ಈ ಬಾರಿಯ ಚುನಾವಣೆಯಲ್ಲಿ ಬೆರಗು ಹುಟ್ಟಿಸುತ್ತಿರುವುದು ಸಮೀಕ್ಷೆಗಳು. ಸಾಮಾನ್ಯವಾಗಿ ಈ ಮೊದಲಿನ ಚುನಾವಣೆಗಳಲ್ಲಿ ಸುಮಾರು 10 ಸಮೀಕ್ಷೆಗಳು ನಡೆದರೆ, ಅವುಗಳಲ್ಲಿ 6-8 ಸಮೀಕ್ಷೆಗಳಲ್ಲಿ ರಾಜ್ಯ ರಾಜಕೀಯದ ಚುನಾವಣೆ ಚಿತ್ರ ಗೊತ್ತಾಗುತ್ತಿತ್ತು. ಆದರೆ ಈ ಬಾರಿ ಹಾಗಾಗಿಲ್ಲ. ಒಂದೊಂದು ಸಮೀಕ್ಷೆಯೂ ಒಂದೊಂದು ರೀತಿ. ಈ ದಿನ ಬರುವ ಸಮೀಕ್ಷೆ ಕಾಂಗ್ರೆಸ್ ಸಂಪೂರ್ಣವಾಗಿ ಅಧಿಕಾರಕ್ಕೆ ಬರಲಿದೆ ಎಂದರೆ, ಅದೇ ದಿನ ಬಿಡುಗಡೆಯಾಗುವ ಇನ್ನೊಂದು ಸಮೀಕ್ಷೆ ಬಿಜೆಪಿ ಮತ್ತೆ ಗೆದ್ದು ಇತಿಹಾಸ ಸೃಷ್ಟಿಸುತ್ತೆ ಎಂದು ಹೇಳುತ್ತೆ. ಇನ್ನೂ ಹಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆ ಫಿಕ್ಸ್ ಎನ್ನುತ್ತಿವೆ. ಕೆಲವರ ಪ್ರಕಾರ ಬಿಜೆಪಿ ನಂ.1 ಪಾರ್ಟಿ, ಇನ್ನೂ ಕೆಲವರ ಪ್ರಕಾರ ಕಾಂಗ್ರೆಸ್ ನಂ.1 ಪಾರ್ಟಿ. ಹೀಗಿರುವಾಗಲೇ ರಾಷ್ಟ್ರೀಯ ಸುದ್ದಿ ವಾಹಿನಿ ಇಂಡಿಯಾ ಟುಡೇ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ.
ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ. ಈ ಲೆಕ್ಕದಲ್ಲಿ ಕಾಂಗ್ರೆಸ್ 107-119 ಸ್ಥಾನ ಗಳಿಸಲಿದೆ. ಬಿಜೆಪಿ 74-86 ಸ್ಥಾನ ಗಳಿಸಲಿದೆ. ಕಳೆದ ಬಾರಿಗಿಂತ 24 ಕಡಿಮೆ ಸ್ಥಾನ ಗಳಿಸಲಿದೆ. ಕಳೆದ ಬಾರಿ ಶೇ.36.5 ವೋಟ್ ಶೇರ್ ಪಡೆದಿದ್ದ ಬಿಜೆಪಿ, ಈ ಚುನಾವಣೆಯಲ್ಲಿ ಶೇ.35 ವೋಟ್ ಶೇರ್ ಪಡೆಯಲಿದೆ. ಕಾಂಗ್ರೆಸ್ ವೋಟ್ ಶೇರ್ ಶೇ.40ನ್ನು ತಲುಪಲಿದೆ. ಕಳೆದ ಬಾರಿಗಿಂತ 33 ಸೀಟು ಹೆಚ್ಚು ಪಡೆಯಲಿದೆ.
ಕಾಂಗ್ರೆಸ್ಸಿನ ಸಿದ್ದರಾಮಯ್ಯ ಸಿಎಂ ಯಾರು ಎಂಬ ಪ್ರಶ್ನೆಯಲ್ಲಿ ನಂ.1 ಆಯ್ಕೆ. ಶೇ.42 ಜನ ಸಿದ್ದರಾಮಯ್ಯಗೆ ವೋಟ್ ಮಾಡಿದ್ದರೆ, ಎರಡನೇ ಸ್ಥಾನದಲ್ಲಿ ಬಸವರಾಜ ಬೊಮ್ಮಾಯಿ ಇದ್ದಾರೆ. ಶೆ.31 ರಷ್ಟು ಜನರ ಬೆಂಬಲ ಪಡೆದಿದ್ದಾರೆ.
ಜನತಾದಳ ಜಾತ್ಯತೀತ 16-25 ಸೀಟು ಪಡೆಯಲಿದ್ದು, ಶೇ.17ರಷ್ಟು ವೋಟ್ ಶೇರ್ ಪಡೆಯಲಿದೆ. ಇತರರು 0-5 ಸೀಟ್ ಪಡೆಯಲಿದ್ದಾರಂತೆ.
ಕರಾವಳಿ ಕರ್ನಾಟಕದಲ್ಲಿ ಜೆಡಿಎಸ್ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆಯಲಿದೆ. ಆದರೆ ಸೀಟು ಪಡೆಯುವುದಿಲ್ಲ. ಬಿಜೆಪಿ ಪ್ರಾಬಲ್ಯ ಮುಂದುವರೆಯಲಿದೆ. ಆದರೆ ವೋಟ್ ಶೇರ್ ಕಡಿಮೆಯಾಗಲಿದೆ. ಬಿಜೆಪಿ-17 ಹಾಗೂ ಕಾಂಗ್ರೆಸ್ 4 ಸೀಟು ಗೆಲ್ಲಲಿದೆ. ಬೆಂಗಳೂರಿನಲ್ಲಿ 32 ಕ್ಷೇತ್ರಗಳಿದ್ದು, ಬಿಜೆಪಿ 13, ಕಾಂಗ್ರೆಸ್ 17ಹಾಗೂ ಜೆಡಿಎಸ್ 2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.
ಹೈದರಾಬಾದ್ ಕರ್ನಾಟಕದಲ್ಲಿ 31 ಸ್ಥಾನಗಳಿದ್ದು, ಕಾಂಗ್ರೆಸ್ 21, ಬಿಜೆಪಿ 10 ಹಾಗೂ ಜೆಡಿಎಸ್ 4 ಸೀಟು ಗೆಲ್ಲುವ ಸಾಧ್ಯತೆಗಳಿವೆ.
ಮುಂಬೈ ಕರ್ನಾಟಕದ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ 28 ಹಾಗೂ ಬಿಜೆಪಿ 22 ಸ್ಥಾನ ಗೆಲ್ಲುವ ಸಾಧ್ಯತೆಗಳಿವೆ. ಮಧ್ಯ ಕರ್ನಾಟಕದಲ್ಲಿ ಜೆಡಿಎಸ್ ತನ್ನ 2018ರ ಸ್ಥಾನಗಳನ್ನು ಹಾಗೆಯೇ ಉಳಿಸಿಕೊಳ್ಳಲಿದೆಯಂತೆ. ಕಾಂಗ್ರೆಸ್ 21, ಬಿಜೆಪಿ 14 ಸೀಟು ಗೆಲ್ಲಲಿದೆ.



