ಹಾಸನ ಕ್ಷೇತ್ರದ ಟಿಕೆಟ್ ವಿವಾದ ವಿಚಿತ್ರ ತಿರುವು ಪಡೆಯುತ್ತಿದೆ. ಟಿಕೆಟ್ ಯಾರಿಗೆ ಅನ್ನೋದನ್ನು ದೇವೇಗೌಡರು ನಿರ್ಧರಿಸುತ್ತಾರೆ ಎನ್ನುತ್ತಿದ್ದಾರೆ ಜೆಡಿಎಸ್ ಟಾಪ್ ನಾಯಕರು. ನಾನೇ ಅಭ್ಯರ್ಥಿ ಎಂಬ ಭವಾನಿ ರೇವಣ್ಣ ಅವರ ಸ್ವಯಂಘೋಷಿತ ಹೇಳಿಕೆ ಸೃಷ್ಟಿಸಿರುವ ತಲ್ಲಣ ಅಂಥದ್ದು. ಅದಾದ ಮೇಲೆ ಕುಮಾರಸ್ವಾಮಿ ಹಾಸನದಲ್ಲಿ ಪ್ರಬಲ ಅಭ್ಯರ್ಥಿಗಳಿದ್ದಾರೆ. ಕುಟುಂಬದವರಿಗೆ ಕೊಡುವ ಅಗತ್ಯವಿಲ್ಲ ಎಂದಿದ್ದರೆ, ಅದನ್ನು ನಿರ್ಧರಿಸುವುದು ದೇವೇಗೌಡರು ಎಂದು ಮಾರುತ್ತರ ಕೊಟ್ಟಿದ್ದಾರೆ ಪ್ರಜ್ವಲ್ ರೇವಣ್ಣ.


ನನಗೆ ಟಿಕೆಟ್ ಕೊಟ್ಟರೂ ಗೆದ್ದು ಬರುತ್ತೇನೆ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟರೂ ಪಕ್ಷಕ್ಕೆ ಕೆಲಸ ಮಾಡುತ್ತೇನೆ ಎನ್ನುವುದು ಸ್ವರೂಪ್ ಪ್ರಕಾಶ್ ಮಾತು. ಇದೆಲ್ಲ ಬೆಳವಣಿಗೆ ನಡುವೆಯೇ ಬಿಜೆಪಿ ರಾಷ್ಟ್ರೀಯ ಮುಖಂಡ ಸಿ.ಟಿ.ರವಿ, ಭವಾನಿ ರೇವಣ್ಣ ಬಿಜೆಪಿಗೆ ಬರುವುದಾದರೆ ಸ್ವಾಗತ, ನಾವು ಟಿಕೆಟ್ ನೀಡುತ್ತೇವೆ ಎನ್ನುವ ಮೂಲಕ ಜೆಡಿಎಸ್ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡಿದ್ದಾರೆ.


ಕುಮಾರಸ್ವಾಮಿ ಹೆಸರಲ್ಲೂ ಭವಾನಿ ರೇವಣ್ಣ ಅರ್ಚನೆ. ಅನಿತಾ, ನಿಖಿಲ್ ಹೆಸರಲ್ಲಿ ಇಲ್ಲ..!
ಮಾಸ್ತಿಯಮ್ಮನ ಗುಡಿಯಲ್ಲಿ ರೇವಣ್ಣನವರ ಕುಟುಂಬವೇ ಸೇರಿತ್ತು. ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ದೇವಸ್ಥಾನದ ಉದ್ಘಾಟನೆಯಲ್ಲಿ ಭಾಗಿಯಾದರು. ಈ ವೇಳೆ ಭವಾನಿ ರೇವಣ್ಣ ಮಾವ ಹೆಚ್.ಡಿ.ದೇವೇಗೌಡ, ಅತ್ತೆ ಚೆನ್ನಮ್ಮ ದೇವೇಗೌಡ, ಪತಿ ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪುತ್ರರಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಹಾಗೂ ಮೈದುನ ಕುಮಾರಸ್ವಾಮಿ ಹೆಸರಲ್ಲಿ ಅರ್ಚನೆ ಮಾಡಿಸಿದರು. ಅರ್ಚಕರು ಇನ್ನೂ ಹೆಸರಿವೆಯಾ ಕೇಳುತ್ತಿರುವಾಗಲೇ ಸಾಕು ಎಂದರು. ಇದು ಕಾರ್ಯಕರ್ತರಲ್ಲಿ ಕುತೂಹಲ, ಅನುಮಾನಗಳಿಗೆ ಕಾರಣವಾಗಿದ್ದು ಸುಳ್ಳಲ್ಲ.


ಇದೀಗ ಇಡೀ ರೇವಣ್ಣ ಕುಟುಂಬ ಮೌನವ್ರತಕ್ಕೆ ಜಾರಿದೆ. ಹೆಚ್.ಡಿ.ರೇವಣ್ಣ ಇದೂವರೆಗೆ ಪ್ರತಿಕ್ರಿಯೆ ನೀಡಿಲ್ಲ. ಮೊದಲ ದಿನ ದೇವೇಗೌಡರ ನಿರ್ಧಾರವೇ ಫೈನಲ್ ಎಂದಿದ್ದ ಪ್ರಜ್ವಲ್ ರೇವಣ್ಣ ಕೂಡಾ ಈಗ ಮಾತನಾಡುತ್ತಿಲ್ಲ. ಭವಾನಿ ರೇವಣ್ಣ ಅವರಂತೂ ಹೇಳುವುದಂತೂ ಹೇಳಿದ್ದೇನೆ. ಮಿಕ್ಕಿದ್ದು ಮಾವನವರಿಗೆ ಬಿಟ್ಟಿದ್ದು ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಮಾತ್ರ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇನೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹಾಸನ ದೇವೇಗೌಡರ ಕುಟುಂಬದಲ್ಲಿ ಬಿರುಕಿಗೆ ಕಾರಣವಾಗಿದೆ.



