ಐಪಿಎಸ್ ರೂಪಾ. 2000ನೇ ಬ್ಯಾಚ್‍ನ ಅಧಿಕಾರಿ. ಯುಪಿಎಸ್ಸಿಯಲ್ಲಿ 43ನೇ ಶ್ರೇಣಿ ಪಡೆದಿದ್ದ ರೂಪಾ, ಕರ್ನಾಟಕದಲ್ಲಿ ಐಪಿಎಸ್ ಡ್ಯೂಟಿ ಮಾಡಿದ ಮೊದಲ ಕನ್ನಡತಿಯೂ ಹೌದು. ದಾವಣಗೆರೆಯ ಹುಡುಗಿ. ಈಕೆಯ ತಂಗಿ ರೋಹಿಣಿ ಕೂಡಾ ಐಆರ್‍ಎಸ್ ಆಫೀಸರ್.
ರೂಪಾ ಕುವೆಂಪು ವಿವಿಯಲ್ಲಿ ಡಿಗ್ರಿ ಗೋಲ್ಡ್ ಮೆಡಲಿಸ್ಟ್. ನಂತರ ಬೆಂಗಳೂರು ವಿವಿಯಲ್ಲಿ ಸೈಕಾಲಜಿಯಲ್ಲಿ ಎಂಎ ಮಾಡಿದ ರೂಪಾ, ಹಿಂದೂಸ್ತಾನಿ ಸಂಗೀತವನ್ನೂ ಕಲಿತವರು. ಭರತನಾಟ್ಯವೂ ಚೆನ್ನಾಗಿ ಗೊತ್ತು. ಒಳ್ಳೆಯ ಗಾಯಕಿಯೂ ಹೌದು. 2018ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗಾಗಿ ಸ್ಫೂರ್ತಿ ಗೀತೆಯನ್ನು ಹಾಡಿದ್ದ ರೂಪಾ, ಬಯಲಾಟದ ಭೀಮ ಎಂಬ ಚಿತ್ರದಲ್ಲಿ ಒಂದು ಹಾಡು ಹಾಡಿದ್ದಾರೆ.


ಮಧ್ಯಪ್ರದೇಶದ ಅಳ್ನಾವರ್ ಜಿಲ್ಲೆಯಲ್ಲಿ ಅಧಿಕಾರಿಯಾಗಿದ್ದ ರೂಪಾ ಖ್ಯಾತಿಗೆ ಬಂದಿದ್ದು ಉಮಾ ಭಾರತಿ ಅವರನ್ನು ಅರೆಸ್ಟ್ ಮಾಡುವ ಮೂಲಕ. ಹುಬ್ಬಳ್ಳಿ ಧಾರವಾಡದಲ್ಲಿ ಎಸ್ಪಿಯಾಗಿದ್ದ ರೂಪಾ ಅರೆಸ್ಟ್ ಉಮಾಭಾರತಿ ಅವರನ್ನು ಅರೆಸ್ಟ್ ಮಾಡಿದಾಗ, ಉಮಾಭಾರತಿ ಮಧ್ಯಪ್ರದೇಶದ ಸಿಎಂ ಆಗಿದ್ದವರು. ನ್ಯಾಯಾಲಯ ಆದೇಶ ನೀಡಿದ್ದ ಕಾರಣಕ್ಕೆ ರೂಪಾ, ಉಮಭಾರತಿ ಅವರನ್ನು ಅರೆಸ್ಟ್ ಮಾಡಿದ್ದರು. ಆ ಪ್ರಕರಣದ ಬಗ್ಗೆ ಬೇರೆಯ ಕಥೆಗಳೂ ಇವೆ.
ಯಾದಗಿರಿ ಜಿಲ್ಲೆಯಾದಾಗ ಅಲ್ಲಿಗೆ ನೇಮಕಗೊಂಡ ಮೊದಲ ಎಸ್ಪಿ ರೂಪಾ. 2016ರಲ್ಲಿ ರಾಷ್ಟ್ರಪತಿ ಪದಕವನ್ನೂ ಪಡೆದಿದ್ದರು. 2003ರಲ್ಲಿ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ಅವರನ್ನು ವಿವಾಹವಾದರು. ಇಬ್ಬರು ಮಕ್ಕಳಿದ್ದಾರೆ. 2013ರಲ್ಲಿ ಸೈಬರ್ ಕ್ರೈಂ ಸ್ಟೇಷನ್ಗೆ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿಯೂ ರೂಪಾ ಅವರೇ.
ರೂಪಾ ಮೌದ್ಗೀಲ್ ವಿವಾದಗಳ ಇತಿಹಾಸ
ಸೈಬರ್ ಕ್ರೈಂ ಡಿಸಿಪಿಯಾಗಿದ್ದಾಗ ರಾಜಕಾರಣಿಗಳ ಭದ್ರತೆಗಾಗಿ ಅನಧಿಕೃತವಾಗಿ ನಿಯೋಜಿತವಾಗಿದ್ದ 200ಕ್ಕೂ ಹೆಚ್ಚು ಪೊಲೀಸರನ್ನು ವಾಪಸ್ ಕರೆಸಿಕೊಂಡರು. ಆಗಿನ ಕಾಲಕ್ಕೆ ಅದು ದೊಡ್ಡ ಸುದ್ದಿ. ಮಾಜಿ ಸಿಎಂಗಳಿಗಾಗಿ ನಿಯೋಜನೆಗೊಂಡಿದ್ದ ಸರ್ಕಾರಿ ಕಾರುಗಳನ್ನೂ ವಾಪಸ್ ಪಡೆದ ಖ್ಯಾತಿಯೂ ಇವರದ್ದೇ. ಕಾರಾಗೃಹ ಇಲಾಖೆಯಲ್ಲಿದ್ದಾಗ ಡಿಜಿಪಿ ಸತ್ಯ ನಾರಾಯಣ ವಿರುದ್ಧ ಆರೋಪ ಮಾಡಿದ್ದ ರೂಪಾ, ಜಯಲಲಿತಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ವಿಐಪಿ ಟ್ರೀಟ್ಮೆಂಟ್ ನೀಡಲು 2 ಕೋಟಿ ಪಡೆಯಲಾಗಿದೆ ಎಂದು ಆರೋಪಿಸಿದ್ದರು. ನಾನು ಜೈಲಿಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ಕೆಲವರು 2 ಕೋಟಿ ಲಂಚ ಕೊಟ್ಟ ಬಗ್ಗೆ ಮಾತಾಡಿಕೊಂಡಿದ್ದರು ಎಂದು ಪತ್ರ ಬರೆದು ಸೋಷಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದರು. ವಿಶೇಷವೆಂದರೆ ರೂಪಾ ಬರೆದಿದ್ದ ಪತ್ರ ಪಕ್ಕದಲ್ಲೇ ಇದ್ದ ಡಿಜಿಪಿ ಕಚೇರಿಗೆ ತಲುಪುವ ಮುನ್ನವೇ ಮಾಧ್ಯಮಗಳಿಗೆ ಸಿಕ್ಕಿತ್ತು.


ಬೆಂಗಳೂರು ಹೆಚ್ಚುವರಿ ಆಯಕ್ತರಾಗಿದ್ದ ನಿಂಬಾಳ್ಕರ್ ವಿರುದ್ಧ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಗುತ್ತಿಗೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆಗ ರೂಪಾ ಗೃಹ ಕಾರ್ಯದರ್ಶಿಯಾಗಿದ್ದರು. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ರೂಪಾ ಹಸ್ತಕ್ಷೇಪ ಮಾಡಿದ್ದರು ಎಂದು ನಿಂಬಾಳ್ಕರ್ ದೂರಿದ್ದರು. ಗುತ್ತಿಗೆ ಪ್ರಕ್ರಿಯೆಗೆ ತಾಂತ್ರಿಕ ದಾಖಲೆಗಳನ್ನು ಸಿದ್ಧಪಡಿಸುವಂತೆ ‘ಇ ಅಂಡ್ ವೈ’ ಕಂಪನಿಗೆ ನಿಂಬಾಳ್ಕರ್ ನೇತೃತ್ವದ ಟೆಂಡರ್ ಆಹ್ವಾನ ಸಮಿತಿ ಹೇಳಿತ್ತು. ಆದರೆ ರೂಪಾ ಮಾಡಿದಾಗ ಟೆಂಡರ್ ಪ್ರಕ್ರಿಯೆಯೇ ಶುರುವಾಗಿರಲಿಲ್ಲ ಎಂದು ವರದಿಯಾಗಿತ್ತು.
ಈಗ ರೂಪಾ ಮೌದ್ಗಿಲ್ ಅವರು ಕರಕುಶಲ ಅಭಿವೃದ್ಧಿ ನಿಗಮದ ಮುಖ್ಯಸ್ಥೆ. ಅಲ್ಲಿಯೂ ಅಷ್ಟೆ, ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ವಿರುದ್ಧ 31 ಕೇಸ್, 15 ವಾರಂಟ್ ಇದೆ. ಇಂಥಾ ವ್ಯಕ್ತಿ ಯಾವುದೇ ಕಂಪನಿಯಲ್ಲಿ ನಿರ್ದೇಶಕರಾಗಲು ಸಾಧ್ಯವಿಲ್ಲ ಎಂದು ಆರೋಪ ಮಾಡಿದ್ದರು. ಆಗ ರಾಘವೇಂದ್ರ ಶೆಟ್ಟಿ ರೂಪಾ ವಿರುದ್ಧವೇ ಆರೋಪ ಮಾಡಿದ್ದರು. ರೂಪಾ ಕಚೇರಿಗೆ ಬರುತ್ತಿಲ್ಲ ಎಂದು ಒಂದಲ್ಲ..ಎರಡಲ್ಲ… 30ಕ್ಕೂ ಹೆಚ್ಚು ನೋಟಿಸ್ ಕೊಟ್ಟಿದ್ದರು.


ರೂಪಾ ಮೌದ್ಗಿಲ್ ಈಗ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಇಲ್ಲಿಯೂ ಅಷ್ಟೆ, ಒಬ್ಬ ಐಪಿಎಸ್ ಅಧಿಕಾರಿಯಾಗಿ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶವಿದ್ದರೂ, ಸೋಷಿಯಲ್ ಮೀಡಿಯಾಗಳಲ್ಲಿ ಬಹಿರಂಗವಾಗಿ ಮಾತನಾಡುತ್ತಾ ಪ್ರಚಾರಕ್ಕೆ ಸೀಮಿತರಾಗುತ್ತಿದ್ದಾರೆ. ಕರಕುಶಲ ನಿಗಮದಂತಾ ಸಂಸ್ಥೆಯಲ್ಲಿದ್ದುಕೊಂಡು ಉನ್ನತ ಹುದ್ದೆಯಲ್ಲಿರುವಾಗ ಆ ಹುದ್ದೆಯಲ್ಲಿ ಮಾಡುವುದಕ್ಕೆ ಬೇರೆಯದೇ ಕೆಲಸಗಳಿವೆ. ಕರಕುಶಲ ಉದ್ಯಮಕ್ಕೆ ಹೊಸ ಮಾರುಕಟ್ಟೆ ಸೃಷ್ಟಿಸುವ, ಕರಕುಶಲ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸಗಳು ರೂಪಾ ಮಾಡಬೇಕಿದ್ದ ಪ್ರಾಥಮಿಕ ಕರ್ತವ್ಯಗಳು. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಆದರೆ ರೂಪಾ ಮೌದ್ಗಿಲ್ ಹೆಚ್ಚಿನದಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ಐಪಿಎಸ್ ಪಾಸು ಮಾಡಿದವರು, ಐಪಿಎಸ್ ಹುದ್ದೆಗೆ ತಕ್ಕನಾದ ಕೆಲಸ ಮಾಡಬೇಕಲ್ಲವೇ..?



