ಎಲೆಕ್ಷನ್ ಸಮಯ ಬಂದಾಗ.. ಅದರಲ್ಲೂ ಆ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂಬ ಭಾವನೆ ಹೆಚ್ಚಿರುವಾಗ ರಾಜಕೀಯ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಳ್ಳುವುದು ಹೊಸದಲ್ಲ. ಅಸಮಾಧಾನ, ಭಿನ್ನಮತಗಳ ಹಿಂದೆ ಹಲವು ಕಾರಣಗಳಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಆ ಮೂಲಕ ನಾಯಕರು ಪಕ್ಷಕ್ಕೆ ತಮ್ಮ ಅನಿವಾರ್ಯತೆಯನ್ನು ಸಾಬೀತು ಪಡಿಸುವ, ತಮ್ಮ ಅಗತ್ಯತೆಯನ್ನು ಒತ್ತಿ ಹೇಳುವ ಕೆಲಸ ಮಾಡುತ್ತಿರುತ್ತಾರೆ. ನನ್ನನ್ನು ಕಡೆಗಣಿಸಿದರೆ ಎಚ್ಚರಿಕೆ.. ನನ್ನ ಹಿಂದೆ ಇಷ್ಟು ಜನ ಬೆಂಬಲಿಗರಿದ್ದಾರೆ. ನನ್ನ ಹೆಸರಲ್ಲಿ ಇಷ್ಟು ಮತಗಳಿವೆ ಎಂದು ವಾರ್ನಿಂಗ್ ಕೊಡುವ ತಂತ್ರವಷ್ಟೇ. ಹಾಗಂತ ಅದು ಬ್ಲಾಕ್ ಮೇಲ್ ಅಲ್ಲ. ಕಾಂಗ್ರೆಸ್ಸಿನ ವಿಚಾರಕ್ಕೆ ಸ್ವಲ್ಪ ದೊಡ್ಡ ಮಟ್ಟದಲ್ಲಿಯೇ ಸ್ಫೋಟಿಸಿದೆ.
ಪರಮೇಶ್ವರ್ ಅಸಮಾಧಾನ..ರಾಜೀನಾಮೆ..ಸಮಾಧಾನ : ಇದು ಕಪಿಸಿಸಿ ಮಾಜಿ ಅಧ್ಯಕ್ಷರೂ ಆಗಿರುವ ಪರಮೇಶ್ವರ್ ಅವರ ಒನ್ ಲೈನ್ ಸ್ಟೋರಿ.ಸುಮಾರು 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ, ಪಕ್ಷವನ್ನು 2013ರಲ್ಲಿ ಬಲಿಷ್ಠಗೊಳಿಸಿ ಅಧಿಕಾರಕ್ಕೆ ತಂದ ಖ್ಯಾತಿ ಪರಮೇಶ್ವರ್ ಅವರದ್ದು. ಈಗ ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರು. ಆದರೆ ತಾವು ಪ್ರಣಾಳಿಕೆಯಲ್ಲಿ ಸಿದ್ಧಪಡಿಸಿದ್ದ ಘೋಷಣೆಗಳನ್ನು ಬಿ.ಕೆ.ಹರಿಪ್ರಸಾದ್ ಘೋಷಣೆ ಮಾಡಿದ್ದನ್ನು ವಿರೋಧಿಸಿ ಪರಮೇಶ್ವರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ನಂತರ ಸುರ್ಜೇವಾಲಾ ಅವರು ಭೇಟಿ ಮಾಡಿ ಮನವೊಲಿಸಿದ್ದಾರೆ.



ಎಂ.ಬಿ.ಪಾಟೀಲ್ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ. ತೀರಾ ಬಿಜೆಪಿಯ ಯಡಿಯೂರಪ್ಪನವರ ಮಟ್ಟಕ್ಕೆ ಲಿಂಗಾಯತರ ನಾಯಕರಲ್ಲ ಎನ್ನುವುದು ಸತ್ಯವಾದರೂ ಕಾಂಗ್ರೆಸ್ಸಿನ ಲಿಂಗಾಯತ ನಾಯಕರಲ್ಲಿ ನಂ.1 ಎನ್ನುವುದರಲ್ಲಿ ಅನುಮಾನವಿಲ್ಲ. ಯಡಿಯೂರಪ್ಪ ರಾಜಕೀಯ ನಿವೃತ್ತಿಯ ಲಾಭ ಪಡೆಯುವ, ಲಿಂಗಾಯತ ಸಮುದಾಯದ ನಾಯಕರಾಗುವ ಅವಕಾಶ ಮತ್ತು ಸಾಮಥ್ರ್ಯ ಎರಡೂ ಎಂ.ಬಿ.ಪಾಟೀಲ್ ಅವರಿಗೆ ಇದೆ. ಅಂದಹಾಗೆ ಎಂಬಿ ಪಾಟೀಲ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು. ಆದರೆ ಸಮಸ್ಯೆಯೆಂದರೆ ಅವರಿಗೇ ಪ್ರಚಾರ ಸಿಗುತ್ತಿಲ್ಲ ಎನ್ನುವುದು. ಪ್ರಜಾಧ್ವನಿ ಯಾತ್ರೆ ಸೇರಿದಂತೆ ಕಾಂಗ್ರೆಸ್`ನ ಪ್ರಚಾರ ಸಭೆಗಳಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಸುದ್ದಿ ಮೀಡಿಯಾಗಳಲ್ಲಿ ಬಂದ ಮೇಲೆ ಅದೆಲ್ಲವೂ ಅಪ್ಪಟ ಸುಳ್ಳು ಎಂದು ಒಂದೇ ಮಾತಿನಲ್ಲಿ ತಳ್ಳಿ ಹಾಕಿದ್ದಾರೆ. ಬೆಂಕಿಯಿಲ್ಲದೆ ಹೊಗೆ ಆಡುತ್ತದೆಯೇ.. ಈ ಪ್ರಶ್ನೆಗೆ ಉತ್ತರಗಳಿಲ್ಲ.


ರಾಜ್ಯದ ಪ್ರಭಾವಿ ದಲಿತ ನಾಯಕರಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕೂಡಾ ಒಬ್ಬರು. ಕೋಲಾರದ ಪ್ರಭಾವಿ ಮುಖಂಡ. ಮುನಿಯಪ್ಪ ಅಸಮಾಧಾನ ಹೊಸದೇನಲ್ಲ. ಕಳೆದ ಬಾರಿ ಮುನಿಯಪ್ಪ ಬಿಜೆಪಿ ಬಾಗಿಲು ತಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುತ್ತಿದ್ದು ಮುನಿಯಪ್ಪ ಅವರ ಬೆಂಬಲ ಅನಿವಾರ್ಯ. ಆದರೆ ಕೋಲಾರದಲ್ಲಿ ಮುನಿಯಪ್ಪ-ರಮೇಶ್ ಕುಮಾರ್ ನಡುವಣ ಮುಸುಕಿನ ಗುದ್ದಾಟ ಹೊಸದೇನೂ ಅಲ್ಲ. ಈ ಕುರಿತು ಹಲವು ಸಭೆಗಳಾಗಿದ್ದರೂ ಮುನಿಯಪ್ಪ ಇನ್ನೂ ತೃಪ್ತರಾಗಿಲ್ಲ. ಏಕೆಂದರೆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಜಾರಿಗೆ ಬರುತ್ತಿಲ್ಲ. ಇದರ ನಡುವೆ ಕೋಲಾರದಲ್ಲಿ ಡಿಕೆ ಶಿವಕುಮಾರ್ ಬಸ್ ಯಾತ್ರೆ ಶುರುವಾಗಿದ್ದು ಮುಳಬಾಗಿಲಿನಲ್ಲಿ ಬಸ್ ಯಾತ್ರೆಯಲ್ಲಿ ಬಸ್ ಹತ್ತಲು ಆಹ್ವಾನ ಕೊಟ್ಟರೂ ಮುನಿಯಪ್ಪ ಹತ್ತಲಿಲ್ಲ. ಕೊನೆಗೆ ಡಿಕೆ ಶಿವಕುಮಾರ್ ಬಲವಂತವಾಗಿ ಮುನಿಯಪ್ಪ ಬಸ್ ಏರುವಂತೆ ಮಾಡಿದರು. ಅದಾದ ಮೇಲೆ ಕುರುಡುಮಲೆ ದೇವಸ್ಥಾನಕ್ಕೆ ಡಿಕೆಶಿ ಜೊತೆ ಬಂದ ಮುನಿಯಪ್ಪ, ಮುಳಬಾಗಿಲು ಸಮಾವೇಶಕ್ಕೆ ಬರಲಿಲ್ಲ. ಆದರೆ ಕೆಜಿಎಫ್ ಸಮಾವೇಶದಲ್ಲಿ ಪಾಲ್ಗೊಂಡರು.


ಸದ್ಯಕ್ಕೆ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸುದ್ದಿ ರಮೇಶ್ ಜಾರಕಿಹೊಳಿ ಮತ್ತು ಡಿಕೆಶಿವಕುಮಾರ್ ನಡುವಿನ ಸಮರ. ರಮೇಶ್ ಜಾರಕಿಹೊಳಿ ಮೊದಲು ಕಾಂಗ್ರೆಸ್ಸಿನಲ್ಲೇ ಇದ್ದವರು. ಆಮೇಲೆ ಬಿಜೆಪಿಗೆ ಹೋಗಿ ಸಚಿವರಾಗಿದ್ದು, ಸಿಡಿ ಬಯಲಾಗಿ ರಾಜೀನಾಮೆ ಕೊಟ್ಟಿದ್ದು, ಈಗಲೂ ಡಿಕೆಶಿ ವಿರುದ್ಧ ಕುದಿಯುತ್ತಿರುವುದು ಗೊತ್ತಿರುವ ಸಂಗತಿಯೇ. ಈ ಕುರಿತು ಡಿಕೆ ಶಿವಕುಮಾರ್ ಅವರ ಮಾತುಗಳ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ವೈಯಕ್ತಿಕ ನಿಂದನೆ ಮಾಡುವ ಹೇಳಿಕೆಗಳು ಬೇಡ ಎಂದಿದ್ದಾರೆ. ಇದಕ್ಕೆ ವಿರೋಧಿಗಳ ವಾದವೆಂದರೆ ರಮೇಶ್ ಜಾರಕಿಹೊಳಿ ಏನೇ ಆದರೂ ಸತೀಶ್ ಜಾರಕಿಹೊಳಿಗೆ ಅಣ್ಣ. ಸತೀಶ್ ಕಾಂಗ್ರೆಸ್ಸಿನಲ್ಲಿದ್ದರೆ ಸೋದರರಾದ ರಮೇಶ್, ಬಾಲಚಂದ್ರ, ಲಖನ್ ಬಿಜೆಪಿಯಲ್ಲಿದ್ದಾರೆ. ಪಕ್ಷ ಬೇರೆಯಿರಬಹುದು, ರಾಜಕೀಯದ ಕಥೆ ಏನೇ ಇರಬಹುದು, ಕುಟುಂಬದ ವಿಷಯದಲ್ಲಿ ಅಣ್ಣ ತಮ್ಮಂದಿರು ಒಬ್ಬರನ್ನೊಬ್ಬರು ಬಿಟ್ಟಿಲ್ಲ. ಹೀಗಾಗಿಯೇ ಪರ್ಸನಲ್ ಅಟ್ಯಾಕ್ ಬೇಡ ಎಂದಿದ್ದಾರೆ ಸತೀಶ್ ಜಾರಕಿಹೊಳಿ ಎನ್ನುವುದು ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬವನ್ನು ಹತ್ತಿರದಿಂದ ನೋಡಿರುವವರ ಮಾತು.
ಒಬ್ಬೊಬ್ಬರದ್ದು ಒಂದೊಂದು ವಾದ. ದಿಕ್ಕು. ದೃಷ್ಟಿಕೋನ. ಈ ಎಲ್ಲವನ್ನೂ ನಿಭಾಯಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಕನಸು ಡಿಕೆ ಮತ್ತು ಸಿದ್ದು ಅವರದ್ದು.



