ಡಾ.ರಾಜ್ ಕುಟುಂಬದಲ್ಲಿ ಮತ್ತೆ ರಾಜಕೀಯದ ಕಹಳೆ ಮೊಳಗುತ್ತಿದೆ. ಡಾ.ರಾಜ್ ಕುಟುಂಬ ಮತ್ತು ರಾಜಕೀಯದ ನಂಟು ಹೊಸದೇನೂ ಅಲ್ಲ. ಆದರೆ ಅದು ರಾಜ್ ಕುಟುಂಬಕ್ಕೆ ಹತ್ತಿರವಾದವರ ನೆಂಟಸ್ತಿಕೆಯಲ್ಲಿ ಮಾತ್ರವೇ ಇತ್ತು. ಸ್ವತಃ ರಾಜ್ ಕುಮಾರ್ ಅವರಾಗಲೀ, ರಾಘವೇಂದ್ರ, ಪುನೀತ್ ಸೇರಿದಂತೆ ಯಾರೊಬ್ಬರೂ ರಾಜಕೀಯಕ್ಕೆ ಹೋಗಿರಲಿಲ್ಲ. ಆದರೆ ಗೀತಾ ಶಿವರಾಜ್ ಕುಮಾರ್ ಹಾಗಲ್ಲ.
2014ರ ಲೋಕಸಭೆ ಚುನಾವಣೆಯಲ್ಲಿ ಗೀತಾ ಜೆಡಿಎಸ್`ನಿಂದ ಸ್ಪರ್ಧೆ ಮಾಡಿದ್ದರು. ದಿ.ಬಂಗಾರಪ್ಪನವರ ಪುತ್ರಿಯಾದ ಗೀತಾ ಅವರಿಗೆ 2.40,636 ಸಿಕ್ಕಿದ್ದವು. ಆದರೆ ಯಡಿಯೂರಪ್ಪ 6 ಲಕ್ಷಕ್ಕೂ ಹೆಚ್ಚು ಮತ ಪಡೆದು ಗೆದ್ದಿದ್ದರು. ಆಗ ಮಾತ್ರ ಶಿವಣ್ಣ, ಪತ್ನಿ ಗೀತಾ ಪರವಾಗಿ ಕ್ಯಾಂಪೇನ್ ಮಾಡಿದ್ದರು. ಅದನ್ನು ಬಿಟ್ಟರೆ ಶಿವಣ್ಣ ಕೂಡಾ ರಾಜಕೀಯದಿಂದ ದೂರ.
ನನ್ನ ಪತ್ನಿಗೆ ತಂದೆಯಂತೆ ರಾಜಕಾರಣಿಯಾಗುವ ಆಸೆಯಿದೆ. ಯಾಕೆ ತಡೆಯಬೇಕು? ಒಬ್ಬ ಪತಿಯಾಗಿ ಆಕೆಯ ಬೆಂಬಲಕ್ಕೆ ನಿಂತಿದ್ದೇನೆ. ಆದರೆ ರಾಜಕೀಯ ವೈಯಕ್ತಿಕವಾಗಿ ನನಗೆ ಆಗಿಬರೋದಿಲ್ಲ. ಮುಂದೆ ಗೀತಾ ರಾಜಕೀಯಕ್ಕೆ ಹೋಗುತ್ತೇನೆ ಎಂದರೆ ಖಂಡಿತಾ ಬೆಂಬಲ ಕೊಡುತ್ತೇನೆ. ಆದರೆ ಪ್ರಚಾರಕ್ಕೆ ಕಷ್ಟ ಎಂದಿದ್ದರು ಶಿವಣ್ಣ.
ರಾಜ್ ಕುಟುಂಬದವರೊಬ್ಬರು ರಾಜಕೀಯದಲ್ಲಿ ಪ್ರಚಾರ ಮಾಡುವುದನ್ನೂ ಅರಗಿಸಿಕೊಳ್ಳದ ಅಭಿಮಾನಿಗಳಿಗೆ ಒಬ್ಬ ಪತಿಯಾಗಿ ಶಿವಣ್ಣನ ನಡವಳಿಕೆಯೂ ಇಷ್ಟವಾಗಿತ್ತು. ಇದೀಗ ಗೀತಾ ಅವರ ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ. ಗೀತಾ ಅವರ ತಂದೆ ಬಂಗಾರಪ್ಪ ರಾಜ್ಯದ ಸಿಎಂ ಆಗಿದ್ದವರು. ಗೀತಾ ಅವರ ತಮ್ಮಂದಿರಲ್ಲಿ ಮಧು ಬಂಗಾರಪ್ಪ ಈಗ ಕಾಂಗ್ರೆಸ್ಸಿನಲ್ಲಿದ್ದರೆ, ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ. ಗೀತಾ ಅವರು ಮಧು ಬಂಗಾರಪ್ಪ ಪರ ಈಗಾಗಲೇ ಪ್ರಚಾರವನ್ನೂ ನಡೆಸಿದ್ದಾರೆ.



