ಪಂಜಾಬ್ ಸರ್ಕಾರ ಸತತ 2ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಪೆಟ್ರೋಲ್ ಬೆಲೆಯನ್ನು ಲೀಟರ್`ಗೆ 92 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 88 ಪೈಸೆ ಏರಿಕೆ ಮಾಡಿದೆ. ವ್ಯಾಟ್ ಏರಿಕೆಯಿಂದಾಗಿ ಸಂಗ್ರಹಿಸಲಾಗುವ ಹೆಚ್ಚುವರಿ ಹಣವನ್ನು ವಿದ್ಯುತ್ ಬಳಕೆಗೆ ಬಳಸುವುದಾಗಿ ಹೇಳಿದೆ ಪಂಜಾಬ್ ಸರ್ಕಾರ. ಇದರಿಂದಾಗಿ ಪೆಟ್ರೋಲ್ ದರ ಪಂಜಾಬ್‍ನಲ್ಲಿ ಏರಿಕೆ ಕಂಡಿದೆ. ಪೆಟ್ರೋಲ್ ಲೀಟರಿಗೆ 98.65 ರೂ.ಗೆ ಹಾಗೂ ಡೀಸೆಲ್ ಲೀಟರಿಗೆ 88.95 ರೂ.ಗೆ ಏರಿಕೆಯಾಗಿದೆ. ಈ ರೀತಿ ಹೆಚ್ಚಿಸಿರುವ ವ್ಯಾಟ್`ನಿಂದಾಗಿ ಪಂಜಾಬ್ ಸರ್ಕಾರಕ್ಕೆ 600 ಕೋಟಿ ರೂ. ಹೆಚ್ಚುವರಿ ಲಾಭ ಸಂಗ್ರಹವಾಗಲಿದೆ. ವಿಶೇಷವೆಂದರೆ ಈ ರೀತಿ ದರ ಹೆಚ್ಚಳದ ನಡುವೆಯೂ ಕೂಡಾ ಪಂಜಾಬ್‍ನ ನೆರೆ ರಾಜ್ಯಗಳಾದ ರಾಜಸ್ಥಾನ, ಹರಿಯಾಣಗಳಿಗೆ ಹೋಲಿಸಿದರೆ ಕಡಿಮೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ, ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಇದೆ. ಪಂಜಾಬ್‍ನಲ್ಲಿರೋದು ಆಮ್ ಆದ್ಮಿ ಸರ್ಕಾರ ಎನ್ನುವುದು ವಿಶೇಷ.
ಇದೇ ವೇಳೆ ಸೆಪೆಂಬರ್ 1ರಿಂದ ಪಂಜಾಬ್‍ನಲ್ಲಿ 74 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವುದಾಗಿ ಘೋಷಿಸಿದ್ದಾರೆ ಪಂಜಾಬ್ ಸಿಎಂ ಭಗವಂತ ಸಿಂಗ್ ಮಾನ್.
ಇದರ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಶುಲ್ಕವನ್ನು ಕಡಿಮೆ ಮಾಡುವ ಸೂಚನೆ ಕೊಟ್ಟಿದೆ. ಇತ್ತೀಚೆಗೆ ದರ ಇಳಿಕೆ ನಂತರ ದೇಶದ ಪೆಟ್ರೋಲಿಯಂ ಕಂಪೆನಿಗಳು ಲಾಭದ ಹಳಿಗೆ ಮರಳಿವೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೆಟ್ರೋಲ್ ಬೆಲೆ ಸುಮಾರು 5 ರೂ. ಹಾಗೂ ಡೀಸೆಲ್ ಬೆಲೆ ಸುಮಾರು 3 ರೂ. ಇಳಿಕೆಯಾಗುವ ಸಾಧ್ಯತೆ ಇದೆ.



