಸಲಾತಿ ಹೆಚ್ಚಳದ ಮೂಲಕ ಬಿಜೆಪಿಯತ್ತ ಹೋಗುತ್ತಿರುವ ದಲಿತರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಒಂದು ವರದಿ. ದಲಿತರ ಪಕ್ಷಾಂತರ ಹೆಚ್ಚಾದರೆ ತಮಗೇ ಕಷ್ಟ ಎನ್ನುವ ಲೆಕ್ಕಾಚಾರಕ್ಕೆ ಬಂದಿರುವ ಕುಮಾರಸ್ವಾಮಿ ಸೇಫ್ ಟಾರ್ಗೆಟ್ ಆಗಿರುವ ಬ್ರಾಹ್ಮಣರನ್ನು ಟೀಕೆಗೆ ಗುರಿ ಮಾಡಿದ್ದಾರೆ ಎನ್ನುವುದು ಒಂದು ವಾದ.
ಕುಮಾರಸ್ವಾಮಿ ಆರೋಪಕ್ಕೆ ಬಿಜೆಪಿ ಕೌಂಟರ್ ಏನು?
ಮೊದ ಮೊದಲು ಬಿಜೆಪಿ ಕಂಗಾಲಾಗಿದ್ದು ಹೌದಾದರೂ, ನಂತರ ಚೇತರಿಸಿಕೊಂಡಂತೆ ಕಾಣುತ್ತಿದೆ. ಒಂದು ಮಾತನಾಡಲು ಹೋಗಿ, ಇನ್ನೊಂದು ಮಾತಾಡಿ ತಗ್ಲಾಕ್ಕೊಂಡಿದ್ದವರೇ ಎಲ್ಲ. ಆದರೆ ಕೌಂಟರ್`ನ್ನು ಯಶಸ್ವಿಯಾಗಿ ಆರಂಭಿಸಿದ್ದು ಯಡಿಯೂರಪ್ಪ ಅವರೇ ಎನ್ನುವುದು ವಿಶೇಷ. ಸೈಡ್‍ಲೈನ್ ಎಂದರೆ ಏನು? ನಾನು ಬಿಜೆಪಿಯಲ್ಲಿ ಖುಷಿಯಾಗಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ ಎಂಬ ಒಂದು ಹೇಳಿಕೆ ಮೂಲಕವೇ ಯಡಿಯೂರಪ್ಪ ತಿರುಗೇಟು ಕೊಟ್ಟರು.

ಬಿಜೆಪಿ ಹೈಕಮಾಂಡ್`ಗೆ ಸಂದೇಶ : ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅದರಲ್ಲೂ ರಾಜೀನಾಮೆ ನೀಡಿದ ನಂತರ ಬಿಜೆಪಿಯಲ್ಲೇ ಇರುವ ಯಡಿಯೂರಪ್ಪ ವಿರೋಧಿ ಶಕ್ತಿಗಳು ವಿಜೃಂಭಿಸುತ್ತಿವೆ. ಆದರೆ ಅಖಾಡದಲ್ಲಿ ಯಡಿಯೂರಪ್ಪ ಅವರ ಆರ್ಧಕ್ಕೂ ಬರಲಾಗುತ್ತಿಲ್ಲ. ಇದು ವಾಸ್ತವ. ಈ ವಾಸ್ತವ ಅರ್ಥ ಮಾಡಿಕೊಂಡು ಬಿಜೆಪಿ ಹೈಕಮಾಂಡ್, ಯಡಿಯೂರಪ್ಪ ಅವರನ್ನು ಮುಂದಾಳತ್ವಕ್ಕೆ ತಂದರೆ ಬಿಜೆಪಿಗೆ ಲಾಭವಾಗಬಹುದು ಎಂಬ ನಿರೀಕ್ಷೆ ಇದೆ. ಆದರೆ ಹೈಕಮಾಂಡ್ ನಿರ್ಧಾರ ಏನಿದೆಯೋ… ಗೊತ್ತಿಲ್ಲ.



