ಕೋವಿಡ್ 19 ಮತ್ತೆ ಕೆರಳುತ್ತಿದೆ. ಲಾಕ್ ಡೌನ್ ಸೇರಿದಂತೆ ಮತ್ತೇನೋ ಆಗಲಿದೆ ಎಂಬ ಭಯವೇನೂ ಇಲ್ಲವಾದರೂ ಎಚ್ಚರಿಕೆಯಿಂದ ಇರಲು ಸರ್ಕಾರ ಸೂಚನೆ ಕೊಟ್ಟಿದೆ. ಅಷ್ಟೇ ಅಲ್ಲ, ಕೆಲವು ನೀತಿ ನಿಯಮಗಳನ್ನೂ ಜಾರಿ ಮಾಡಿದೆ. ಮಾಸ್ಕ್ ಕಡ್ಡಾಯ, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಹಳೆಯ ನಿಯಮಗಳನ್ನೆಲ್ಲ ಈಗ ಫಾಲೋ ಮಾಡಬೇಕಿಲ್ಲವಾದರೂ ಅಗತ್ಯ ಇರುವವರು ಮಾತ್ರ ಬಳಸಲೇಬೇಕು. ಜೊತೆಗೆ ಆಂಟಿ ಬಯೋಟಿಕ್ಸ್ ಬಳಕೆ ಬಗ್ಗೆ ಎಚ್ಚರಿಕೆ ನೀಡಿದೆ.
ಕೋವಿಡ್ ಪ್ರಕರಣಗಳಲ್ಲಿ ಆ್ಯಂಟಿ ಬಯೋಟಿಕ್ಗಳನ್ನು ವೈದ್ಯರು ಬಳಸಬಾರದು ಎಂದು ಸೂಚನೆ ನೀಡಿದೆ. ಕೋವಿಡ್ ಮೊದಲೆರಡು ಅಲೆಯ ಚಿಕಿತ್ಸೆ ವೇಳೆ ವ್ಯಾಪಕವಾಗಿ ಆ್ಯಂಟಿ ಬಯೋಟಿಕ್ಗಳನ್ನು ಬಳಸಿದ್ದ ಹಿನ್ನೆಲೆಯಲ್ಲಿ ಈ ನಿರ್ದೇಶನ ಅತ್ಯಂತ ಮಹತ್ವದ್ದಾಗಿದೆ.
ಯಾವ ಯಾವ ಅಂಟಿ ಬಯೋಟಿಕ್ಸ್ ಬೇಡ..
- ಲೊಪಿನಾವಿರ್-ರಿಟೊನಾವಿರ್
- ಹೈಡ್ರಾಕ್ಸಿಕ್ಲೋರೋಕ್ವಿನ್
- ಐವರ್ಮೆಕ್ಟಿನ್
- ಮೊಲ್ನುಪಿರಾವಿರ್
- ಫವಿಪಿರಾವಿರ್
- ಅಜಿತ್ರೋಮೈಸಿನ್
- ಡಾಕ್ಸಿಸೈಕ್ಲಿನ್ನಂತಹ ಆ್ಯಂಟಿ ಯೋಟಿಕ್ಗಳನ್ನು ವಯಸ್ಕ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಬಾರದು ಎಂದು ಹೇಳಿದೆ.
ಬ್ಯಾಕ್ಟಿರಿಯಾ ಸೋಂಕಿನ ಕುರಿತು ಚಿಕಿತ್ಸೆ ವೇಳೆ ಸಂದೇಹ ಬಂದರೆ ಮಾತ್ರ ಆ್ಯಂಟಿ ಬಯೋಟಿಕ್ಗಳನ್ನು ಕೊಡಬಹುದು. ಇಂತಹ ಸಂದರ್ಭದಲ್ಲಿ ಕೋವಿಡ್ ಜತೆ ಇನ್ನಿತರೆ ಸೋಂಕು ತಗಲುವಿಕೆಯನ್ನು ಪರಿಗಣಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಪ್ಲಾಸ್ಮಾ ಥೆರಪಿ ಕೂಡಾ ಬೇಡ :
ವೈದ್ಯರು ಪ್ಲಾಸ್ಮಾ ಥೆರಪಿಯನ್ನೂ ಬಳಕೆ ಮಾಡಬಾರದು. ಆದರೆ ಮಧ್ಯಮ ಅಂಥವಾ ಗಂಭೀರ ಪ್ರಮಾಣದಲ್ಲಿ ಸೋಂಕು ಹರಡುತ್ತಿದ್ದರೆ ರೆಮ್ಡೆಸಿವಿರ್ ಅನ್ನು ಐದು ದಿನಗಳ ಕಾಲ ನೀಡಬಹುದು. ಆದರೆ ಸೋಂಕು ಆರಂಭವಾದ 10 ದಿನದೊಳಗೆ ಇದನ್ನು ಆರಂಭಿಸಬೇಕು. ಹೆಚ್ಚುವರಿಯಾಗಿ ಆಮ್ಲಜನಕ ನೀಡಬೇಕಾದ ಹಾಗೂ ಸೋಂಕು ಹಬ್ಬುವ ಸಾಧ್ಯತೆ ಇರುವವರಿಗೆ ಮಾತ್ರ ನೀಡಬೇಕು. ಐಎಂವಿ ಅಥವಾ ಎಕ್ಮೋ ಚಿಕಿತ್ಸೆಯಲ್ಲಿರುವವರಿಗೆ ನೀಡಬಾರದು ಎಂದು ಹೇಳಿದೆ. ಐದು ದಿನಕ್ಕಿಂತ ಹೆಚ್ಚಿನ ಅವಧಿಗೆ ರೆಮ್ಡೆಸಿವಿರ್ ನೀಡಿದರೆ ಪ್ರಯೋಜನವಾಗುತ್ತದೆ ಎಂಬುದಕ್ಕೆ ಪುರಾವೆ ಇಲ್ಲ. ಹಾಗೆಯೇ ಅದನ್ನು ಆಕ್ಸಿಜನ್ ವ್ಯವಸ್ಥೆಯಲ್ಲಿಲ್ಲದವರು ಅಥವಾ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಕೊಡಬಾರದು ಎಂದು ಮಾರ್ಗಸೂಚಿ ವಿವರಿಸುತ್ತದೆ. ಮಧ್ಯಮ ಅಥವಾ ಗಂಭೀರ ಪ್ರಮಾಣದ ಸೋಂಕು ಕ್ಷಿಪ್ರವಾಗಿ ಹಬ್ಬುವ ಲಕ್ಷಣ ಕಂಡುಬಂದರೆ ಗಂಭೀರ ಸ್ವರೂಪಕ್ಕೆ ತಿರುಗಿದ ಅಥವಾ ಐಸಿಯುಗೆ ದಾಖಲಾದ 24ರಿಂದ 48 ತಾಸುಗಳಲ್ಲಿ ಟಾಸಿಲಿಜುಮಾಬ್ ನೀಡಬಹುದು ಎಂದು ಸಲಹೆ ಮಾಡಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ.



