ಈ ಚುನಾವಣೆಯ ಸೆನ್ಸೇಷನ್ ಆದವರು ಕಿಚ್ಚ ಸುದೀಪ್. ಸುದೀಪ್ ಬಿಜೆಪಿ ಪರವಾಗಿ, ಬಸವರಾಜ ಬೊಮ್ಮಾಯಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೊರಟಾಗ ಒಪ್ಪಿಕೊಂಡವರೂ ಇದ್ದರು. ವಿರೋಧ ಮಾಡಿದವರೂ ಇದ್ದರು.
ಪರ-ವಿರೋಧ ಎರಡೂ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುತ್ತಲೇ ಇದ್ದರು. ಆದರೆ, ಸುದೀಪ್ ಪಕ್ಕಾ ಇದ್ದರು. ಬಸವರಾಜ ಬೊಮ್ಮಾಯಿ ಪರ ನಿಂತರು. ಅವರು ಹೇಳಿದವರ ಪರ ಪ್ರಚಾರ ಮಾಡಿದರು. ಬಿಜೆಪಿ ಸೋತಾಗ ಸುದೀಪ್ ಅವರನ್ನೂ ಆಡಿಕೊಂಡವರೆಷ್ಟೋ ಜನ. ಬುದ್ದಿ ಹೇಳಿದವರೆಷ್ಟೋ ಜನ. ಇದೀಗ ಸಚಿವ ಕೆ.ಎನ್.ರಾಜಣ್ಣ ಸರದಿ. ಅವರು ಹೇಳಿದ್ದು ಎಚ್ಚರಿಕೆಯೋ.. ಬುದ್ದಿಮಾತೋ.. ಎನ್ನುವುದನ್ನು ಅವರವರಿಗೇ ಬಿಡಬೇಕು. ಏಕೆಂದರೆ ರಾಜಣ್ಣ ಮಾತಿನಲ್ಲಿ ಬುದ್ದಿಮಾತು ಮತ್ತು ಎಚ್ಚರಿಕೆ ಎರಡೂ ಇವೆ. ಅವರು ಹೇಳಿದ್ದು ಇಷ್ಟು..
ಕಿಚ್ಚ ಸುದೀಪ್ ನಮ್ಮ ಸಮುದಾಯದ ಮೇರುನಟ. ಡಾ.ರಾಜ್ ರಾಜಕೀಯಕ್ಕೆ ಬಂದು ಏನು ಬೇಕಾದರೂ ಆಗಬಹುದಿತ್ತು, ರಾಜಕೀಯದಿಂದ ದೂರ ಇದ್ದಿದ್ದಕ್ಕೆ ದೇವತಾಮನುಷ್ಯ ಎಂದು ಹೇಳುತ್ತಾರೆ. ದೇವತಾ ಮನುಷ್ಯ ಎಂದು ಎಲ್ಲಾ ಸಮುದಾಯದವರು ಗುರುತಿಸುತ್ತಾರೆ. ಸಿನಿಮಾ ನಟರು ರಾಜಕೀಯಕ್ಕೆ ಬಂದರೆ ಗೌರವ ಕಡಿಮೆಯಾಗುತ್ತದೆ. ಒಂದು ಸಮುದಾಯದ ಅಭ್ಯರ್ಥಿ ಪರ, ವಿರುದ್ಧ ಸಿನಿಮಾ ನಟರು ಪ್ರಚಾರ ಮಾಡಿದರೆ, ಆ ಸಮುದಾಯದವರು ಆ ನಟನ ಪರ ಅಥವಾ ವಿರುದ್ಧ ಆಗುತ್ತಾರೆ. ಸಿನಿಮಾ ನಟರಿಗೆ ಅದು ಒಳ್ಳೆಯದಲ್ಲ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಸುದೀಪ್ ಮಾತ್ರವೇ ಅಲ್ಲದೆ ಇನ್ನೂ ಹಲವು ನಟರು ವಿವಿಧ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. ಶಿವರಾಜ್ ಕುಮಾರ್, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ಧ್ರುವ ಸರ್ಜಾ, ನಟಿಯರಾದ ಹರ್ಷಿಕಾ ಪೂಣಚ್ಚ, ಇನ್ನೂ ಕೆಲವರು ಪ್ರಚಾರ ಮಾಡಿದ್ದರು. ಸಾಧುಕೋಕಿಲ, ಶ್ರುತಿ, ರಮ್ಯಾ , ಮುಖ್ಯಮಂತ್ರಿ ಚಂದ್ರು, ಎಸ್.ನಾರಾಯಣ್ ಸೇರಿದಂತೆ ಕೆಲವರು ಅಧಿಕೃತವಾಗಿಯೇ ರಾಜಕೀಯ ಪಕ್ಷದ ಸದಸ್ಯರಾಗಿದ್ದಾರೆ. ಆದರೆ ಹೆಚ್ಚು ಚರ್ಚೆಯಾಗಿದ್ದು ನಟ ಸುದೀಪ್ ವಿಚಾರ ಮಾತ್ರ.
ಈ ಸವಾಲು ಶಿವರಾಜ್ ಕುಮಾರ್ ಅವರಿಗೆ ಎದುರಾಗಲಿಲ್ಲವಾ? ಕಾಂಗ್ರೆಸ್ ಗೆದ್ದಿರಬಹುದು, ಆದರೆ, ಅವರೂ ಕೂಡಾ ಒಂದು ಪಕ್ಷದ ಪರ ಇದ್ದವರೇ ತಾನೇ. ಅವರಿಗೆ ಡ್ಯಾಮೇಜ್ ಆಗುವುದಿಲ್ಲವಾ? ಈಗ ಪ್ರಸ್ತಾಪ ಮಾಡಿದ ಎಲ್ಲರೂ ಒಂದಲ್ಲ ಒಂದು ಪಕ್ಷದ ಪರ ಇದ್ದವರೇ. ಅದರ ಆರ್ಥ ಇನ್ನೊಂದು ಪಕ್ಷದ ವಿರುದ್ಧವೂ ಹೌದು. ಕೆಲವರು ಗೆದ್ದಿದ್ದಾರೆ. ಕೆಲವರು ಸೋತಿದ್ದಾರೆ.
ಇದು ಹೊಸದೇನಲ್ಲ, ಈ ಹಿಂದೆ ಖುದ್ದು ಅಂಬರೀಷ್ ಸೋತಿದ್ದರು. ಅವರ ಜನಪ್ರಿಯತೆ ಹೆಚ್ಚೂ ಆಗಲಿಲ್ಲ. ಕಡಿಮೆಯೂ ಆಗಲಿಲ್ಲ. ತಮ್ಮ ಪಕ್ಷದವರನ್ನು ಬೆಂಬಲಿಸುವವರೆಲ್ಲರೂ ಒಳ್ಳೆಯವರು, ವಿರೋಧ ನಿಂತವರೆಲ್ಲರೂ ಕೆಟ್ಟವರು ಎಂಬ ಚಾಳಿಯನ್ನು ರಾಜಕಾರಣಿಗಳೂ ಬಿಡಬೇಕು.



