ಹಾಸನದ ಕೆಲವರಿದ್ದಾರೆ. ಬುದ್ದಿಜೀವಿಗಳಿದ್ದಾರೆ. ಅವರೆಲ್ಲ ಶಕುನಿಗಳಂತೆ ಕೆಲಸ ಮಾಡುತ್ತಿದ್ದಾರೆ. ಮನೆ ಹಾಳು ಮಾಡುವುದೇ ಅವರ ಕೆಲಸ ಎಂದಿರುವ ಕುಮಾರಸ್ವಾಮಿ ಹಾಸನ ಟಿಕೆಟ್ ಜಂಜಾಟದಿಂದ ಬೇಸತ್ತು ಹೋಗಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ. ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್`ಗಾಗಿ ಈ ಮಟ್ಟಿಗಿನ ಹೋರಾಟ ಸಾಮಾನ್ಯ. ಆದರೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್`ನಲ್ಲಿ ಟಿಕೆಟ್`ಗಾಗಿ ಈ ರೀತಿಯ ಹೋರಾಟ ನಡೆಯುತ್ತಿರುವುದು ಇದೇ ಮೊದಲು. ಮೊದಲೆಲ್ಲ ಹೀಗಿರಲಿಲ್ಲ. ದೇವೇಗೌಡರೋ.. ಕುಮಾರಸ್ವಾಮಿಯೋ.. ಅಥವಾ ರೇವಣ್ಣನೋ.. ಒಮ್ಮೆ ಮಾತು ಕೊಟ್ಟರೆ ಮುಗಿದು ಹೋಯಿತು ಎಂಬಂತ ವಾತಾವರಣ ಇತ್ತು. ಆದರೆ ಈಗ ಅದೇ ರೇವಣ್ಣ..ಕುಮಾರಸ್ವಾಮಿ ಮತ್ತು ದೇವೇಗೌಡರ ಮಧ್ಯೆ ಹಾಸನ ಕ್ಷೇತ್ರ ಕಗ್ಗಂಟಾಗಿ ಪರಿಣಮಿಸಿದೆ.
ಹಾಸನದಲ್ಲಿ ಪಕ್ಷದ ಸಾಮಾನ್ಯ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಿಕೊಂಡು ಬರುವುದಾಗಿ ಕುಮಾರಸ್ವಾಮಿ ಪದೇ ಪದೇ ಹೇಳುತ್ತಿದ್ದಾರೆ. ಇದು ರೇವಣ್ಣ ಕುಟುಂಬದ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯವನ್ನು ದೇವೇಗೌಡರ ನಿರ್ಧಾರಕ್ಕೆ ಬಿಡಲಾಗಿತ್ತು. ಆದರೆ ವಿವಾದ ಇನ್ನೂ ಬಗೆಹರಿದಿಲ್ಲ. 15 ವರ್ಷಗಳಿಂದ ಹಲವು ಸಂಗತಿಗಳನ್ನು ನೋವುಗಳನ್ನು ನುಂಗಿಕೊಂಡಿದ್ದೇನೆ. ಹಗಲು ರಾತ್ರಿ ಹೋರಾಡುತ್ತಿದ್ದೇನೆ. ಕಳೆದ ನಾಲ್ಕೂವರೆ ತಿಂಗಳಿನಿಂದ ದಿನಕ್ಕೆ 17 ಗಂಟೆ ಕೆಲಸ ಮಾಡುತ್ತಿದ್ದೇನೆ ಇಂತಹ ಸಂದರ್ಭದಲ್ಲಿ ನನ್ನ ಗುರಿಗೆ ಅಡ್ಡಗಾಲು ಹಾಕಲು ಕೆಲವರು ಈ ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಅನೇಕ ಸಂಗತಿಗಳನ್ನು ಹೊರಗಡೆ ಹೇಳಿಕೊಳ್ಳಲು ಆಗುತ್ತಿಲ್ಲ. ಈಗ ಆಗುತ್ತಿರುವ ಅನಾಹುತಗಳ ಅರಿವು ನನಗಿದೆ. ತಪ್ಪುಗಳನ್ನು ಮಾಡದಿದ್ದರೂ ನಾನು ಆ ತಪ್ಪುಗಳನ್ನು ನನ್ನ ತಲೆ ಮೇಲೆ ಹೊತ್ತುಕೊಳ್ಳಬೇಕಾಗಿದೆ ಎಂದಿದ್ದಾರೆ ಕುಮಾರಸ್ವಾಮಿ.
ಬ್ಲಾಕ್ ಮೇಲ್ ತಂತ್ರಕ್ಕೆ ಬಗ್ಗುವುದಿಲ್ಲ. ಸಾಮಾನ್ಯ ಕಾರ್ಯಕರ್ತನಿಗೇ ಟಿಕೆಟ್. ನಮ್ಮ ಕುಟುಂಬದಿಂದ ಇನ್ಯಾರೂ ಸ್ಪರ್ಧೆ ಮಾಡಲ್ಲ ಎಂದಿರುವ ಕುಮಾರಸ್ವಾಮಿ, ರೇವಣ್ಣ ನನ್ನ ಬಳಿ ಇದುವರೆಗೆ ಮಾತನಾಡಿಲ್ಲ. ರೇವಣ್ಣನವರನ್ನು ಸಮಾಧಾನಪಡಿಸುವ ಓಲೈಸುವ ಶಕ್ತಿ ದೇವೇಗೌಡರಿಗೂ ಇಲ್ಲ ಎನ್ನುವ ಮೂಲಕ ಬೇರೆಯದೇ ಮೆಸೇಜ್ ಕೊಟ್ಟಿದ್ದಾರೆ ಕುಮಾರಸ್ವಾಮಿ. ಕುಮಾರಸ್ವಾಮಿ ಈ ಮಾತು ಹೇಳುತ್ತಿದ್ದಂತೆಯೇ ಅತ್ತ ರೇವಣ್ಣ ದೇವೇಗೌಡರ ಮನೆಗೆ ದೌಡಾಯಿಸಿದ್ದು ಸ್ಪೆಷಲ್ ಆಗಿತ್ತು.
ಮಾತುಕತೆ ನಡೆಸಿ ಬಂದ ರೇವಣ್ಣನವರ ಮುಖದಲ್ಲಿ ಗೆಲುವಿನ ನಗುವಿತ್ತು. ಇತ್ತೀಚೆಗೆ ಭವಾನಿಗೆ ಟಿಕೆಟ್ ಕೊಡಲಿಲ್ಲವಾದರೆ, ನನಗೂ ಟಿಕೆಟ್ ಬೇಡ ಎಂದು ಹೇಳಿದ್ದಾರಂತೆ.. ಪಕ್ಷೇತರರಾಗಿ ನಿಲ್ತಾರಂತೆ.. ಎಂಬೆಲ್ಲ ಮಾತುಗಳಿಗೆ ರಿಯಾಕ್ಷನ್ ಕೊಟ್ಟ ರೇವಣ್ಣ ನಾನೆಲ್ಲ ಹಾಗೆ ಹೇಳಿದ್ದೆ. ನಾನೆಂದಾದರೂ ಆ ಮಾತು ಹೇಳಿದ್ದೀನಾ.. ಎಂದರಷ್ಟೇ ಅಲ್ಲ, ದೇವೇಗೌಡರ ಕುಟುಂಬವನ್ನು ಒಡೆಯುವ ತಂತ್ರಗಾರಿಕೆ ಯಶಸ್ವಿಯಾಗಲ್ಲ. ನಾವು ಅಣ್ಣ-ತಮ್ಮಂದಿರು ಯಾವತ್ತಿಗೂ ಒಟ್ಟಾಗಿಯೇ ಇರುತ್ತೇವೆ ಎಂದಿದ್ದಾರೆ ರೇವಣ್ಣ.
ಕುಮಾಸ್ವಾಮಿ ಹಾಟ್ ಹಾಟ್ ಆಗಿದ್ದರೆ, ರೇವಣ್ಣ ಕೂಲ್ ಕೂಲ್ ಆಗಿದ್ದಾರೆ. ಆದರೆ ಹಾಸನ ಟಿಕೆಟ್ ಯಾರಿಗೆ ಅನ್ನೋ ಸಸ್ಪೆನ್ಸ್ ಮಾತ್ರ ಹಾಗೆಯೇ ಉಳ್ಕೊಂಡಿದೆ.



