ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಭಿನ್ನಮತ, ಬಂಡಾಯ ಎಲ್ಲವೂ ಕಾಮನ್. ಎಲ್ಲ ಪಕ್ಷಗಳಲ್ಲಿಯೂ ಸಹಜವಾಗಿ ನಡೆಯುವ ಪ್ರಕ್ರಿಯೆ ಇದು. ಆದರೆ ಶಿಸ್ತಿನ ಪಕ್ಷ ಎಂದೇ ಕರೆಸಿಕೊಳ್ಳೋ ಬಿಜೆಪಿಯಲ್ಲಿ ಈ ಪರಿಯ ಭಿನ್ನಮತ ಅನಿರೀಕ್ಷಿತವಾಗಿತ್ತು. ಮೊದಲ ದಿನವೇ ಹಿರಿಯ ನಾಯಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಂಡಾಯದ ಬಾವುಟ ಹಾರಿಸಿದ್ದರು. ಈಶ್ವರಪ್ಪ, ಎಸ್.ಎ.ರವೀಂದ್ರನಾಥ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಂಗಾರ ನಿವೃತ್ತಿ ಘೋಷಿಸಿದರು. ಆದರೆ ಅಥಣಿಯ ಲಕ್ಷ್ಮಣ ಸವದಿ ಬಹಿರಂಗವಾಗಿ ತಿರುಗಿಬಿದ್ದರು. ರಘುಪತಿ ಭಟ್ ಕಣ್ಣೀರಿಟ್ಟರು. ಅಂಗಾರ ಅಸಮಾಧಾನವನ್ನು ಹೊರಹಾಕಿ, ಎಲೆಕ್ಷನ್ನಿಗೂ ನಿಲ್ಲಲ್ಲ. ಬಿಜೆಪಿಗೂ ಬೆಂಬಲ ಕೊಡಲ್ಲ ಎಂದು ಘೋಷಿಸಿಬಿಟ್ಟರು. ಬೆಂಗಳೂರಿನಲ್ಲಿ ಚಾಮರಾಜಪೇಟೆಯಲ್ಲಿ ಸೈಲೆಂಟ್ ಸುನಿಲನ ಕಡೆಯವರು ಬಿಜೆಪಿ ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದರೆ, ಜಯನಗರ ಟಿಕೆಟ್ ವಿಚಾರವಾಗಿ ಎನ್.ಆರ್.ರಮೇಶ್ ಯಡಿಯೂರು ವಾರ್ಡ್ನ 1,250ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿಯಲ್ಲಿ ಬಂಡಾಯದ ಲೆಕ್ಕ
ಮಾಜಿ ಸಚಿವ ಆರ್.ಶಂಕರ್ ಅವರು ಎಂಎಲ್ಸಿ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ರಾಣೆಬೆನ್ನೂರು ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದಿಂದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗೂಳಿಹಟ್ಟಿಶೇಖರ್ ಜನಾರ್ದನ ರೆಡ್ಡಿ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಇನ್ನು ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಹಾಗೂ ಧಾರವಾಡ ವಿಧಾನಸಭೆ ಕ್ಷೇತ್ರದ ಹಿರಿಯ ಮುಖಂಡ, ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಬಂಡಾಯವಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ತುಮಕೂರಿಂದ ಸೊಗಡು ಶಿವಣ್ಣ, ಕುಣಿಗಲ್ ಟಿಕೆಟ್ನ ಪ್ರಬಲ ಆಕಾಂಕ್ಷಿಗಳಾಗಿದ್ದ ಮುದ್ದಹನುಮೇಗೌಡ, ರಾಜೇಶ್ ಗೌಡ ಕೂಡ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಸಚಿವ ಸೋಮಣ್ಣ ಪಾಲಾಗಿದ್ದು, ಇದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಎಂ.ರುದ್ರೇಶ್ ಮುನಿಸಿಕೊಂಡಿದ್ದಾರೆ. ಸೋಮಣ್ಣ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತು ಚಿಂತನೆ ನಡೆಸುತ್ತಿದ್ದೇನೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಟಿಕೆಟ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿ ಪಾಲಾಗುತ್ತಿದ್ದಂತೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ತೊರೆಯುವ ಮನಸ್ಥಿತಿಯಲ್ಲಿರುವ ಸವದಿ ಅವರನ್ನು ಸೆಳೆಯಲು ಕಾಂಗ್ರೆಸ್ ಈಗಾಗಲೇ ಪ್ರಯತ್ನ ಆರಂಭಿಸಿದೆ.
ವಿಜಯನಗರ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಬಂಡಾಯದ ಕಿಡಿ ಹೊತ್ತಿಕೊಂಡಿದ್ದು, ಶಿಲ್ಪಾ ರಾಘವೇಂದ್ರ ಅವರಿಗೆ ಟಿಕೆಟ್ ನೀಡಿದ್ದನ್ನು ಪ್ರತಿಭಟಿಸಿ ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ದಿವಾಕರ್ ಅವರು ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಥವಾ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಕಲಬುರಗಿ ಜಿಲ್ಲೆಯ ಜೇವರ್ಗಯಲ್ಲಿ ದೊಡ್ಡಪ್ಪಗೌಡ ಪಾಟೀಲ್ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಜೆಡಿಎಸ್ ಕಡೆ ಮುಖಮಾಡಿದ್ದಾರೆ. ಕಲಬುರಗಿ ಉತ್ತರ ಕ್ಷೇತ್ರದಿಂದ ಶಿವಕಾಂತ ಮಹಾಜನ್, ಅಪಜಲ್ಫುರದಿಂದ ನಿತಿನ್ ಗುತ್ತೇದಾರ್ ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಬೆಳಗಾವಿ ಉತ್ತರದಲ್ಲಿ ಅನಿಲ… ಬೆನಕೆ, ಬೆಳಗಾವಿ ಗ್ರಾಮೀಣದಲ್ಲಿ ಸಂಜಯ ಪಾಟೀಲ…, ಬೈಲಹೊಂಗಲದಲ್ಲಿ ದೊಡ್ಡನಗೌಡ ಪಾಟೀಲ ಮತ್ತು ಡಾ.ವಿಶ್ವನಾಥ ಪಾಟೀಲ್, ರಾಮದುರ್ಗದಲ್ಲಿ ಮಹಾದೇವಪ್ಪ ಯಾದವಾಡ, ಗೋಕಾಕ್ ಕ್ಷೇತ್ರದಲ್ಲಿ ಮಾರುತಿ ಅಸ್ಟಗಿ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಬಹುತೇಕ ಎಲ್ಲ ಆಕಾಂಕ್ಷಿಗಳೂ ಬಿಜೆಪಿ ಹೈಕಮಾಂಡ್ಗೆ 2 ದಿನಗಳು ಗಡುವು ನೀಡಿದ್ದು, ಅಷ್ಟರೊಳಗೆ ನ್ಯಾಯ ಒದಗಿಸದಿದ್ದರೆ ಮುಂದಿನ ನಡೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.



