ದಲಿತ ಪರ ಸಾಹಿತಿ, ದಲಿತ ಪರ ಹೋರಾಟಗಾರ ಎಂದೇ ಗುರುತಿಸಿಕೊಂಡಿರುವ ಸಾಹಿತಿ ದೇವನೂರು ಮಹಾದೇವ, ಬಹಿರಂಗವಾಗಿಯೇ ಈ ಬಾರಿ ಕಾಂಗ್ರೆಸ್ಸಿಗೆ ಬೆಂಬಲ ಘೋಷಿಸಿದ್ದಾರೆ. ದೇವನೂರು ಅವರಷ್ಟೇ ಅಲ್ಲ, ಸಾಹಿತಿ ರಹಮತ್ ತರೀಕೆರೆ, ರೈತ ಹೋರಾಟಗಾರ ವೀರಸಂಗಯ್ಯ, ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ಯೋಗೇಂದ್ರ ಯಾದವ್, ಸಮಾಜ ಚಿಂತಕಿ ತಾರಾ ರಾವ್, ಗಣೇಶ್ ದೇವಿ, ಯೂಸೂಫ್ ಕನ್ನಿ ಸೇರಿದಂತೆ ಹಲವರು ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಬಹಿರಂಗವಾಗಿಯೇ ಕರೆ ಕೊಟ್ಟಿದ್ದಾರೆ.
ಈ ಬಾರಿ ಚುನಾವಣೆಯಲ್ಲಿಇಂತಹ ಬಿಜೆಪಿ ಸರಕಾರವನ್ನು ಗುಜರಿಗೆ ಹಾಕಬೇಕು. ಭಾರತ್ ಐಕ್ಯತಾ ಯಾತ್ರೆ ಬಳಿಕ ಕಾಂಗ್ರೆಸ್ ಪಕ್ಷ ಮರುಹುಟ್ಟು ಪಡೆದಂತೆ ಕಾಣುತ್ತಿದೆ. ಪ್ರಗತಿಪರರು ಎಲ್ಲಿ ಕಾಂಗ್ರೆಸ್ಸ್ಪರ್ಧೆ ನೀಡುತ್ತದೆ ಎನಿಸುತ್ತದೆಯೋ ಅಲ್ಲಿಅದಕ್ಕೆ ಬೆಂಬಲ ನೀಡಬೇಕು. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನದಲ್ಲಿರುವ ಕಡೆಗಳಲ್ಲಿ ಜೆಡಿಎಸ್ಗೆ ಮತ ನೀಡಬೇಕು. ಒಟ್ಟಾರೆಯಾಗಿ ಸಂಘ ಪರಿವಾರದ ಬಿಜೆಪಿಯನ್ನು ಸೋಲಿಸಿ ಓಡಿಸಬೇಕು ಎಂದು ಕರೆ ಕೊಟ್ಟಿದ್ದಾರೆ ದೇವನೂರು ಮಹಾದೇವ. ಎದ್ದೇಳು ಕರ್ನಾಟಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವನೂರು ಮಹಾದೇವ ಸಂಘ ಪರಿವಾರದ ಕಿಡಿ ಕಾರಿದರು. ಇತ್ತೀಚೆಗೆ ಆರ್.ಎಸ್.ಎಸ್. ಆಳ ಅಗಲ ಕೃತಿಯನ್ನೂ ದೇವನೂರರು ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಾಹಿತಿ ರಹಮತ್ ತರೀಕೆರೆ ಮಾತನಾಡಿ, ಕರ್ನಾಟಕ ಕಳೆದ ನಾಲ್ಕು ವರ್ಷಗಳಿಂದ ಮತೀಯ ರಾಷ್ಟ್ರೀಯವಾದಿ ಪಕ್ಷಗಳಿಂದ ಭಗ್ನವಾಗಿದೆ. ಕನ್ನಡಿಗರು ಕಷ್ಟಪಟ್ಟು ಕಟ್ಟಿದ ಬ್ಯಾಂಕ್ಗಳು ಲೂಟಿಯಾಗಿವೆ. ಅಮುಲ್ ವಿಚಾರದಲ್ಲಿಯೂ ಹಿಂದಿ ಹೇರಿಕೆ ಶುರುವಾಗಿದೆ ಎಂದು ಹೇಳಿದರು.
ದೇವನೂರು ವಿರೋಧದ ಧ್ವನಿ ಹೇಗಿದೆ..?
ದೇವನೂರು ಮಹಾದೇವ ಸೇರಿದಂತೆ ಈ ಸಾಹಿತಿಗಳು ಯಾವತ್ತು ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿದ್ದರು? ಅವರು ಸಾಹಿತಿಗಳೆಂದು ಹೇಳಿಕೊಳ್ಳುತ್ತಿದ್ದರೇ ಹೊರತು, ಅನಧಿಕೃತವಾಗಿ ಕಾಂಗ್ರೆಸ್ ಸದಸ್ಯರಾಗಿಯೇ ಇದ್ದವರು. ಅದರಲ್ಲೇನೂ ವಿಶೇಷವಿಲ್ಲ ಎನ್ನುವುದು ದೇವನೂರು ವಿರೋಧಿಗಳು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ವಾದ. ಅಷ್ಟೇ ಅಲ್ಲ, ಇದೇ ಜನ ಕಾಂಗ್ರೆಸ್ಸಿಗರಿಂದ ಅನ್ಯಾಯಕ್ಕೊಳಗಾದ ದಲಿತರ ಬಗ್ಗೆ, ದಲಿತ ಶಾಸಕರ ಬಗ್ಗೆ (ಅಖಂಡ ಶ್ರೀನಿವಾಸ ಮೂರ್ತಿ) ಸೇರಿದಂತೆ ಯಾರ ಪರವಾಗಿ ಮಾತನಾಡಿದ್ದಾರೆ. ಇದೇ ಅಮುಲ್ ವಿಚಾರದಲ್ಲಿ ಸಿದ್ದರಾಮಯ್ಯ ಡಬಲ್ ಸ್ಟಾಂಡರ್ಡ್‍ನ್ನು ಪ್ರಶ್ನಿಸುತ್ತಾರೆಯೇ ಎಂದೆಲ್ಲ ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪರವಾದ ಇನ್ನೊಂದು ಸುದ್ದಿಗೋಷ್ಟಿಯಷ್ಟೆ, ಹೆಸರಿಗೆ ಸಾಹಿತಿಗಳು, ಚಿಂತಕರು ಎಂದು ಹೇಳಿಕೊಳ್ತಾರೆ ಎನ್ನುವುದು ಬಿಜೆಪಿ ಪರ ವಾದಿಗಳ ಲೇವಡಿ.



