ಹಾಸನ ಟಿಕೆಟ್ ಫೈನಲ್ ಆಗುವ ಹೊತ್ತಿನಲ್ಲಿ ರಣರಂಗವೇ ನಡೆಯುತ್ತಿದೆ. ದೊಡ್ಡಗೌಡರ ಮನೆಯಂತೂ ರಣರಂಗವೇ ಆಗಿ ಹೋಗಿದೆ.ದೇವೇಗೌಡ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವುದು ಸಾಧ್ಯವಿಲ್ಲ ಎಂಬ ಮಾತನ್ನು ದೇವೇಗೌಡ ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಗೌಡರ ಈ ನಿಲುವಿನಿಂದ ಆಕ್ರೋಶಗೊಂಡ ಭವಾನಿ ಮತ್ತು ಎಚ್.ಡಿ.ರೇವಣ್ಣ ಮುನಿಸಿಕೊಂಡು ಸಭೆಯ ಅರ್ಧದಲ್ಲೇ ಪ್ರತ್ಯೇಕವಾಗಿ ನಿರ್ಗಮಿಸಿದ್ದಾರೆ.
ದೇವೇಗೌಡರ ಎದುರು ಭವಾನಿ ರೇವಣ್ಣ ವಾದ ಏನಿತ್ತು..?
ಹಾಸನ ಕ್ಷೇತ್ರದ ಪ್ರಸಕ್ತ ಸನ್ನಿವೇಶದಲ್ಲಿ ಹಾಲಿ ಶಾಸಕ ಪ್ರೀತಂಗೌಡ ಅವರನ್ನು ಮಟ್ಟಹಾಕಲು ತಮಗೇ ಟಿಕೆಟ್ ನೀಡಬೇಕು. ಪ್ರೀತಂಗೌಡ ತಮಗೆ ಸಾಕಷ್ಟುಅವಮಾನ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಬೇಕು ಎನ್ನುವುದು ಭವಾನಿ ರೇವಣ್ಣ ಅವರ ವಾದವಾಗಿತ್ತು. ಸ್ವಾಭಿಮಾನದ ಅಡಿಯಲ್ಲಿ ಚುನಾವಣೆ ಎದುರಿಸುತ್ತೇವೆ. ಸ್ಪರ್ಧೆ ಮಾಡದಿದ್ದರೆ ಪಲಾಯನವಾದ ಎಂಬ ಅಪವಾದ ಬರಲಿದೆ. ಸ್ಪರ್ಧೆ ಮಾಡಿದರೆ ಕಾರ್ಯಕರ್ತರೂ ಉತ್ಸಾಹಗೊಂಡು ಕೆಲಸ ಮಾಡುತ್ತಾರೆ. ಭವಾನಿ ಸ್ಪರ್ಧೆಯಿಂದ ಮಹಿಳೆಯರ ಮತ ಕ್ರೋಢೀಕರಣವಾಗಲಿದೆ ಅಲ್ಲದೆ ಇದು ಮೈಸೂರು ಭಾಗದಲ್ಲೂ ಇಂಪ್ಯಾಕ್ಟ್ ಆಗಲಿದೆ ಎನ್ನುವುದು ರೇವಣ್ಣ ಅವರ ಕುಟುಂಬದ ವಾದವಾಗಿತ್ತು.
ಕುಮಾರಸ್ವಾಮಿ ಲೆಕ್ಕಾಚಾರ ಏನಿತ್ತು..?
ಹಾಸನದಲ್ಲಿ ಚುನಾವಣಾ ಟ್ರೆಂಡ್ ಭವಾನಿ ರೇವಣ್ಣನಿಗಿಂತ ಸ್ವರೂಪ್ ಪರ ಇದೆ. ಭವಾನಿ ರೇವಣ್ಣಗೆ ಒಕ್ಕಲಿಗ ಒಳಪಂಗಡದ ಮತಗಳ ಧೃವೀಕರಣದಿಂದ ಹಿನ್ನೆಡೆ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ದಾಸ ಒಕ್ಕಲಿಗರು ಪ್ರಬಲವಾಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿದ್ದಾರೆ. ದೇವೇಗೌಡರು ಮುಳ್ಳು ಒಕ್ಕಲಿಗರಿಗೆ ಸೇರಿದವರು. ಹೀಗಾಗಿ ದಾಸ ಒಕ್ಕಲಿಗರು ತಿರುಗಿ ಬೀಳುವ ಸಾಧ್ಯತೆ ಇದೆ. ಸ್ವರೂಪ್ ದಾಸ ಒಕ್ಕಲಿಗರು. ಅಲ್ಲದೆ ಸ್ವರೂಪ್ ಅವರಿಗೆ ಟಿಕೆಟ್ ನಿರಾಕರಿಸಿದರೆ ಇಡೀ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದಾಸ ಒಕ್ಕಲಿಗರು ಜೆಡಿಎಸ್ ವಿರುದ್ಧ ನಿಲ್ಲಬಹುದು. ಅಲ್ಲದೆ ಪ್ರೀತಂ ಗೌಡರನ್ನು ರಾಜ್ಯ ಮಟ್ಟದ ನಾಯಕನನ್ನಾಗಿ ಮಾಡಿದಂತಾಗುತ್ತದೆ. ಕುಟುಂಬ ರಾಜಕೀಯದ ಹಣೆಪಟ್ಟಿ ಪ್ರಬಲವಾಗಿ ಬೀಳುತ್ತದೆ. ಎದುರಾಳಿಗಳಿಗೆ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ ಎನ್ನುವುದು ಕುಮಾರಸ್ವಾಮಿ ವಾದ.
ದೇವೇಗೌಡರ ವಾದ ಏನಿತ್ತು?
ಈ ಹಂತದಲ್ಲಿ ದೇವೇಗೌಡರು ಕುಮಾರಸ್ವಾಮಿ ಅವರ ಅಭಿಪ್ರಾಯವನ್ನೇ ಬೆಂಬಲಿಸಿ ಮಾತನಾಡಿದರು. ಭವಾನಿಗೆ ಮುಂದೆ ಅವಕಾಶ ಕಲ್ಪಿಸಿದರಾಯಿತು. ಈಗಾಗಲೇ ಪುತ್ರರಿಬ್ಬರೂ ಸ್ಥಾನಮಾನ ಹೊಂದಿದ್ದಾರೆ. ಈಗ ದಾಸ ಒಕ್ಕಲಿಗ ಸಮುದಾಯವರಿಗೆ ಟಿಕೆಟ್ ನೀಡುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಉತ್ತಮ ಸಂದೇಶ ಕೊಡುವುದು ಸೂಕ್ತ ಎಂಬ ಮಾತನ್ನು ಹೇಳುತ್ತಿದ್ದಂತೆಯೇ ಆಕ್ರೋಶದಿಂದ ಕೂಗಾಡಿದ ಭವಾನಿ ಅವರು ಸಭೆಯ ಅರ್ಧದಲ್ಲೇ ಎದ್ದು ತಮ್ಮ ಕಾರು ಹೊರಟಿದ್ದಾರೆ. ರೇವಣ್ಣ ಮತ್ತು ಕುಮಾರಸ್ವಾಮಿ ಸಮಾಧಾನದಿಂದ ಮನವೊಲಿಸುವ ಪ್ರಯತ್ನ ಮಾಡಿದರೂ ಆಗಲಿಲ್ಲ ಎನ್ನಲಾಗಿದೆ. ಜೊತೆಗೆ ರೇವಣ್ಣ, ತಮ್ಮ ವಾದವನ್ನೂ ಮಂಡಿಸಿದರು. ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ಒಪ್ಪದಿದ್ದಾಗ ಅವರೂ ಎದ್ದು ಹೊರಟರು. ಕೊನೆಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಸುದೀರ್ಘವಾಗಿ ಮಾತುಕತೆ ನಡೆಸಿದರು ಎನ್ನಲಾಗಿದೆ.
ಸಭೆಯ ಬಳಿಕ ಕುಮಾರಸ್ವಾಮಿ ದೇವೇಗೌಡರ ನಿರ್ಧಾರವೇ ಅಂತಿಮ. ಅವರು ಹೇಳಿದ್ದಕ್ಕೆ ತಲೆಬಾಗುತ್ತೇವೆ ಎಂದರೆ, ರೇವಣ್ಣ ನಾವಿಬ್ಬರೂ ಅಣ್ಣ-ತಮ್ಮಂದಿರು. ಬೇರೆ ಮಾಡೋಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಹಾಸನ ಟಿಕೆಟ್ ಈ ಕ್ಷಣಕ್ಕೂ ಸಸ್ಪೆನ್ಸ್. ಅಂದಹಾಗೆ 2ನೇ ಪಟ್ಟಿಯನ್ನು ಖುದ್ದು ಕುಮಾರಸ್ವಾಮಿಯೇ ರಿಲೀಸ್ ಮಾಡಲಿದ್ದಾರೆ. ಆದರೆ ಆ ಪಟ್ಟಿಯಲ್ಲಿ ಹಾಸನ ಇರಲ್ಲ. ದಟ್ಸ್ ಆಲ್.



