ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಪಕ್ಷದಲ್ಲಿ ಹಲವು ಬದಲಾವಣೆ ಮಾಡಿದ್ದಾರೆ. ಪಕ್ಷದ ಪದಾಧಿಕಾರಿಗಳಿಂದ ಕಟ್ಟಕಡೆಯ ಕಾರ್ಯಕರ್ತನವರೆಗೆ ಹೊಸ ಉತ್ಸಾಹ, ಹುಮ್ಮಸ್ಸು ತುಂಬಿದ್ದಾರೆ. ಡಿಕೆ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ನ ಎಲ್ಲ ಘಟಕಗಳೂ ಉತ್ಸಾಹದಿಂದ ಕೆಲಸ ಮಾಡುತ್ತಿವೆ. ಯಾರೊಬ್ಬರೂ ಸುಮ್ಮನೆ ಕುಳಿತಿಲ್ಲ. ಪಕ್ಷದ ಸಂಘಟನೆ ಜೊತೆ ಜೊತೆಗೇ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹೋರಾಟವನ್ನೂ ನಡೆಸುತ್ತಿದ್ದಾರೆ. ಮೇಕೆದಾಟು ಯಾತ್ರೆ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಪಕ್ಷದ ಸಮಾವೇಶ, ಪ್ರತಿಭಟನೆ, ಹೋರಾಟ, ಭಾರತ್ ಜೋಡೋ ಯಾತ್ರೆ, ಪ್ರಜಾಧ್ವನಿ ಯಾತ್ರೆಗಳನ್ನು ಯಶಸ್ವಿಯಾಗಿ ಸಂಘಟಿಸಿರುವ ಡಿಕೆ ಶಿವಕುಮಾರ್, ಸಿದ್ದರಾಮೋತ್ಸವಕ್ಕೂ ಬೆಂಬಲ ನೀಡಿದ್ದರು. ಪಕ್ಷಕ್ಕೆ ಶಕ್ತಿ ನೀಡುವ ಯಾವ ಕೆಲಸವನ್ನೂ ಮಾಡದೇ ಬಿಟ್ಟವರಲ್ಲ.
ಸಿದ್ದರಾಮಯ್ಯ ಪರ ಸಿಎಂ ಕೂಗು ಎದ್ದಾಗ ವ್ಯಕ್ತಿ ಪೂಜೆಯಲ್ಲ, ಪಕ್ಷ ಪೂಜೆ ಮುಖ್ಯ ಎಂದು ಪದೇ ಪದೇ ಹೇಳುತ್ತಾ, ನಾನು ಸಿಎಂ ರೇಸಿನಲ್ಲಿದ್ದೇನೆ ಎಂದು ಬಹಿರಂಗವಾಗಿ ಸಾರುತ್ತ ನಡೆಯುತ್ತಿದ್ದಾರೆ. ಜೊತೆಗೆ ಅವರು ದೈವ ಭಕ್ತರೂ ಹೌದು. ಕಬ್ಬಾಳಮ್ಮ ದೇವಿ, ಶೃಂಗೇರಿ ಮಠ, ರಾಘವೇಂದ್ರ ಸ್ವಾಮಿ, ಆದಿಚುಂಚನಗಿರಿ, ಉಜ್ಜಯಿನಿಯ ಶಕ್ತಿ ದೇವತೆಯ ಪೂಜೆ.. ಹೀಗೆ ಧರ್ಮಬೀರುವೂ ಆಗಿರುವ ಡಿಕೆ ಶಿವಕುಮಾರ್, ಸಂಸ್ಕೃತದಲ್ಲೂ ಪಾಂಡಿತ್ಯ ಹೊಂದಿದವರು. ಜ್ಯೋತಿಷ್ಯವನ್ನು ನಂಬುತ್ತಾರೆ. ಅದರಲ್ಲಿಯೂ ರಾಜಗುರು ಎಂದೇ ಖ್ಯಾತರಾಗಿರುವ ದ್ವಾರಕಾನಾಥ್ ಜ್ಯೋತಿಷ್ಯವನ್ನು ನಂಬುತ್ತಾರೆ. ಇದರ ನಡುವೆ ಡಿಕೆ ಶಿವಕುಮಾರ್ ಪಕ್ಷದ ಚಿಹ್ನೆಯನ್ನೇ ಬದಲಿಸಿದ್ದಾರೆ ಎಂಬ ಕೂಗು ಕೇಳಿ ಬಂದಿದೆ.


ಜ್ಯೋತಿಷ್ಯ ಪ್ರಕಾರ ‘ಕೈ’ ಲೋಗೋ ಬದಲಿಸಿದ್ದು, ಅದೃಷ್ಟದ ಮೊರೆ ಹೋಗಿದ್ದಾರೆ. ಅಧಿಕಾರದ ಗದ್ದುಗೆ ಹಿಡಿಯಲು ‘ಅದೃಷ್ಟ ರೇಖೆ’ ಮೊರೆ ಹೋಗಿರುವ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ‘ಹಸ್ತ’ದ ಲೋಗೋದಲ್ಲಿ ಬದಲಾವಣೆ ಮಾಡಿದ್ದಾರೆ. ಮೂಲ ಹಸ್ತದ ಚಿಹ್ನೆಯಲ್ಲಿ 3 ಗೆರೆಗಳಿವೆ. ಈ 3 ಗೆರೆಗಳ ಜೊತೆಗೆ 4ನೇ ಗೆರೆಯನ್ನು ಸೇರಿಸಿದ್ದಾರೆ ಡಿಕೆ ಶಿವಕುಮಾರ್. ಇದು ಪಕ್ಷದ ಅಧಿಕೃತ ಚಿಹ್ನೆಯಲ್ಲ. ಅಧಿಕೃತ ಚಿಹ್ನೆಯಲ್ಲಿ ಈಗಲೂ ಮೂರೇ ಗೆರೆಗಳಿವೆ. ಈಗ ಈ 3ನೇ ಗೆರೆ ಡಿಕೆ ಶಿವಕುಮಾರ್ ಅದೃಷ್ಟ ಬದಲಿಸುತ್ತಾ ಎನ್ನುವುದು ರಾಜಕೀಯದಲ್ಲಿ ನಡೆಯುತ್ತಿರುವ ಚರ್ಚೆ. ಅಂದಹಾಗೆ ಡಿಕೆ ಶಿವಕುಮಾರ್ ಅವರ ಪ್ರಜಾಧ್ವನಿ ಯಾತ್ರೆಯಲ್ಲಿಬ ಬಳಸುತ್ತಿರುವುದು ಈ ನಾಲ್ಕು ಗೆರೆಗಳ ಹಸ್ತದ ಚಿಹ್ನೆಯನ್ನೇ.


ಬದಲಾಗಿರುವ ಚಿಹ್ನೆಯ ಲೋಗೋ ಇರುವುದು ಡಿಕೆ ಶಿವಕುಮಾರ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತ್ರ. ಬದಲಿಸಿದ ಚಿಹ್ನೆ ಸಿದ್ದರಾಮಯ್ಯ ಉತ್ತರ ಕರ್ನಾಟಕದಲ್ಲಿ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಇಲ್ಲ. ಸಿದ್ದರಾಮಯ್ಯ ಮೊದಲಿನಿಂದಲೂ ಜ್ಯೋತಿಷ್ಯ, ಭವಿಷ್ಯ ಇವೆಲ್ಲ ಸುಳ್ಳು. ನಾನು ಇವನ್ನೆಲ್ಲ ನಂಬುವವನಲ್ಲ ಎಂದು ಬಹಿರಂಗವಾಗಿಯೇ ಪ್ರತಿಪಾದಿಸುತ್ತಾ ಬಂದವರು. ಹುಟ್ಟುಹಬ್ಬಕ್ಕೆ ತಿರುಪತಿಗೆ ಹೋಗುವುದಕ್ಕೆ ಕಾರಣ ನನ್ನ ಪತ್ನಿಗಾಗಿ ಎಂದು ಓಪನ್ ಆಗಿಯೇ ಹೇಳಿದವರು. ಅವರೇ ಹೇಳಿಕೊಳ್ಳುವಂತೆ ಸಿದ್ದರಾಮಯ್ಯ ನಾಸ್ತಿಕರಲ್ಲ. ಆಸ್ತಿಕರೂ ಅಲ್ಲ. ಈ ಎರಡರ ಮಧ್ಯೆ ಇರುವವರು. ಪೂಜೆ ಮಾಡುವುದನ್ನೇನೂ ಬಿಟ್ಟಿಲ್ಲ. ಆದರೆ ಮೂಢನಂಬಿಕೆಗಳ ವಿರೋಧಿ. ಇಂತಹ ಸಿದ್ದರಾಮಯ್ಯ ಕೂಡಾ ವಾಸ್ತು ಪ್ರಕಾರ ಕೋಲಾರದಲ್ಲಿ ಮನೆ ಮಾಡಿದ್ದಾರೆ ಎನ್ನುವುದೇ ವಿಶೇಷ. ಒಟ್ಟಿನಲ್ಲಿ ಅಧಿಕಾರಕ್ಕಾಗಿ ಸಿದ್ದರಾಮಯ್ಯ ವಾಸ್ತು ಪ್ರಕಾರ ಮನೆ ಹುಡುಕಿದ್ದರೆ, ಡಿಕೆ ಶಿವಕುಮಾರ್ ಹಸ್ತದ ರೇಖೆಯನ್ನೇ ಬದಲಿಸಿದ್ದಾರೆ. ಆದರೆ ಡಿಕೆಗೆ ಹಸ್ತಕ್ಕೆ ಅದೃಷ್ಟರೇಖೆ ಸೇರಿಸಲು ಸಲಹೆ ನೀಡಿದ ಜ್ಯೋತಿಷಿ ಯಾರು ಎನ್ನುವುದು ಗೊತ್ತಿಲ್ಲ. ದ್ವಾರಕನಾಥ್ ಹೆಸರು ಕೇಳಿಬರುತ್ತಿದೆಯಾದರೂ, ಅದು ಅಧಿಕೃತವಲ್ಲ. ಒಟ್ಟಿನಲ್ಲಿ ಗೆರೆ ಬದಲಾದರೆ ಅದೃಷ್ಟವೂ ಖುಲಾಯಿಸುತ್ತಾ? ವಾಸ್ತು ಬದಲಾದರೆ ಸಿಎಂ ಪಟ್ಟ ಹುಡುಕಿಕೊಂಡು ಬರುತ್ತಾ? ಏಪ್ರಿಲ್ ಅಂತ್ಯ ಅಥವಾ ಮಾರ್ಚ್ ಹೊತ್ತಿಗೆ ಗೊತ್ತಾಗಲಿದೆ.



