ಗೃಹಜ್ಯೋತಿಗೆ 13 ಸಾವಿರ ಕೋಟಿ, ಶಕ್ತಿ ಯೋಜನೆ, ಅನ್ನಭಾಗ್ಯ, ಯುವನಿಧಿ ಹಾಗೂ ಗೃಹ ಲಕ್ಷ್ಮಿಯ ಲೆಕ್ಕಾಚಾರ ನಡೆಯುತ್ತಿರುವಂತೆಯೇ ಅನುದಾನದ ಲಭ್ಯತೆಯ ಬಗ್ಗೆಯೂ ವಾದ ಕೇಳಿ ಬರುತ್ತಿದೆ. ಒಟ್ಟಾರೆ ಸರ್ಕಾರದ ಅಧಿಕೃತ ನಿರೀಕ್ಷೆಯೇ 59 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಹೀಗಾದರೆ ಅನುದಾನ, ಸಂಪನ್ಮೂಲದ ಸೇರ್ಪಡೆ ಹೇಗೆ..?
ಈಗಾಗಲೇ ವಿದ್ಯುತ್ ದರ ಏರಿಕೆಯಾಗಿದೆ. ನಿಗದಿತ ಶುಲ್ಕ ಹಾಗೂ ವಿದ್ಯುತ್ ದರವನ್ನು ಏರಿಸಿ ಹೊಸ ದರ ನಿಗದಿ ಮಾಡಲಾಗಿದೆ.
ಇನ್ನು ಮದ್ಯದ ಮೇಲಿನ ಶುಲ್ಕವನ್ನು ಶೇ.10ರಿಂದ ಶೇ.20ಕ್ಕೆ ಏರಿಕೆ ಮಾಡುವ ಪ್ರಸ್ತಾಪವೂ ಇದೆ. ಸುಂಕ ಹೆಚ್ಚಳವಾದರೆ ಪ್ರತೀ ಬಾಟಲ್ ದರ 10ರಿಂದ 20 ರೂ. ಹೆಚ್ಚುವ ಸಾಧ್ಯತೆ ಇದೆ. ಬಡ್‍ವೈಸರ್ ಬಿಯರ್ ದರ 180ರೂ.ನಿಂದ 220ಕ್ಕೆ, ಯುಬಿ ಬಿಯರ್ ದರ 125-135 ರೂ.ಗೆ, ಸ್ಟ್ರಾಂಗ್ 130-140 ರೂ. ಕಿಂಗ್ ಫಿಷರ್ 160-170 ರೂ. ಏರಿಕೆಯಾಗುವ ಸಾಧ್ಯತೆ ಇದೆ.
ಸದ್ಯಕ್ಕೆ ಕರ್ನಾಟಕದಲ್ಲಿ ಬೆಲೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ವಿಪರೀತವಾಗಿದೆ. ಹೀಗಾದರೆ ಮಾರಾಟ ಕುಸಿಯಬಹುದು. ಸರ್ಕಾರ ನಮ್ಮ ಜೊತೆಯಂತೂ ಮಾತನಾಡಿಲ್ಲ ಎಂದಿದ್ದಾರೆ ಅಸೋಸಿಯೇಷನ್ ಅಧ್ಯಕ್ಷ ಎಸ್.ಗುರುಸ್ವಾಮಿ.
ಇನ್ನು ಪ್ರತಿ ವರ್ಷವೂ ನೀರಿನ ಬಿಲ್ ಏರಿಕೆ ಮಾಡುವಂತೆ ಜಲಮಂಡಳಿಗಳು ಪ್ರಸ್ತಾವನೆ ಸಲ್ಲಿಸಿವೆ. 10 ವರ್ಷಗಳ ನಂತರ ಬೆಲೆ ಏರಿಕೆ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳೊದಾಗಿ ಡಿಕೆ ಶಿವಕುಮಾರ್ ಕೂಡಾ ಸುಳಿವು ಕೊಟ್ಟಿದ್ದಾರೆ.
ಕೆಎಂಎಫ್ ಹಾಲಿನ ದರವನ್ನೂ ಲೀಟರಿಗೆ 5 ರೂ.ಗಳಷ್ಟು ಏರಿಕೆ ಮಾಡುವಂತೆ ಹಾಲಿನ ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಲಿವೆ. ಹಾಲಿನ ದರ ಪರಿಷ್ಕರಣೆ ಮಾಡುವಂತೆ ಪಟ್ಟು ಹಿಡಿದಿವೆ. ಇತ್ತೀಚೆಗೆ ರೈತರಿಗೆ ನೀಡುವ ಹಾಲಿನ ದರವನ್ನು ಇಳಿಸಿದ್ದಕ್ಕೆ ಸರ್ಕಾರ ಆಕ್ಷೇಪಣೆ ಸೂಚಿಸಿ, ರೈತರಿಗೆ ಕೊಡುವ ಹಾಲಿನ ದರ ಕಡಿಮೆ ಮಾಡದಂತೆ ಸೂಚನೆ ಕೊಟ್ಟಿತ್ತು.
ಇನ್ನು ವಿಧಾನಸೌಧದ ಪಡಸಾಲೆಗಳಲ್ಲಿ ಪೆಟ್ರೋಲ್/ಡೀಸೆಲ್ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆ ಚರ್ಚೆಯಾಗುತ್ತಿದೆಯಾದರೂ, ಈ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಸಚಿವರು ಒಲವು ಹೊಂದಿಲ್ಲ ಎನ್ನಲಾಗಿದೆ. ಪೆಟ್ರೋಲ್/ಡೀಸೆಲ್ ಸುಂಕ ಹೆಚ್ಚಿಸಿದರೆ, ಇದುವರೆಗಿನ ಗ್ಯಾರಂಟಿ ಭಾಗ್ಯಗಳಲ್ಲಿ ಬಂದಿದ್ದ ಶಕ್ತಿಯೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಕೊಚ್ಚಿಹೋಗಲಿದೆ ಎನ್ನುವ ಆತಂಕವೇ ಇದಕ್ಕೆಲ್ಲ ಕಾರಣ.



