ಡಿಕೆ ಶಿವಕುಮಾರ್ ಅವರನ್ನು ಬಂಡೆ, ಚಾಲೆಂಜಿಂಗ್ ಮಾಸ್ಟರ್, ಚದುರಂಗ ಚತುರ.. ಎಂದು ಏನೇನೆಲ್ಲ ಕರೆಯಬಹುದು. ಆದರೆ ಅಕ್ಚುವಲಿ ಡಿಕೆ ತ್ಯಾಗರಾಜ. ಎಲ್ಲರಿಗೂ ಒಳ್ಳೆಯದು ಮಾಡಿ, ಕೊನೆಗೆ ನೀವೆಲ್ಲ ಚೆನ್ನಾಗಿರಿ ಎಂದು ಸೂರ್ಯ ಮುಳುಗುವ ಕಡೆ ಹೆಜ್ಜೆ ಹಾಕುವ ಕನ್ನಡ ಸಿನಿಮಾ ಹೀರೋನಂತೆ ಆಗಿದ್ದೇ ಜಾಸ್ತಿ. ಈ ಬಾರಿಯೂ ಹಾಗೆಯೇ ಆಗುತ್ತಾ? ದೆಹಲಿಯಿಂದ ಬರುತ್ತಿರುವ ವರದಿಗಳು ಹೌದು, ಹೌದು ಎನ್ನುತ್ತಿವೆ.
ಡಿಕೆ ಮಾರ್ಮಿಕವಾಗಿ ನಾನು ಬ್ಲಾಕ್ ಮೇಲ್ ಮಾಡಲ್ಲ. ಬೆನ್ನಿಗೆ ಚೂರಿ ಹಾಕಲ್ಲ. ಪಕ್ಷ ನನ್ನ ದೇವಸ್ಥಾನ. ಕಷ್ಟದಲ್ಲಿದ್ದಾಗ ನಾನು ಮುನ್ನಡೆಸಿ ಗೆದ್ದೆ. ನನ್ನೊಂದಿಗೆ ಯಾರೂ ಇಲ್ಲ. ಎಲ್ಲ 135 ಶಾಸಕರೂ ನನ್ನವರೇ ಎನ್ನುತ್ತಿದ್ದಾರೆ. ಈ ಎಲ್ಲ ಬಾಣಗಳ ಗುರಿಯೂ ಸಿದ್ದರಾಮಯ್ಯ ಅವರೇ ಎನ್ನುವುದು ರಾಜಕೀಯ ಇತಿಹಾಸ ಗೊತ್ತಿರುವ ಎಲ್ಲರಿಗೂ ಗೊತ್ತಿದೆ. ಇಂತಹವುಗಳಿಂದಾಗಿಯೇ ಖರ್ಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಿದ್ದು, ಪರಮೇಶ್ವರ್ ಸೋತಿದ್ದು. ಪಕ್ಷ ಕಷ್ಟದಲ್ಲಿದ್ದಾಗ ಎದೆ ಕೊಟ್ಟವರು..ಹೆಗಲು ಕೊಟ್ಟವರು ಡಿಕೆ ಶಿವಕುಮಾರ್. ಆದರೆ ಅವರು ತ್ಯಾಗರಾಜನಾಗಿದ್ದೇ ಹೆಚ್ಚು.
2013 : ಒಂದು ವರ್ಷದ ನಂತರ ಮಂತ್ರಿಪಟ್ಟ..!
2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅದಕ್ಕೆ ಕಾರಣವಾಗಿದ್ದು ಜನಾರ್ದನ ರೆಡ್ಡಿ ಹಾಕಿದ ಚಾಲೆಂಜ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪಾದಯಾತ್ರೆ. ಆಗ ಡಿಕೆ ಶಿವಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರು. ಆದರೆ ಸಿದ್ದರಾಮಯ್ಯ ಸಂಪುಟದಲ್ಲಿ ಡಿಕೆ ಎಂಟ್ರಿ ಕೊಟ್ಟಿದ್ದು ಲೇಟ್ ಆಗಿ. 2013ಕ್ಕೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೂ, ಡಿಕೆ ಮಂತ್ರಿಯಾಗಿದ್ದು 2014ರ ಜುಲೈನಲ್ಲಿ. ಅದು ಸಣ್ಣ ಹೋರಾಟವೇನೂ ಆಗಿರಲಿಲ್ಲ. ಆದರೆ ಅಪ್ಪಿತಪ್ಪಿಯೂ ಬಹಿರಂಗವಾಗಿ ಒಂದೇ ಒಂದು ಹೇಳಿಕೆ ಕೊಟ್ಟಿರಲಿಲ್ಲ.
2018ರಲ್ಲಿ ಕಾಂಗ್ರೆಸ್, ಸಿದ್ದರಾಮಯ್ಯ ನೇತೃತ್ವದಲ್ಲೇ ಎಲೆಕ್ಷನ್ ಎದುರಿಸಿ ಸೋತಾಗ, ಮೈತ್ರಿ ಸರ್ಕಾರವೇನೋ ಬಂತು. ಪರಮೇಶ್ವರ್ ಡಿಸಿಎಂ ಆದರು. ಆದರೆ ಶಾಸಕಾಂಗ ಪಕ್ಷದ ನಾಯಕತ್ವ ಸಿದ್ದರಾಮಯ್ಯ ಅವರಲ್ಲಿಯೇ ಉಳಿದುಕೊಂಡಿತು. ಸಿದ್ದರಾಮಯ್ಯ ಬಣದ ಶಾಸಕರೇ ಪಕ್ಷ ಬಿಟ್ಟು ಎದ್ದು ಹೋದಾಗ, ಪಕ್ಷದ ಅಧ್ಯಕ್ಷ ಹುದ್ದೆ ವಹಿಸಿಕೊಂಡವರು ಡಿಕೆ. ಡಿಕೆ ಆವರು ಹೇಳೋದು ಸರಿ, ಡಿಕೆ ಅಧ್ಯಕ್ಷರಾದಾಗ ಆ ಪಟ್ಟ ಬೇಡ ಎಂದು ಸುಮ್ಮನಾಗಿದ್ದವರೇ ಹೆಚ್ಚು. ಸವಾಲನ್ನು ಸ್ವೀಕರಿಸಿದರು.
ಇಂತಹ ಹಲವು ವಿಷಯಗಳಲ್ಲಿ ಡಿಕೆ ಹಲವು ಬಾರಿ ತ್ಯಾಗರಾಜನಾಗಿದ್ದಾರೆ. ಆದರೆ ಎಲ್ಲ ಸವಾಲುಗಳನ್ನು, ನಿಭಾಯಿಸಿರುವುದು ಮಾತ್ರ ಡಿಕೆ. ಹೀಗಿದ್ದರೂ ಡಿಕೆಗೆ ಎದುರಾಗುತ್ತಿರುವ ಅಡ್ಡಿಯಾದರೂ ಏನು..? ಡಿಕೆ ವಿರುದ್ಧ ಇರುವ ಐಟಿ, ಇಡಿ, ಸಿಬಿಐ ಕೇಸುಗಳು. ಅಕಸ್ಮಾತ್ ಸೆಂಟ್ರಲ್ಲಿನವರು ಡಿಕೆ ಅವರನ್ನು ಜೈಲಿಗೆ ಹಾಕಿದರೆ, ಸಿಎಂ ಆಗಿ ಜೈಲಿಗೆ ಹೋಗೋ ಪರಿಸ್ಥಿತಿ ಎದುರಾದರೆ.. ಅದಕ್ಕಿಂತ ಅವಮಾನ ಇನ್ನೊಂದು ಬೇಕಾ ಅನ್ನೋದು ಸಿದ್ದರಾಮಯ್ಯ ಎತ್ತಿರೋ ಪ್ರಶ್ನೆ. ಜೊತೆಗೆ ಲೋಕಸಭೆ ಎಲೆಕ್ಷನ್ ಹತ್ತಿರದಲ್ಲೇ ಇದೆ ನೋಡಿ ಎನ್ನುತ್ತಿದೆ ಸಿದ್ದು ಟೀಂ. ಹೈಕಮಾಂಡ್ ಚಿಂತೆಗೀಡಾಗಿರುವುದೇ ಈ ಕಾರಣಕ್ಕೆ. ಸಿದ್ದರಾಮಯ್ಯ ಈ ಹಿಂದೆ ತಟಸ್ಥರಾಗಿದ್ದು ಕೆಲವು ಸಂದೇಶ ರವಾನಿಸಿದ್ದಾರೆ. ಖರ್ಗೆ ದೆಹಲಿ ರಾಜಕಾರಣಕ್ಕೆ ಹೋಗಿದ್ದು ಆ ಕಾರಣಕ್ಕೇ. ಇದು ಗೊತ್ತಿರುವ ಕಾರಣಕ್ಕೇ ಸೋನಿಯಾ, ರಾಹುಲ್ ಹಾಗೂ ಖರ್ಗೆ ತಲೆಕೆಡಿಸಿಕೊಂಡಿದ್ದಾರೆ.
ಆದರೆ ಅಂತಹ ಆತಂಕ ಡಿಕೆ ಶಿವಕುಮಾರ್ ಬಗ್ಗೆ ಇಲ್ಲ. ಹೀಗಾಗಿಯೇ ಹೇಗಾದರೂ ಡಿಕೆಯನ್ನು 50:50 ಅಥವಾ 2:3 ಸೂತ್ರಕ್ಕೆ ಒಪ್ಪಿಸಿ, ಅದನ್ನು ಸಿದ್ದರಾಮಯ್ಯ ಅವರೂ ಪಾಲಿಸುವಂತೆ ನೊಡಿಕೊಳ್ಳೋ ಗುರಿ ಅವರದ್ದು. ಆದರೆ ಇಂತಹ ಸೂತ್ರಗಳನ್ನು ಪಂಜಾಬ್, ಮಧ್ಯಪ್ರದೇಶ, ರಾಜಸ್ತಾನಗಳಲ್ಲಿ ಈಡೇರಿಸುವಲ್ಲಿ ಸಾಧ್ಯವಾಗಿಲ್ಲ. ಮಧ್ಯಪ್ರದೇಶದಲ್ಲಿ ಇಂತಹ ಕಾರಣಕ್ಕಾಗಿಯೇ ಸರ್ಕಾರ ಕಳೆದುಕೊಂಡಿತು. ಪಂಜಾಬಿನಲ್ಲಿ ಪಕ್ಷವೇ ಪೀಸ್ ಪೀಸ್ ಆಯ್ತು. ರಾಜಸ್ತಾನ ಕಾಂಗ್ರೆಸ್ ಮರ್ಯಾದೆ ಬೀದಿಯಲ್ಲಿ ಸೇಲ್ ಆಗುತ್ತಿದೆ. ಹೀಗಿರುವಾಗ.. ಏನು ಮಾಡಬೇಕು..? ಹೀಗಾಗಿಯೇ ಡಿಕೆ ಹಠಕ್ಕೆ ಬಿದ್ದಿರುವುದು. ಅವರು ಕೇಳ್ತಿರೋದು ಮಾಡಿದ ಕೆಲಸಕ್ಕೆ ಕೂಲಿ. ಕೊಡುವುದಕ್ಕೆ ಸಾಧ್ಯವಿದೆಯಾ..?



