ಫ್ರೀ..ಫ್ರೀ..ಫ್ರೀ.. ನಾವು ಅಧಿಕಾರಕ್ಕೆ ಬಂದ ಮರುಕ್ಷಣದಿಂದಲೇ 5 ಗ್ಯಾರಂಟಿ ಯೋಜನೆ ಜಾರಿ ಮಾಡ್ತೇವೆ ಎಂದು ಘೋಷಿಸಿಯೇ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ಸಿಗೆ, ಆ ಘೋಷಣೆಗಳನ್ನು ಜಾರಿ ಮಾಡೋಕೆ ಆಗಿಲ್ಲ. ಆದರೆ ಜನ ಮರೆತಿಲ್ಲ. ಮರುಕ್ಷಣದಿಂದಲೇ ಬೆನ್ನು ಹತ್ತಿದ್ದಾರೆ. ವಿದ್ಯುತ್ ಬಿಲ್ ಕಲೆಕ್ಷನ್`ಗೆ ಹೋಗುವ ಬಿಲ್ ರೀಡುಗಳಿಗೆ ಮನೆ ಮನೆಗಳಲ್ಲಿ ಮೀಟರ್ ನೋಡುವುದಕ್ಕೆ ಬಿಡುತ್ತಿಲ್ಲ. ಊರಿಗೇ ಬರಬೇಡಿ ಎನ್ನುತ್ತಿದ್ದಾರೆ. ಹಠಕ್ಕೆ ಬಿದ್ದು ಹೋದವರಿಗೆ ಏಟೂ ಬಿದ್ದಿವೆ. ಮೀಟರ್ ರೀಡಿಂಗ್ ಮಾಡುವುದಕ್ಕೆ ಹೋದರೆ ಹಳ್ಳಿಗರ ವಿರೋಧ. ಮಾಡದೇ ಹೋದರೆ ಮೇಲಧಿಕಾರಿಗಳ ಬೈಗುಳ. ಇದು ಕಂಡಕ್ಟರುಗಳನ್ನೂ ಬಿಟ್ಟಿಲ್ಲ. ಬಸ್ಸುಗಳಲ್ಲಿ ಮಹಿಳೆಯರು ಟಿಕೆಟ್ ತಗೊಳ್ಳೋಕೆ ಜಗಳ ಮಾಡ್ತಿದ್ದಾರೆ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಎಂಬ ಕಾಂಗ್ರೆಸ್ ಭರವಸೆ ಉಲ್ಲೇಖಿಸಿ ರಾಜ್ಯದ ಕೆಲವೆಡೆ ಮಹಿಳೆಯರು ಕೆಎಸ್ಆರ್ಟಿಸಿ ಬಸ್ಗಳ ನಿರ್ವಾಹಕರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿರುವುದರಿಂದ ಸಹಜವಾಗಿಯೇ ಮಹಿಳೆಯರು ಕೂಡಲೇ ಈ ಸೌಲಭ್ಯವನ್ನು ಬಯಸುತ್ತಿದ್ದಾರೆ.
ಇಂತಹ ಪ್ರಕರಣಗಳು ಹೆಚ್ಚದಂತೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಟಿಕೆಟ್ ರಹಿತ ಪ್ರಯಾಣದ ಭರವಸೆಯನ್ನು ಕೂಡಲೇ ಜಾರಿಗೊಳಿಸುವಂತೆ ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟ ಒತ್ತಾಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್ ಪತ್ರ ಬರೆದಿದ್ದಾರೆ.
ನೌಕರರ ಒಕ್ಕೂಟದವರು ಹೇಳುವುದು ಇಷ್ಟೆ, ಚುನಾವಣೆ ಪೂರ್ವದಲ್ಲಿ ಮಹಿಳೆಯರಿಗೆ ಕಾಂಗ್ರೆಸ್ ಉಚಿತ ಪ್ರಯಾಣ ಭರವಸೆ ನೀಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಮಹಿಳೆಯರು ಈ ಸೌಲಭ್ಯ ಬಯಸುತ್ತಿದ್ದಾರೆ. ಹಲವೆಡೆ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣಕ್ಕೆ ನಿರ್ವಾಹಕರಿಗೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಬಸ್ ಪ್ರಯಾಣ ಸಂದರ್ಭ ಸಿಬ್ಬಂದಿ, ಪ್ರಯಾಣಿಕರ ನಡುವೆ ವಾಗ್ವಾದ ನಡೆಯುತ್ತಿವೆ. ಇದನ್ನು ತಪ್ಪಿಸಲು ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡುವ ವ್ಯವಸ್ಥೆಯನ್ನು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕು. ಮಹಿಳೆಯರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ತೀರ್ಮಾನದಿಂದ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆಗುವ ಆರ್ಥಿಕ ಹೊರೆಯನ್ನು ಸೂಕ್ತ ಅಂದಾಜು ಮಾಡಿ ನಿಗಮಗಳಿಗೆ ವೆಚ್ಚದ ಮುಂಗಡವನ್ನು ಮಂಜೂರು ಮಾಡಬೇಕು ಅನ್ನೋದು ಒಕ್ಕೂಟದ ಮನವಿ.
ಅಡ್ವಾನ್ಸ್ ಕೇಳುವುದಕ್ಕೂ ಕಾರಣ ಇದೆ. ಜನರಿಗೆ ಸರ್ಕಾರ ಉಚಿತವಾಗಿಯೇ ಎಲ್ಲವನ್ನೂ ಕೊಡಬಹುದು. ಆದರೆ ಬಸ್ಸುಗಳಿಗೆ ಡೀಸೆಲ್, ರಿಪೇರಿ, ಡ್ರೈವರ್/ಕಂಡಕ್ಟರುಗಳ ಸಂಬಳ ಉಚಿತ ಅಲ್ಲವಲ್ಲ. ಅದಕ್ಕಾಗಿಯೇ ಅಡ್ವಾನ್ಸ್ ಕೇಳುತ್ತಿದ್ದಾರೆ. ಇತ್ತ ಈಗಾಗಲೇ ಜೆಡಿಎಸ್, ಬಿಜೆಪಿ ಆಕ್ರೋಶ ವ್ಯಕ್ತಪಡಿಸಿವೆ. ಹೇಳಿದಂತೆ ಕೊಡಬೇಕು ಎಂದು ಆಗ್ರಹಿಸುತ್ತಿವೆ. ಸರ್ಕಾರ ತಾತ್ವಿಕ ಯೋಜನೆಗೆ ಸಹಿ ಹಾಕಿದ್ದು ಬಿಟ್ಟರೆ, ಅಧಿಕೃತ ಜಾರಿಗೆ ಇದೂವರೆಗೆ ಯಾವ ಹೆಜ್ಜೆಯÀ್ನೂ ಇಟ್ಟಿಲ್ಲ. ವರದಿ ಕೊಡಿ ಎಂದು ಅಧಿಕಾರಿಗಳಿಗೆ ಹೇಳಿದೆಯಾದರೂ, ಇನ್ನೂ ವರದಿಯೂ ಸಿಕ್ಕಂತಿಲ್ಲ.



