ರಾಮನಗರ ರಾಜಕೀಯ ದಿಢೀರನೆ ಬದಲಾದಂತಿದೆ. ಇದ್ದಕ್ಕಿದ್ದಂತೆಯೇ ಕಾಂಗ್ರೆಸ್ಸಿಗರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗುತ್ತಿದೆ. ನಿಖಿಲ್ ಕುಮಾರಸ್ವಾಮಿ ಹೆಸರು ಘೋಷಿಸಿದಾಗ ಈ ಬಾರಿ ನಿಖಿಲ್ ಗೆಲ್ಲುತ್ತಾರೆ. ನವದೆಹಲಿಯ ಸಂಸತ್ ಭವನಕ್ಕೆ ಮಿಸ್ ಆದ ಅವಕಾಶ, ಈ ಬಾರಿ ವಿಧಾನಸೌಧಕ್ಕೆ ದೊರೆಯಲಿದೆ ಎಂದೇ ಭಾವಿಸಲಾಗಿತ್ತು. ಈಗ ಇದ್ದಕ್ಕಿದ್ದಂತೆಯೇ ಇದು ಸುಲಭವಾಗಿ ಗೆಲ್ಲುವ ಯುದ್ಧವಲ್ಲ ಎಂದು ಎಲ್ಲರಿಗೂ ಅನ್ನಿಸೋಕೆ ಶುರುವಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವಂತೆ ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಕುತೂಹಲವೂ ಪಕ್ಷಗಳಲ್ಲಿ ಜೋರಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷ ರಾಮನಗರದ ವಿಚಾರದಲ್ಲಿ ನಿಗೂಢ ಹೆಜ್ಜೆ ಇಡುತ್ತಿರುವ ರಹಸ್ಯ ಏನು ಅನ್ನೋದು ಗೊತ್ತಾಗುತ್ತಿಲ್ಲ. ರಾಮನಗರ ಜೆಡಿಎಸ್ನ ಭದ್ರಕೋಟೆ ಎನ್ನಲಾಗುತ್ತಿದೆ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಹೋದರ, ಸಂಸದ ಡಿಕೆ ಸುರೇಶ್ ಅವರ ಹೆಸರು ಕೇಳಿ ಬರುತ್ತಿದೆ. ಇದರ ಹಿಂದಿನ ಪ್ಲ್ಯಾನ್ ಏನು ಅನ್ನೋದು ಇರುವ ಕುತೂಹಲ.


ರಾಮನಗರದಿಂದ ಡಿ.ಕೆ. ಸುರೇಶ್ ಸ್ಪರ್ಧೆಗೆ ಹೈ ಕಮಾಂಡ್ ಸೂಚನೆ ವಿಚಾರವನ್ನು ತಳ್ಳಿ ಹಾಕುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ಈಗಾಗಲೇ ಪ್ರಪೋಸಲ್ ಕೂಡ ಇದೆ. ಅವರನ್ನು ನಿಲ್ಲಿಸಬೇಕು ಎಂಬ ಸಣ್ಣ ಸಂದೇಶ ಇದೆ. ಆದರೆ, ಈ ಬಗ್ಗೆ ನಾನು ಯಾರ ಬಳಿಯು ಮಾತನಾಡಿಲ್ಲ. ಸುರೇಶ್ ಬಳಿ ಸೇರಿ ಕಾರ್ಯಕರ್ತರ ಬಳಿಯೂ ಈ ಬಗ್ಗೆ ಮಾತನಾಡಿಲ್ಲ. ಇದು ಮೇಜರ್ ಡಿಸಿಷನ್ ಆಲೋಚನೆ ಮಾಡುತ್ತೇವೆ. ನಾನೇ ಪಿಸಿಸಿ ಪ್ರೆಸಿಡೆಂಟ್ ಕೆಲ ಪ್ರಪೋಸಲ್ ಇದೆ. ನಾನು ಇಲ್ಲ ಎನ್ನುವುದಿಲ್ಲ. ರಾಮನಗರದ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ಬಹಳ ದಿನದಿಂದ ಒತ್ತಾಯ ಮಾಡುತ್ತಿದ್ದಾರೆ. ನನಗೆ ಬೈ ಎಲೆಕ್ಷನ್ ಮಾಡುವುದು ಇಷ್ಟ ಇಲ್ಲ. ಈಗ ಪಾರ್ಟಿ ಕೂಡ ಈ ವಿಚಾರವನ್ನು ಹೇಳುತ್ತಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಈ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ ಎನ್ನುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತು.


ಏನಾಗಬಹುದು ಎಂದು ನೋಡಿದರೆ ಸದ್ಯಕ್ಕೆ ರಾಜ್ಯಮಟ್ಟದ ಸಮೀಕ್ಷೆಗಳಲ್ಲಿ ಎಲ್ಲ ಕಡೆ ಕೇಳಿ ಬರುತ್ತಿರೋದು ಸಮ್ಮಿಶ್ರ ಸರ್ಕಾರದ ಮಾತು. ಹಾಗೇನಾದರೂ ಆದರೆ ಅದು ಕಾಂಗ್ರೆಸ್ಸಿಗೇ ಪ್ರಾಬ್ಲಂ. ಮಗನನ್ನು ಸೋಲಿಸಿದ (ನಿಖಿಲ್ ಸೋತರೆ) ಅಥವಾ ಸೋಲಿಸುವುದಕ್ಕೆ ಯತ್ನಿಸಿದ (ನಿಖಿಲ್ ಗೆದ್ದರೆ) ಪಕ್ಷದ ಜೊತೆ ಹೋಗುವುದು ಕುಮಾರಸ್ವಾಮಿಗೆ ಕಷ್ಟವಾಗಬಹುದು. ಮೈತ್ರಿಗೆ ಅವಕಾಶ ಕೇಳೋಕೆ ಕಾಂಗ್ರೆಸ್ಸಿಗೂ ಮುಜುಗರವಾಗಬಹುದು.ಪರಿಸ್ಥಿತಿ ಹೀಗಿರುವಾಗ ಡಿಕೆ ಶಿವಕುಮಾರ್ ರಿಸ್ಕ್ ತಗೋತಾರಾ..? ನಿಜಕ್ಕೂ ಡಿಕೆ ಸುರೇಶ್ ಎಲೆಕ್ಷನ್ನಿಗೆ ನಿಲ್ತಾರಾ..? ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.



