ದೇವೇಗೌಡರಿಂದ ಜೆಡಿಎಸ್`ನವರು ಕಲಿಯಬೇಕಾದ ಪಾಠವೇನು..?
ರಾಜಕೀಯ ತಂತ್ರಗಾರಿಕೆಯಾ.. ಅದು ಸಾಧ್ಯವಿಲ್ಲ. ಏಕೆಂದರೆ ಅದು ಒಂದೆರಡು ದಿನ..ವರ್ಷಗಳಲ್ಲಿ ಬಂದಿದ್ದಲ್ಲ. ಕುಮಾರಸ್ವಾಮಿ ನಿಜಕ್ಕೂ ದೇವೇಗೌಡರಿಂದ ಕಲಿಯಲೇಬೇಕಾದ ಪಾಠವೇನಾದರೂ ಒಂದಿದ್ದರೆ.. ದೇವೇಗೌಡರ ಫೈಟರ್ ಸ್ಪಿರಿಟ್. ಅವರ ಹೋರಾಟದ ತಾಕತ್ತಿಗೆ ಬೆರಗಾಗಿದ್ದರೆ ಹೇಗೆ..? ಪಂಚರತ್ನ ಯಾತ್ರೆಯ ಸಮಾರೋಪದಲ್ಲಿ ದೇವೇಗೌಡರಿದ್ದರು. 90 ದಿನಗಳ ಪಂಚರತ್ನ ಯಾತ್ರೆಗೆ ತೆರೆ ಬಿದ್ದಿದ್ದು ಮೈಸೂರಿನಲ್ಲಿ.
ಪಂಚರತ್ನ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ದೇವೇಗೌಡರನ್ನು ಸುಮಾರು 50 ಮೀ.ವರೆಗೆ ವಿಶೇಷವಾಗಿ ಸಿದ್ಧಪಡಿಸಿದ್ದ ಟ್ರ್ಯಾಲಿಯ ನೆರವಿನಿಂದ ಜನರ ಮಧ್ಯೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದು ವಿಶೇಷ. ದೇವೇಗೌಡರನ್ನು ಕಾಣುತ್ತಲೇ ಕಾರ್ಯಕರ್ತರ ಹರ್ಷೋದ್ಗಾರ ಇಮ್ಮಡಿಯಾಯಿತು. ವೇದಿಕೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಅಂಗರಕ್ಷಕರು ಮತ್ತು ಕಾರ್ಯಕರ್ತರು ವ್ಹೀಲ್ ಚೇರ್ನಲ್ಲಿ ಕರೆತರುತ್ತಲೇ ನೆರೆದಿದ್ದ ಲಕ್ಷಾಂತರ ಮಂದಿ ಕಾರ್ಯಕರ್ತರು ಚಪ್ಪಾಳೆ, ತಟ್ಟಿ, ಶಿಳ್ಳೆ ಹೊಡೆದು ಸ್ವಾಗತಿಸಿದರು. ದೇವೇಗೌಡರಿಗೆ ದಕ್ಷಿಣಪಥೇಶ್ವರ ಇಮ್ಮಡಿ ಪುಲಕೇಶಿಯ ಕಿರೀಟ ಮಾದರಿ ತೊಡಿಸಿ, ಚಿನ್ನದ ನೇಗಿಲನ್ನು ಸಮರ್ಪಿಸಿದರು.


ಸೋಷಿಯಲ್ ಮೀಡಿಯಾದಲ್ಲಿ ಚಿನ್ನಮ್ಮನವರು ಪತಿಯ ಕಾಲಿಗೆ ನಮಸ್ಕರಿಸಿ ಬೀಳ್ಕೊಟ್ಟಿದ್ದು ದೊಡ್ಡ ಚರ್ಚೆಯಾದರೆ, ವೇದಿಕೆಯಲ್ಲಿ ಉತ್ಸಾಹ ಹೆಚ್ಚಿಸಿದ್ದು ದೇವೇಗೌಡರ ಮಾತು. ವಯಸ್ಸು 90 ದಾಟಿದೆ. ದೇಹ ಸಹಕರಿಸುತ್ತಿಲ್ಲ. ಪದೇ ಪದೇ ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ. ಸ್ವಲ್ಪ ಚೇತರಿಕೆ ಕಂಡ ತಕ್ಷಣ ಜನರ ಮಧ್ಯೆ ಬರೋದು ಇದೆಯಲ್ಲ.. ಅದು ದೇವೇಗೌಡರ ಫೈಟರ್ ಸ್ಪಿರಿಟ್.





