ರಾಜ್ಯ ಕಾಂಗ್ರೆಸ್ ಸರ್ಕಾರದ ಮತ್ತೊಂದು ಮಹತ್ವದ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೂ ಮಂಗಳವಾರ ಅಧಿಕೃತ ಆದೇಶ ಪ್ರಕಟವಾಗಿದೆ. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಾಗಲಿ ಅಥವಾ ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡಲಾಗುತ್ತದೆ. . ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಈಗಾಗಲೇ ಪಾವತಿಯಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲಿ ಮಾಡುವುದು ಮತ್ತು ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ಯಾರಿಗೆಲ್ಲ ಸಿಗಲಿದೆ ಗೃಹಲಕ್ಷ್ಮಿ? ಯಾರಿಗೆ ಸಿಗಲ್ಲ..?
ಕುಟುಂಬದ ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ ಜಿಎಸ್ಟಿ ಮರುಪಾವತಿ ಪಡೆಯುವವರಾಗಿದ್ದಲ್ಲಿ ಅಂತಹವರಿಗೆ ಯೋಜನೆಯು ಅನ್ವಯವಾಗುವುದಿಲ್ಲ.
ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡುಗಳಲ್ಲಿ ಹೆಸರು ನಮೂದಾಗಿರುವ ಮನೆಯ ಯಜಮಾನಿಯು 2000 ರು. ಸಹಾಯಧನ ನೀಡುವ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಯಾಗಬಹುದು.
ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರು ಇದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಯೋಜನೆ ಪಡೆಯಲು ಫಲಾನುಭವಿಯು ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ಗಳನ್ನು ಜೋಡಣೆ ಮಾಡಬೇಕು.
ಇಂತಹ ಫಲಾನುಭವಿಗಳು ಸುಳ್ಳು ಮಾಹಿತಿ ನೀಡಿ ಯೋಜನೆಯ ಪ್ರಯೋಜನ ಪಡೆದರೆ ಅವರಿಂದ ಭವಿಷ್ಯದಲ್ಲಿ ಮಾಸಾಶನದ ಮೊತ್ತವನ್ನು ವಸೂಲಿ ಮಾಡಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹ ಫಲಾನುಭವಿಗಳಾಗಿರುತ್ತಾರೆ.



