ದಲಿತರು ಬಿಜೆಪಿ ಕಡೆ ತಲೆ ಎತ್ತಿಯೂ ನೋಡಬಾರದು. ಬಿಜೆಪಿ ಕಡೆ ತಿರುಗಿಯೂ ನೋಡಬಾರದು. ಬಿಜೆಪಿ ಪುರೋಹಿತಶಾಹಿಗಳನ್ನು ಬೆಂಬಲಿಸುವವರ ಪಕ್ಷ. ಮನುವಾದಿಗಳ ಪಕ್ಷ. ಮೇಲ್ಜಾತಿಯವರ ಪಕ್ಷ. ಶ್ರೀಮಂತರ ಪಕ್ಷ. ಪುರೋಹಿತಶಾಹಿಗಳನ್ನು ಬೆಂಬಲಿಸುವವರು ಈ ದೇಶಕ್ಕೆ ಅಂಟಿದ ಶಾಪ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದರು. ಹೀಗಾಗಿ ಯಾರೊಬ್ಬರೂ ಬಿಜೆಪಿಗೆ ಬೆಂಬಲ ನೀಡಬಾರದು. ದಲಿತರು ಬಿಜೆಪಿ ಕಡೆಗೆ ತಿರುಗಿಯೂ ನೋಡಬೇಡಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ವಿಜಯಪುರ ನಗರ ಕ್ಷೇತ್ರದ ಮಾಜಿ ಶಾಸಕ ಮನೋಹರ್ ಐನಾಪುರ, ಕೊಳ್ಳೇಗಾಲ ಮಾಜಿ ಶಾಸಕ ನಂಜುಂಡಸ್ವಾಮಿ, ಮೈಸೂರು ಮಾಜಿ ಮೇಯರ್ ಹಾಗೂ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆಗೂಡಿ ಪಕ್ಷಕ್ಕೆ ಬರ ಮಾಡಿಕೊಂಡ ಅವರು ಬಳಿಕ ಮಾತನಾಡಿದರು.
ಬಿಜೆಪಿ ಮೇಲ್ಜಾತಿ ಹಾಗೂ ಶ್ರೀಮಂತರ ಪಕ್ಷ. ಅವರು ತಳ ಸಮುದಾಯಗಳ ಶ್ರೇಯೋಭಿವೃದ್ಧಿ, ನಾಡಿನ ಅಭಿವೃದ್ಧಿ ಬಗ್ಗೆ ಯಾವತ್ತೂ ಆಲೋಚನೆ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮ ಕಾರ್ಯಕರ್ತರ ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾರೆ. ಆ ಮೂಲಕ ರಾಜ್ಯದಲ್ಲಿ ಧರ್ಮ, ಜಾತಿ ಇಟ್ಟುಕೊಂಡು ಅಧಿಕಾರಕ್ಕೆ ಬರಬಹುದು ಎಂಬ ಹಗಲು ಕನಸು ಕಾಣುತ್ತಿದ್ದರು. ಇದೀಗ ಹಿಂದುತ್ವ ಪ್ರಯೋಗ ಕಷ್ಟಎಂಬುದು ಗೊತ್ತಾಗಿ ಲೂಟಿ ಹಣ ಹಂಚಿ ಗೆಲ್ಲಲು ಮುಂದಾಗಿದ್ದಾರೆ. ಹೀಗಾಗಿ ಅಂತಿಮ ಕ್ಷಣದವರೆಗೂ ಲೂಟಿಯಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಕಾಂಗ್ರೆಸ್ ಸೇರಿದ ನಾಯಕರು ದಲಿತ ವರ್ಗಕ್ಕೆ ಸೇರಿದ್ದವರಾದ ಕಾರಣ ಇಬ್ಬರಿಗೂ ವೇದಿಕೆಯಲ್ಲೇ ಬಿಜೆಪಿ ಕಡೆ ತಿರುಗಿಯೂ ನೋಡಬೇಡಿ ಎಂದು ತಾಕೀತು ಮಾಡಿದರು ಸಿದ್ದರಾಮಯ್ಯ. ರಾಜ್ಯದಲ್ಲಿ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿತ್ತು. ಜನ ರಾಜಕೀಯವಾಗಿ ಪ್ರಬುದ್ಧವಾಗಿದ್ದು, ಹಿಂದುತ್ವದ ಪ್ರಯೋಗ ಕಷ್ಟವಾಗುತ್ತಿದೆ. ಹೀಗಾಗಿ ಹಣದ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಟನ್ಗಟ್ಟಲೇ ಲೂಟಿ ಹೊಡೆದ ಹಣವನ್ನು ಅಕ್ರಮದಿಂದ ಸಂಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ ಸಿದ್ದರಾಮಯ್ಯ.



