ಎಲ್ಲ ಅಭಿಮಾನಿಗಳು ನನ್ನ ಮೆಚ್ಚಿನ ನಟನೇ ಗ್ರೇಟು. ನಮ್ಮ ನಟನೊಬ್ಬನೇ ದೇವರು ಎಂದು ಬೊಬ್ಬೆ ಹೊಡೆಯುತ್ತಿರುವಾಗ, ಬೀದಿಗಳಲ್ಲಿ ನಿಂತು ಗಲಾಟೆ ಮಾಡುತ್ತಿರುವಾಗ ರಾಘವೇಂದ್ರ ರಾಜ್ ಕುಮಾರ್ ಹೇಳಿದ ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೇವರು ನಮಗೆ ಕೋಟ್ಯಂತರ ಅಭಿಮಾನಿಗಳನ್ನು ಕೊಟ್ಟಿದ್ದಾನೆ. ನಮ್ಮ ಪ್ರತಿಭೆ ನೋಡಿ ಅಷ್ಟೋಂದು ಅಭಿಮಾನಿಗಳನ್ನು ಕೊಟ್ಟಿದ್ದಾನೆ ಎಂದರೆ ಅದು ತಪ್ಪು. ಇಷ್ಟು ಅಭಿಮಾನಿಗಳನ್ನು ಇವರಿಗೆ ಕೊಟ್ಟರೆ ಒಳ್ಳೆಯ ದಾರಿಯಲ್ಲಿ ಅವರನ್ನು ನಡೆಸುತ್ತಾನೆ ಎಂಬ ಕಾರಣಕ್ಕೆ ದೇವರು ನಮಗೆ ಇಷ್ಟೋಂದು ಅಭಿಮಾನಿಗಳನ್ನು ಕೊಟ್ಟಿದ್ದಾನೆ ಎಂಬುದು ನಮ್ಮ ನಂಬಿಕೆ. ಈಗಲೂ ನಾವು, ನಮ್ಮ ಸಿನಿಮಾ ಬೆಳೆಸಿ, ನಮ್ಮ ಸ್ಟಾರ್ ಕಟ್ಟಿ, ಮಕ್ಕಳನ್ನು ಬೆಳೆಸಿ ಎಂದರೆ ಸ್ವಾರ್ಥವಾಗುತ್ತೆ. ನಿಮ್ಮೆಲ್ಲರೊಟ್ಟಿಗೆ ಒಳ್ಳೆಯ ರಾಜ್ಯವನ್ನು ಕಟ್ಟಬೇಕು. ಅದೇ ಕಾರಣಕ್ಕೆ ದೇವರು ನಮಗೆ ಅಭಿಮಾನಿಗಳನ್ನು ನೀಡಿದ್ದಾನೆ ಎಂದಿದ್ದಾರೆ ರಾಘಣ್ಣ.

ಡಾ. ಪುನೀತ್ ರಾಜ್ ಕುಮಾರ್ ರಸ್ತೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಇದನ್ನು ಸಂಭ್ರಮಿಸಬೇಕೋ.. ಬೇಡವೋ ತಿಳಿಯದಾಗಿದೆ. ಅಪ್ಪಾಜಿಗೂ 46ರಲ್ಲಿ ಡಾಕ್ಟರೇಟ್ ಬಂದಿತ್ತು. ಪುನೀತ್ ಗೂ 46ನೇ ವಯಸ್ಸಿನಲ್ಲಿ ಬಂದಿದೆ. ಅಪ್ಪಾಜಿಗೆ ಡಾಕ್ಟರೇಟ್ ಬಂದಾಗ ಪುನೀತ್ 10 ತಿಂಗಳ ಮಗುವಾಗಿದ್ದ. ಅಪ್ಪು ಪವರ್‍ನ್ನ ಇಲ್ಲೇ ಬಿಟ್ಟು ಸ್ಟಾರ್ ಆಗಿ ಮೇಲೆ ಹೋದ. ನಾನೂ ಇನ್ನು ಮುಂದೆ ಅಪ್ಪು ಆಗಿಯೇ ಬದುಕುತ್ತೇನೆ. ಎಲ್ಲರೂ ಸೇರಿ ಒಂದು ಸುಂದರ ರಾಜ್ಯ ಕಟ್ಟೋಣ ಎಂದು ಭಾವುಕರಾದರು ರಾಘಣ್ಣ.
ಅಶ್ವಿನಿ ಪುನೀತ್ ರಾಜ್ ಕುಮಾರ್ ಸಭೆಯಲ್ಲಿ ಮಾತನಾಡದಿದ್ದರೂ, ಕಾರ್ಯಕ್ರಮ ಮುಗಿದ ನಂತರ ಡಾ. ಪುನೀತ್ ರಾಜ್ ಕುಮಾರ್ ರಸ್ತೆ ಲೋಕಾರ್ಪಣೆ ಮಾಡಿದಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಅಪ್ಪು ಅವರನ್ನು ನಮ್ಮ ನಡುವೆ ಸದಾ ಜೀವಂತವಾಗಿಟ್ಟಿರುವುದಕ್ಕೆ ಅಭಿಮಾನಿಗಳಿಗೆ, ರಾಜ್ಯ ಸರ್ಕಾರಕ್ಕೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗೂ ಚಿತ್ರರಂಗದ ಬಂಧುಗಳಿಗೆ ನಾನು ಎಂದೆಂದಿಗೂ ಚಿರಋಣಿ.


ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಸ್ತೆಯ ಹೆಸರನ್ನು ಲೋಕಾರ್ಪಣೆ ಮಾಡಿ ಅಪ್ಪು ಸತ್ತ ನಂತರವೂ ನಮ್ಮ ಜೊತೆಗೆ ಇದ್ದಾರೆ. ಅಪ್ಪು ಹೆಸರಿನಲ್ಲಿ ಸಮಾಧಿಯಲ್ಲಿ ಅದ್ಭುತ ಸ್ಮಾರಕವನ್ನು ಮಾಡುತ್ತೇವೆ. ಈ ಭಾಗ್ಯ ನನ್ನದು. ಅಷ್ಟೇ ಅಲ್ಲ ಕರ್ನಾಟಕ ರತ್ನ ಕೊಡುವ ಭಾಗ್ಯವೂ ನನ್ನದಾಗಿತ್ತು ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕಿರುವವನು ಸಾಧಕ. ಬೀದರ್ನ ಔರಾದ, ಚಾಮರಾಜನಗರ, ನಿಪ್ಪಾಣಿ ಎಲ್ಲ ಕಡೆ ಅಪ್ಪು ಬಗ್ಗೆ ಅದೇ ಪ್ರೀತಿ ಗಳಿಸಿದ್ದಾರೆ. ಕೋಟಿ ಹೃದಯಗಳಲ್ಲಿ ಅಪ್ಪು ಜೀವಂತವಿದ್ದಾರೆ ಎಂದರು. ಪುನೀತ್ ನಮ್ಮ ನಿಮ್ಮೆಲ್ಲರ ಅಪ್ಪು, ಅವನು ನನ್ನ ಅಪ್ಪು. ರಾಜಕುಮಾರ್ ಕುಟುಂಬದೊಂದಿಗೆ ಸುಮಾರು ನಾಲ್ಕು ದಶಕದ ಒಡನಾಟ, ಅತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರಲ್ಲಿ ಅಪ್ಪು ಒಬ್ಬರು ಎಂದು ಸ್ಮರಿಸಿದರು.
ಬಾನದಾರಿಯಲ್ಲಿ ಪುನೀತ್ ಪಯಣ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಅಭಿಷೇಕ್ ಅಂಬರೀಷ್ ಸೇರಿದಂತೆ ಚಿತ್ರರಂಗದ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



