ಚನ್ನಪಟ್ಟಣ. ಪ್ರಸ್ತುತ ಹೆಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಕ್ಷೇತ್ರ. ಮೊದಲ ಪಟ್ಟಿ ರಿಲೀಸ್ ಆದಾಗ ಜೆಡಿಎಸ್ ಪಟ್ಟಿಯಲ್ಲಿ ಚನ್ನಪಟ್ಟಣಕ್ಕೆ ಟಿಕೆಟ್ ಅನೌನ್ಸ್ ಆಗಿರಲಿಲ್ಲ. ಯಾಕಿರಬಹುದು ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಕಳೆದ ಬಾರಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ಸ್ಪರ್ಧಿಸಿ, ಎರಡೂ ಕಡೆ ಗೆದ್ದಾದ ಮೇಲೆ ಸಿ.ಪಿ.ಯೋಗೀಶ್ವರ್ ಅವರನ್ನು ಸೋಲಿಸಿದ್ದ ಕ್ಷೇತ್ರವನ್ನೇ ಉಳಿಸಿಕೊಂಡಿದ್ದರು ಹೆಚ್.ಡಿ.ಕೆ. ತಮ್ಮ ರಾಮನಗರವನ್ನು ಪತ್ನಿ ಅನಿತಾ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ದರು. ಈಗ ಆ ರಾಮನಗರ ಕ್ಷೇತ್ರಕ್ಕೆ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ. ಆದರೆ ಇದ್ದಕ್ಕಿದ್ದಂತೆ ಚನ್ನಪಟ್ಟಣ ಸೆನ್ಸೇಷನ್ ಸೃಷ್ಟಿಸಿದೆ.
ಸಿಪಿ ಯೋಗೇಶ್ವರ್ ಅವರಿಗೆ ಬಿಜೆಪಿ ಹೈಕಮಾಂಡ್ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದೆ. ಆದರೆ ಇದುವರೆಗೆ ಬಿ ಫಾರಂ ಪಡೆಯದ ಸಿಪಿವೈ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಡಿಕೆ ಶಿವಕುಮಾರ್ ತೆರೆಮರೆಯಲ್ಲಿ ತಂತ್ರ ಹೂಡುತ್ತಿದ್ದಾರೆ ಎನ್ನಲಾಗುತ್ತಿದೆ. ಕಾರಣವೂ ಇದೆ. ಮದ್ದೂರು ಕ್ಷೇತ್ರದಲ್ಲಿ ಕದಲೂರು ಉದಯ್ ಟಿಕೆಟ್ ಅಕಾಂಕ್ಷಿ. ಕಳೆದ ಬಾರಿ ಹೆಚ್`ಡಿಕೆ ಸರ್ಕಾರ ಪತನಕ್ಕೆ ಕಾರಣರಾದವರಲ್ಲಿ ಇವರೂ ಒಬ್ಬರು. ಸಿ.ಪಿ.ಯೋಗೀಶ್ವರ್ ಪರಮಾಪ್ತ. ಅದನ್ನು ಕುಮಾರಸ್ವಾಮಿಯವರೇ ಹೇಳಿಕೊಂಡಿದ್ದರು. ಆ ಉದಯ್ ಈಗ ಡಿಕೆ ಶಿವಕುಮಾರ್ ಅವರಿಗೆ ಆಪ್ತರಾಗಿದ್ದಾರೆ. ಅವರಿಗೇ ಟಿಕೆಟ್ ಬಹುತೇಕ ಫಿಕ್ಸ್ ಎಂಬ ವಾತಾವರಣ ಇದೆ. ಇದರ ನಡುವೆಯೇ ಉದಯ್ ಇದ್ದಕ್ಕಿದ್ದಂತೆ ಯೋಗೀಶ್ವರ್ ಪರ ಪ್ರಚಾರ ಮಾಡಲು ಬಂದಿರುವುದೇ ಕುತೂಹಲಕಾರಿ.
ಕಳೆದ ಮೂರು ವರ್ಷಗಳಿಂದ ಸಮಾಜಸೇವೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಉದಯ್ ಮಾರ್ಚ್ ತಿಂಗಳಲ್ಲಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ನೆರವಾಗುವ ಮೂಲಕ ಗಮನ ಸೆಳೆದಿದ್ದರು. ಸದ್ಯ ಮೂರನೇ ಪಟ್ಟಿಯಲ್ಲಿ ಉದಯ್ಗೆ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ. ಉದಯ್ ಪಕ್ಷ ಸೇರ್ಪಡೆ ನಂತರ ಮಾತನಾಡಿದ್ದ ಡಿಕೆ ಶಿವಕುಮಾರ್, ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್ನ ಡಿಸಿ ತಮ್ಮಣ್ಣ ಅವರನ್ನು ಸೋಲಿಸಲು ಉದಯ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದಿದ್ದರು.
ಇದೀಗ ನೋಡಿದರೆ ಎಲ್ಲವೂ ಚೇಂಜ್. ಈಗ ಉದಯ್ ಅವರಿಗೆ ಟಿಕೆಟ್ ಕೊಡಬಾರದು. ಉದಯ್ ಅವರಿಗೆ ಟಿಕೆಟ್ ಕೊಡುವುದು ಅನುಮಾನ ಎಂಬುದು ಪಕ್ಷನಿಷ್ಠ ಕಾಂಗ್ರೆಸ್ ಕಾರ್ಯಕರ್ತರ ವಾದವಾದರೆ, ಇಲ್ಲ ಇಲ್ಲ, ನೋಡ್ತಾ ಇರಿ, ಸಿ.ಪಿ.ಯೋಗೀಶ್ವರ್ ಅವರೇ ಕಾಂಗ್ರೆಸ್ಸಿಗೆ ಬರುತ್ತಾರೆ. ಡಿಕೆ ಏನೋ ಬಲೆ ಹೆಣೆದಿದ್ದಾರೆ ಎನ್ನುವುದು ಡಿಕೆ ಆಟ ಬಲ್ಲವರ ಮಾತು. ಆದರೆ ಚನ್ನಪಟ್ಟಣ ನಿಗೂಢವಾಗಿ ಕಾಣುತ್ತಿರುವುದಂತೂ ನಿಜ. ಏಕೆಂದರೆ ಸಿ.ಪಿ.ಯೋಗೀಶ್ವರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದರೂ ಇನ್ನೂ ಬಿ ಫಾರಂ ಪಡೆದುಕೊಂಡಿಲ್ಲ.



