ಬಿಜೆಪಿಗೆ ವರಿಷ್ಠ ಅಮಿತ್ ಶಾ ಸಪೋರ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಪಟ್ಟವೂ ಇದೆ. ಆದರೆ ಯಡಿಯೂರಪ್ಪ ಅವರಂತಹ ದೊಡ್ಡ ನಾಯಕ ಬಿಟ್ಟು ಕೊಟ್ಟ ಖಾಲಿ ಜಾಗ ಭರ್ತಿ ಮಾಡುವ ಸಾಮಥ್ರ್ಯದ ಕೊರತೆ ಎದ್ದು ಕಾಣುತ್ತಿದೆ. ಇದು ಸ್ವತಃ ಬಿಜೆಪಿಯಲ್ಲಿಯೇ ಕೇಳಿ ಬರುತ್ತಿರುವ ಮಾತು. ಇತ್ತೀಚೆಗೆ ಬಸವರಾಜ ಬೊಮ್ಮಾಯಿ ಕೈ ಬಲಪಡಿಸಿ ಎಂಬ ಅಮಿತ್ ಶಾ ಹೇಳಿಕೆ, ಬೊಮ್ಮಾಯಿಯವರಲ್ಲಿ ಉತ್ಸಾಹ ತಂದಿತಾದರೂ, ಕೆಲವು ಬಿಜೆಪಿ ನಾಯಕರು ಸುಸ್ತಾಗಿಬಿಟ್ಟರು. 



ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಇತ್ತೀಚೆಗೆ ಎರಡು ಬಾರಿ ಕುಮಾರಸ್ವಾಮಿ ಜೊತೆ ಮಾತನಾಡಿದ್ದಾರೆ. ಅವರು ಜಗದೀಶ್ ಶೆಟ್ಟರ್ ಬೆಂಬಲಿಗರು ಎನ್ನುವುದು ಗೊತ್ತಿಲ್ಲದ ಸಂಗತಿಯೇನಲ್ಲ. 

ರಾಜ್ಯ ಬಿಜೆಪಿಯೊಳಗಿನ ಕೆಲವು ಅಪಸ್ವರ, ಮೇಲಾಟಗಳನ್ನು ಮುಖ್ಯಮಂತ್ರಿಯಾದವರು ನಿಭಾಯಿಸಿ ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗಬೇಕು. ಆದರೆ ಹುಬ್ಬಳ್ಳಿ-ಧಾರವಾಡ ವಿಚಾರಕ್ಕೇ ತೆಗೆದುಕೊಂಡರೆ ಅಲ್ಲಿ ಜಗದೀಶ್ ಶೆಟ್ಟರ್ ಅವರನ್ನು ವೇದಿಕೆಯಲ್ಲಿ ಮೂಲೆಗುಂಪು ಮಾಡಲಾಯಿತು. ಇದು ಬ್ರಾಹ್ಮಣ ಸಿಎಂ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬಲವಾದ ಪುಷ್ಠಿ ಕೊಟ್ಟಿತು. ಮುಖ್ಯಮಂತ್ರಿಗಳೇ ಈ ರೀತಿ ವರ್ತಿಸಿದರೆ ಹೇಗೆ ಎಂಬ ಪ್ರಶ್ನೆಗೆ ಬೊಮ್ಮಾಯಿ ಉತ್ತರ ಕೊಡಲಿಲ್ಲ.
ಮಂಡ್ಯದ ಉಸ್ತುವಾರಿ ಸಮಸ್ಯೆ ನಿಭಾಯಿಸುವುದರಲ್ಲೂ ವೈಫಲ್ಯ ಎದುರಿಸಿ ಬೊಮ್ಮಾಯಿ, ಈಗ ಯಾರಿಗೆ ಕೊಡಬೇಕು ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ. ನಾರಾಯಣ ಗೌಡ ಅವರಿಗಿದ್ದ ಅಧಿಕಾರವನ್ನು ಆರ್.ಅಶೋಕ್ ಅವರಿಗೆ ಕೊಡುವಾಗ ಸ್ಥಳೀಯ ಕಾರ್ಯಕರ್ತರ ಭಾವನೆ ಗೊತ್ತಾಗಲಿಲ್ಲ. ಇಂಪ್ಯಾಕ್ಟ್ ಏನಿರಬಹುದು ಎಂಬ ಅರಿವೂ ಇಲ್ಲದೆ ಮಾಡಿ, ಈಗ ಅವರು ನೋ ಎಂದು, ಅಶ್ವತ್ಥ್ ನಾರಾಯಣ್ ಮಡಿಲಿಗೆ ಹೋಗುತ್ತಿದೆ. ಎಲೆಕ್ಷನ್ ದಿನಗಳ ಅಂತರದಲ್ಲಿ ಹತ್ತಿರದಲ್ಲಿರುವಾಗ ಇದು ಬಿಜೆಪಿಗೆ ಗುಡ್ ನ್ಯೂಸ್ ಅಲ್ಲ.

ಪಂಚಮಸಾಲಿ ವಿಷಯವನ್ನಂತೂ ಜಗ್ಗಿ ಜಗ್ಗಿ ಏನೇನೋ ಮಾಡಿ ಈಗ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಸಂಪುಟ ವಿಸ್ತರಣೆಯ ವಿಷಯದಲ್ಲಿ ಹೇಳುವಂತೆಯೇ ಇಲ್ಲ. ಯಡಿಯೂರಪ್ಪ ಅವರ ಸಲಹೆಯಂತೆ ಕೆಲವು ವಿಚಾರಗಳಲ್ಲಿ ಅದರಲ್ಲಿಯೂ ಮೇಕೆದಾಟು ಹಾಗೂ ಬ್ರಾಹ್ಮಣ ಸಿಎಂ ವಿಚಾರದಲ್ಲಿ ಮೌನವಾಗಿದ್ದರೆ ಆಗುವ ಪ್ರಾಬ್ಲಂ ಕಡಿಮೆ ಇರುತ್ತಿತ್ತು ಎನ್ನುವುದು ಸ್ವತಃ ಬಿಜೆಪಿ ನಾಯಕರ ಮಾತು.
ಸಂಘಟನೆ ವಿಚಾರದಲ್ಲಿ, ಎದುರಾಳಿಗಳಿಗೆ ಕೌಂಟರ್ ಕೊಡುವ ವಿಚಾರದಲ್ಲಿ, ಅಸಮಾಧಾನವನ್ನು ಸರಿ ಪಡಿಸುವ ವಿಚಾರದಲ್ಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ.. ಹೀಗೆ ಹಲವು ವಿಷಯಗಳಲ್ಲಿ ಎಡವುತ್ತಿರುವ ಬೊಮ್ಮಾಯಿ, ಬಿಜೆಪಿಗೆ ಸಮಸ್ಯೆಯಾಗುತ್ತಿರುವುದೂ ಹೌದು.



