ಗುರುವಾರ ನಡೆಯಬೇಕಿದ್ದ ಕ್ಯಾಬಿನೆಟ್ ಮೀಟಿಂಗ್ ಶುಕ್ರವಾರಕ್ಕೆ ಶಿಫ್ಟ್ ಆಗಿದೆ. ಅಲ್ಲಿಗೆ ಗ್ಯಾರಂಟಿ ಘೋಷಣೆಯೂ ಶುಕ್ರವಾರಕ್ಕೆ ಶಿಫ್ಟ್ ಆಗಿದೆ. ಪಂಚ ಗ್ಯಾರಂಟಿ’ ಯೋಜನೆಗಳ ಪೈಕಿ ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮೂರು ಅಥವಾ ನಾಲ್ಕು ಗ್ಯಾರಂಟಿ ಯೋಜನೆಗಳ ಅಧಿಕೃತ ಚಾಲನೆಯ ಘೋಷಣೆ ಹೊರಬೀಳಲಿದೆ. ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯುವ ನಿಧಿ ಯೋಜನೆ ತುಸು ವಿಳಂಬವಾಗುವ ಸಾಧ್ಯತೆಯಿದೆ. 4 ಗ್ಯಾರಂಟಿ ಭಾಗ್ಯಗಳ ಬಗ್ಗೆ ಈಗಾಗಲೇ ರೂಪುರೇಷೆ, ನೀತಿನಿಯಮಾವಳಿಗಳ ರೂಪುರೇಷೆ ಫಿಕ್ಸ್ ಆಗಿದೆ. ಷರತ್ತುಗಳ ಪಟ್ಟಿಯೂ ತಯಾರಾಗಿದೆ. ಕೆಲವೊಂದು ಗೊಂದಲಗಳಿಗೆ ಗುರುವಾರ ಪರಿಹಾರ ಕಂಡುಕೊಳ್ಳುವ ಭರವಸೆಯಿದೆ. ಆದರೆ, ಯುವ ನಿಧಿ ಯೋಜನೆ ವಿಚಾರದಲ್ಲಿ ಗೊಂದಲ ಹಾಗೂ ಸವಾಲುಗಳು ಹೆಚ್ಚಿರುವ ಕಾರಣ ಅದು ಮಾತ್ರ ತುಸು ವಿಳಂಬವಾಗುವ ಸಾಧ್ಯತೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಎಲ್ಲ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ : ರಾಜ್ಯದ ಎಲ್ಲ ಬಸ್ಸುಗಳಲ್ಲಿ ಉಚಿತ ಪ್ರಯಾಣ. ಆದರೆ ಇದು ಕೆಂಪು ಬಸ್ಸುಗಳಿಗೆ ಮಾತ್ರ ಅನ್ವಯ. ಎಸಿ ಬಸ್ಸುಗಳಲ್ಲಿ ಉಚಿತ ಸ್ಕೀಂ ಇಲ್ಲ. ಐರಾವತ, ಎ.ಸಿ., ಎಸಿ-ಸ್ಲೀಪರ್ ಬಸ್ಸುಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಇರುವುದಿಲ್ಲ. ರಾಜ್ಯವ್ಯಾಪಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕೆ ಅಥವಾ ವಾಸಸ್ಥಳದಿಂದ 60 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ನೀಡಬೇಕೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಬೇಕಿದೆ. ಈ ವೇಳೆ ರಾಜ್ಯಾದ್ಯಂತ ಉಚಿತ ಪ್ರಯಾಣದ ಭರವಸೆ ನೀಡಿರುವುದರಿಂದ ಹಾಗೂ ಹೆಚ್ಚು ಹೊರೆ ಬೀಳದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಉಚಿತ ಪ್ರಯಾಣ ಕಲ್ಪಿಸುವಂತೆ ಸಚಿವರು ಸಲಹೆ ನೀಡಿದ್ದಾರೆ. ಅಧಿಕಾರಿಗಳ ಕಡೆಯಿಂದ ಇದನ್ನು 60 ಕಿ.ಮೀ.ಗೆ ಸೀಮಿತಗೊಳಿಸುವುದು ಉತ್ತಮ ಎಂಬ ಸಲಹೆ ಬಂದಿದೆ.
ಗೃಹಜ್ಯೋತಿ.. ರೂಲ್ಸು ಗೊತ್ತಿರಲಿ : ಗೃಹ ಜ್ಯೋತಿ ನೀಡಿಕೆ ಹೇಗೆಂದರೆ ಮೊದಲು ಬಿಲ್ ಪಾವತಿ ಮಾಡಬೇಕು. ಹಾಗೆ ಪಾವತಿ ಮಾಡಿದ ಬಿಲ್`ನ್ನು ಸರ್ಕಾರ ರೀಫಂಡ್ ಮಾಡುತ್ತದೆ. ಬಿಲ್ ಕಟ್ಟುವವರು ತಮ್ಮ ಅಕೌಂಟ್‍ನ್ನು ಸರ್ಕಾರಕ್ಕೆ ಕೊಟ್ಟರೆ, ಸರ್ಕಾರ ಆ ಮೊತ್ತವನ್ನು ರೀ-ಫಂಡ್ ಮಾಡುತ್ತದೆ. ಜತೆಗೆ ಉಚಿತ ವಿದ್ಯುತ್ ಅಗತ್ಯವಿಲ್ಲದ ಶ್ರೀಮಂತರು ಉಚಿತ ಕೊಡುಗೆಯನ್ನು ಬಡವರ ಅನುಕೂಲಕ್ಕಾಗಿ ಬಿಟ್ಟುಕೊಡಬಹುದು (ಗಿವ್ ಅವೇ) ಎಂದು ಹೇಳುವ ಸಾಧ್ಯತೆಯಿದೆ.
ಅನ್ನ ಭಾಗ್ಯ : ಅನ್ನಭಾಗ್ಯ ಅಕ್ಕಿ ಯೋಜನೆಯಡಿ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಘೋಷಿಸಲಾಗಿದೆ. ಮಾಸಿಕ 2.17 ಲಕ್ಷ ಟನ್ ಹೆಚ್ಚುವರಿ ಅಕ್ಕಿ ಅಗತ್ಯ ಬೀಳಲಿದೆ. ಇಷ್ಟುಪ್ರಮಾಣದ ಹೆಚ್ಚುವರಿ ಅಕ್ಕಿ ಕೇಂದ್ರದಿಂದ ಪಡೆಯುವುದು ಸಮಸ್ಯೆಯಾಗಬಹುದು. ಹೀಗಾಗಿ ಅಕ್ಕಿ ಅಥವಾ ರಾಗಿ, ಜೋಳ ಹಾಗೂ ಗೋಧಿಯನ್ನೂ ಆಯ್ಕೆಯಾಗಿ ವಿತರಿಸಲು ನಿರ್ಧರಿಸಲಾಗಿದೆ. ಕೇಂದ್ರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲವಾದ್ದರಿಂದ ವಿಳಂಬವಾಗಬಹುದು. ಅದಕ್ಕೆ ಸರ್ಕಾರ ರಾಜ್ಯದಲ್ಲಿಯೇ ಟೆಂಡರ್ ಕರೆದು ಅಕ್ಕಿ ಪೂರೈಕೆ ಮಾಡಬಹುದು. ಯೋಜನೆ ಜಾರಿಗೆ ಹೆಚ್ಚು ತೊಂದರೆಗಳಿಲ್ಲ.
ಗೃಹ ಲಕ್ಷ್ಮಿಯದ್ದೇ ಗೊಂದಲ : ಅತ್ತೆ-ಸೊಸೆ ಜಗಳ ಶುರುವಾಗಿದ್ದೇ ತಡ, ಈ ಕೆಲಸಕ್ಕೆ ಸರ್ಕಾರ ಕೈ ಹಾಕುವುದು ಬೇಡ. ಅವರೇ ಅರ್ಜಿ ಹಾಕಿಕೊಳ್ಳಲಿ ಎಂಬ ತೀರ್ಮಾನಕ್ಕೆ ಬರಲಾಗಿದೆ. ಇನ್ನು ಈ ಯೋಜನೆ ಎಪಿಎಲ್ ಹಾಗೂ ಬಿಪಿಎಲ್ ಎಲ್ಲರಿಗೂ ನೀಡಬೇಕೆ ಅಥವಾ ಬಿಪಿಎಲ್ ಕುಟುಂಬಗಳಿಗೆ ಸೀಮಿತಗೊಳಿಸಬೇಕೆ ಎಂಬ ಗೊಂದಲ ಮುಂದುವರೆದಿದೆ.
ಒಟ್ಟಿನಲ್ಲಿ ಗೊಂದಲಗಳಂತೂ ಮಿತಿಯಿಲ್ಲದೆ ಮುಂದುವರೆಯುತ್ತಿವೆ. ಆದರೆ ಜಾರಿ ಮಾಡೋದು ಶತಃಸಿದ್ಧ ಎಂದು ಸಿದ್ದರಾಮಯ್ಯ ಘೋಷಿಸಿಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾತಿನಲ್ಲಿ ವಿಶ್ವಾಸ ಇಡುವುದೇ ಆದರೆ, ಶುಕ್ರವಾರ ಕರ್ನಾಟಕದವರ ಪಾಲಿಗೆ ಶುಕ್ರದೆಸೆ ಶುರುವಾಗಲಿದೆ.



