ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನ ಕೆರೆಯಲ್ಲಿದೆ ಕಾಡಸಿದ್ದೇಶ್ವರ ಮಠ. ಈ ಮಠಕ್ಕೂ ಡಿಕೆಶಿವಯವರಿಗೂ ಅವಿನಾಭಾವ ನಂಟು. ಪ್ರೀತಿ. ಬಾಂಧವ್ಯ. ಈ ಮಠದ ಸ್ವಾಮಿಗಳು ಹೇಳಿದ್ದನ್ನು ತಲೆಯ ಮೇಲೆ ಹೊತ್ತು ಮಾಡುವ ವ್ಯಕ್ತಿ ಡಿಕೆ ಶಿವಕುಮಾರ್. ಅಂತಹ ಮಠದಲ್ಲಿ ಪ್ರಚಾರದ ನಡುವೆ ಬಿಡುವು ಮಾಡಿಕೊಂಡು, ಪತ್ನಿ ಉಷಾ ಅವರನ್ನು ದಿಢೀರನೆ ಮಠಕ್ಕೆ ಕರೆಸಿಕೊಡು ರಹಸ್ಯವಾಗಿ ಪೂಜೆ ನೆರವೇರಿಸಿದ್ದಾರೆ ಡಿಕೆ ಶಿವಕುಮಾರ್.
ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಷಡಕ್ಷರಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಆಗಮಿಸಿದ ಡಿ.ಕೆ.ಶಿವಕುಮಾರ್ ಅಲ್ಲಿಂದ ನೇರವಾಗಿ ಕಾಡಸಿದ್ದೇಶ್ವರ ಮಠಕ್ಕೆ ಹೋಗಿ ಪೂಜೆಯಲ್ಲಿ ದಂಪತಿ ಭಾಗಿಯಾದರು. ಈ ವೇಳೆ ಡಿಕೆ ಶಿವಕುಮಾರ್ ಹಾಗೂ ಪತ್ನಿ ಉಷಾ ಇಬ್ಬರನ್ನು ಹೊರೆತುಪಡಿಸಿ ಎಲ್ಲರನ್ನೂ ಹೊರಕ್ಕೆ ಕಳುಹಿಸಲಾಯಿತು. ಪಾವಗಡದ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ನಾಮಪತ್ರ ವೇಳೆ ಭಾಗಿಯಾಗಿ ಅಲ್ಲಿಂದ ತಿಪಟೂರಿಗೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ತಮ್ಮ ಪತ್ನಿಯನ್ನು ಬೆಂಗಳೂರಿನಿಂದ ಕಾರಿನಲ್ಲಿ ತಿಪಟೂರಿಗೆ ಕರೆಸಿಕೊಂಡರು. ಬಳಿಕ ತಿಪಟೂರಿನಿಂದ ಪತ್ನಿ ಜೊತೆ ಕಾಡಸಿದ್ದೇಶ್ವರ ಮಠಕ್ಕೆ ತೆರಳಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಕರಿವೃಷಭ ದೇಶಿಕೇಂದ್ರ ಶ್ರೀಗಳ ಸಮ್ಮುಖದಲ್ಲಿ ಗವಿಗುಡಿಯಲ್ಲಿ ಪೂಜೆ ಸಲ್ಲಿಸಲಾಯಿತು.


20 ವರ್ಷಗಳಿಂದ ಸತತವಾಗಿ ಮಠಕ್ಕೆ ಬರುತ್ತಿದ್ದೇನೆ. ಕಾಡಸಿದ್ದೇಶ್ವರ ಮಠಕ್ಕೆ ಪ್ರತಿಯೊಂದು ವಿಚಾರದಲ್ಲೂ ನಾನು ಭಾಗಿಯಾಗಿದ್ದೇನೆ. ಇವತ್ತು ನಾನು ನನ್ನ ಪತ್ನಿ ಮಠಕ್ಕೆ ಭೇಟಿ ಕೊಟ್ಟಿದ್ದೇವೆ. ನಮ್ಮದೊಂದು ಸಂಕಲ್ಪ, ಪ್ರಾರ್ಥನೆ ಇದ್ದು ನಮಗೆ, ರಾಜ್ಯದ ಜನಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯದಾಗಬೇಕು ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ ಎನ್ನುವುದು ಮಾಧ್ಯಮಗಳಿಗೆ ಕೊಟ್ಟಿರೋ ಹೇಳಿಕೆ. ಆದರೆ ಕಾಡಸಿದ್ದೇಶ್ವರ ಸ್ವಾಮೀಜಿಗಳಾದರೂ ಏನಾದರೂ ಹೇಳುತ್ತಾರಾ ಎಂದರೆ ಅವನ್ನೆಲ್ಲ ಹೇಳೋಕೆ ಸಾಧ್ಯವಿಲ್ಲ. ಆದರೆ ಅವರು ಕೆಲವು ಪ್ರಾರ್ಥನೆ ಸಲ್ಲಿಸಿದರು. ನಾವು ಅಸ್ತು ಎಂದಿದ್ದೇವೆ ಎಂದಿದ್ದಾರೆ ಅಜ್ಜಯ್ಯನ ಪೀಠದ ಕೃರಿವೃಷಭ ದೇಶಿಕೇಂದ್ರ ಸ್ವಾಮಿಗಳು.



