ಡಾ.ಪುನೀತ್ ರಾಜಕುಮಾರ್ ಅವರಿಗೆ ನೂರಾರು ಪುರಸ್ಕಾರಗಳು ಸಂದಿವೆ. ಕನಾಟಕ ರತ್ನ ಅತ್ಯುನ್ನತ ಪುರಸ್ಕಾರ. ಕರ್ನಾಟಕದ ಊರೂರುಗಳಲ್ಲಿಯೂ, ಪ್ರತಿ ನಗರಗಳಲ್ಲಿಯೂ ಪುನೀತ್ ಹೆಸರಲ್ಲಿ ಸ್ಮಾರಕವೋ, ರಸ್ತೆಯೋ, ವೃತ್ತವೋ, ಪಾರ್ಕುಗಳು, ಪ್ರತಿಮೆಗಳು ತಲೆಯೆತ್ತಿ ನಿಂತಿವೆ. ಅಭಿಮಾನಿಗಳ ವಿಷಯ ಬಿಡಿ, ಹೃದಯದಲ್ಲಿ ದೇವಸ್ಥಾನವನ್ನೇ ಕಟ್ಟಿಕೊಂಡು ಪುನೀತ್ ದಾರಿಯಲ್ಲೇ ಸದ್ದಿಲ್ಲದೆ ಸೇವಾಕಾರ್ಯಗಳಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ನಡುವೆ ಎಲ್ಲರೂ ಕಾಯುತ್ತಿದ್ದ ರಸ್ತೆ ಉದ್ಘಾಟನೆ ಸಮಯವೂ ಬಂದಿದೆ.
ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ನಿಂದ ಬನ್ನೇರುಘಟ್ಟ ರಸ್ತೆವರೆಗಿನ ಔಟರ್ ರಿಂಗ್ ರೋಡ್ಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಹೆಸರನ್ನಿಡಲಾಗಿದೆ. ಬಹಳ ಹಿಂದೆಯೇ ಮಾಡಿದ್ದ ಘೋಷಣೆಗೆ ಇಂದು ಅಧಿಕೃತ ಸ್ವರೂಪ ಸಿಗುತ್ತಿದೆ. ಇಂದು ಸಂಜೆ 6 ಗಂಟೆಗೆ ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಸ್ತೆ ನಾಮಕರಣ ಮಾಡಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿಗಳು ಮಾಡಲಿದ್ದಾರೆ. ಡಾ ರಾಜ್ ಕುಮಾರ್ ಕುಟುಂಬಸ್ಥರು, ಸಚಿವರು, ಚಿತ್ರರಂಗದ ತಾರೆಯರು ಭಾಗಿಯಾಗಲಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಆರ್. ಅಶೋಕ್ ಜೊತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ನಿರ್ದೇಶಕರ ಸಂಘದ ಖಜಾಂಚಿ ಉಮೇಶ್ ನಾಯ್ಕ್, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್, ಸುಂದರ್ ರಾಜ್, ಸಿದ್ಧರಾಜು, ಜೈ ಜಗದೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇದು ಅಧಿಕೃತ ಉದ್ಘಾಟನೆ ಕಾರ್ಯಕ್ರಮ, ಅಷ್ಟೆ. ಈಗಾಗಲೇ ಈ ರಸ್ತೆ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ಖ್ಯಾತವಾಗಿ ಹೋಗಿದೆ. ಅಧಿಕೃತ ಘೋಷಣೆಗಳೂ ಆಗಿವೆ. ವಿಪರ್ಯಾಸವೆಂದರೆ ಈ ಕಾರ್ಯಕ್ರಮದ ಹಲವು ಪೋಸ್ಟರುಗಳಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರವೇ ನಾಪತ್ತೆ. ದೇವರ ವಿಗ್ರಹವೇ ಇಲ್ಲದೆ ದೇವಸ್ಥಾನದ ಉದ್ಘಾಟನೆ ಮಾಡಿದಂತೆ ಎಂದು ಜನರೇ ಲೇವಡಿ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಹೋಗುವುದಕ್ಕೆ ಯಾವುದೇ ಟಿಕೆಟ್ ಅಥವಾ ಪಾಸ್ ಅಗತ್ಯವಿಲ್ಲ. ಎಲ್ಲರಿಗೂ ಮುಕ್ತ ಸ್ವಾಗತವಿದೆ. ಸಂಜೆ 6 ಗಂಟೆಗೆ. ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ.



