ನಟ ದರ್ಶನ್ ಅವರ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳು ರೆಕಾರ್ಡ್ ಆಗಿಲ್ಲ. ಆದರೆ ನಟ ದರ್ಶನ್ ತಪ್ಪಾಗಿರುವುದು ಹೌದು ಎಂದು ಒಪ್ಪಿಕೊಂಡಿದ್ದಾರೆ. ದರ್ಶನ್ ಅವರ ಸಾಕು ನಾಯಿಗಳು ಅಮಿತಾ ಜಿಂದಾಲ್ ಎಂಬುವವರಿಗೆ ಕಚ್ಚಿ ಗಾಯಗೊಳಿಸಿದ್ದ ಕೇಸಿನಲ್ಲಿ ನಟ ದರ್ಶನ್ ಅವರು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರ ಎದುರು ವಿಚಾರಣೆ ಹಾಜರಾಗಿ, ಹೌದು, ನಮ್ಮ ಹುಡುಗರಿಂದ ತಪ್ಪಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅಮಿತಾ ಜಿಂದಾಲ್ ಅವರು ನೀಡಿದ್ದ ಕೇಸಿನಲ್ಲಿ ದರ್ಶನ್ ಎರಡನೇ ಆರೋಪಿ. ಐಪಿಸಿ ಸೆಕ್ಷನ್ 289ರಡಿ ಪ್ರಕರಣ ದಾಖಲಾಗಿದ್ದು, ಇನ್ಸ್ʻಪೆಕ್ಟರ್ ಶಿವಕುಮಾರ್ ವಿಚಾರಣೆ ನಡೆಸಿದ್ಧಾರೆ. ಎಫ್‌ಐಆರ್‌ನಲ್ಲಿ ದರ್ಶನ್ ಮನೆಯ ಸಿಬ್ಬಂದಿ ಹೇಮಂತ್ ಎ1 ಹಾಗೂ ನಟ ದರ್ಶನ್ ಎ2 ಆರೋಪಿ ಎಂದು ಉಲ್ಲೇಖಿಸಲಾಗಿತ್ತು.
ಅಕ್ಟೋಬರ್ 28ರಂದು ಆರ್ ಆರ್ ನಗರದ ದರ್ಶನ್ ನಿವಾಸದ ಪಕ್ಕದ ಖಾಲಿ ಜಾಗದಲ್ಲಿ ಅಮಿತಾ ಜಿಂದಾಲ್ ಅವರಿಗೆ ಎರಡು ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಈ ಕುರಿತು ಅಮಿತಾ ಪೊಲೀಸರಿಗೆ ದೂರು ನೀಡಿದ್ದರು.
ಘಟನೆ ನಡೆದ ವೇಳೆ ದರ್ಶನ್ ಸ್ಥಳದಲ್ಲಿಇರಲಿಲ್ಲ. ಹೀಗಾಗಿ, ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸುವ ಬಗ್ಗೆ ಮುಂದಿನ ತನಿಖೆ ವೇಳೆ ನಿರ್ಧರಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅವತ್ತು ನಾನು ಗುಜರಾತ್‌ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿದ್ದೆ. ನಮ್ಮ ಹುಡುಗರಿಂದ ತಪ್ಪಾಗಿಬಿಟ್ಟಿದೆ. ಮನೆಯ ಬಳಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಸೂಚನೆ ಕೊಟ್ಟಿದ್ದೆ. ಇನ್ನು ಮುಂದೆ ಈ ರೀತಿ ಆಗಲ್ಲ. ನಮ್ಮ ಸಿಬ್ಬಂದಿಗಳಿಗೂ ಹೇಳಿದ್ದೇನೆ ಎಂದಿರುವ ದರ್ಶನ್, ಮನೆಯ ಬಳಿ ಸಿಸಿಟಿವಿ ವರ್ಕ್ ಆಗ್ತಿರಲಿಲ್ಲ. ಘಟನೆ ಬಳಿಕ ಸಿಸಿಟಿವಿ ಮೈಂಟೇನ್ ಮಾಡುವಂತೆ ಹೇಳಿದ್ದೀನಿ ಎಂದು ಹೇಳಿದ್ದಾರೆ ಎಂದು ಎಂದು ಪೊಲೀಸ್ ಮೂಲಗಳು ಹೇಳಿವೆ.
ಅಲ್ಲಿಗೆ ಪ್ರಕರಣದಲ್ಲಿ ದರ್ಶನ್ ಅವರು ಕೇಸಿನಿಂದ ಬಚಾವ್ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪಕ್ಕೆ ಪುಷ್ಠಿಗಳು ದೊರೆತಂತಾಗಿದೆ. ಘಟನೆ ನಡೆದ ದಿನ ಪೊಲೀಸರು ಕೇಸ್ ತೆಗೆದುಕೊಳ್ಳಲು, ಎಫ್ʻಐಆರ್ ಹಾಕಲು ತಡಮಾಡಿದ್ದರು ಎಂದು ಅಮಿತಾ ಜಿಂದಾಲ್ ಆರೋಪಿಸಿದ್ದರು. ಅದಾದ ಮೇಲೆ ಅಮಿತಾ ಅವರು ಲಾಯರ್ ಎಂಬುದು ಗೊತ್ತಾಗಿತ್ತು. ಮಹಜರು ವೇಳೆಯಲ್ಲಿ ಕೂಡಾ ತಾಂತ್ರಿಕ ಕಾರಣ ನೀಡಿ ವಿಳಂಬ ಮಾಡುತ್ತಿದ್ದಾರೆ ಎಂದು ಅಮಿತಾ ಜಿಂದಾಲ್ ಆರೋಪಿಸಿದ್ದರು. ಈಗ ನೋಡಿದರೆ ಸಿಸಿಟಿವಿ ರೆಕಾರ್ಡ್ ಆಗಿಲ್ಲ ಎನ್ನುತ್ತಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ಘಟನೆ ನಡೆದ ದಿನವೇ, ದೂರು ದಾಖಲಾದ ನಂತರ ಪೊಲೀಸರು ಸಿಸಿಟಿವಿಯನ್ನು ಪರಿಶೀಲನೆ ಕೂಡಾ ನಡೆಸಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಪೊಲೀಸರು ಅಧಿಕೃತ ಮಾಹಿತಿಯನ್ನು ಇನ್ನೂ ಬಹಿರಂಗ ಮಾಡಬೇಕಿದೆ.



