ಖುಷ್ಬೂ. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ. ಒಂದು ಕಾಲದಲ್ಲಿ ಇಡೀ ಇಂಡಸ್ಟ್ರಿಯನ್ನು ಆಳಿದ್ದವರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಖುಷ್ ಬೂ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಕನ್ನಡದಲ್ಲಿ ರಣಧೀರ ಚಿತ್ರದ ಮೂಲಕ ಬಂದ ಖುಷ್‍ಬೂ, ಹೆಚ್ಚು ನಟಿಸಿದ್ದು ರವಿಚಂದ್ರನ್ ಚಿತ್ರಗಳಲ್ಲೇ. ತಮಿಳು, ತೆಲುಗಿನಲ್ಲಿ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದ ಖುಷ್‍ಬೂ ಅವರಿಗಾಗಿ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿದ್ದರು. ಆ ರೀತಿಯ ಅಭಿಮಾನದ ಕೋಟೆಯಲ್ಲಿದ್ದ ಖುಷ್‍ಬೂ ಅವರ ಬಾಲ್ಯ ಮಾತ್ರ ಕಡುಘೋರವಾಗಿತ್ತು. ಜನ್ಮ ಕೊಟ್ಟ ತಂದೆಯೇ ವಿಲನ್ ಆಗಿದ್ದ. ಮಗಳು ಎಂಬುದನ್ನೂ ನೋಡದೆ ಲೈಂಗಿಕ ಕಿರುಕುಳ ನೀಡುತ್ತಿದ್ದ.
ನನ್ನ ತಾಯಿಯ ಸಾಂಸಾರಿಕ ಜೀವನ ಕೆಟ್ಟದಾಗಿತ್ತು. ಆಕೆ ಪತಿಯೇ ಪರದೈವ ಎಂದು ನಂಬಿದವಳು. ನನ್ನ ಅಪ್ಪ ಮಕ್ಕಳಿಗೆ ಹೊಡೆಯುವುದು ತಂದೆಯ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದವನು. ಬಹುಶಃ ನನಗಾಗ 8 ವರ್ಷ ಇರಬೇಕು, ಆಗ ನನ್ನ ತಂದೆ ನನ್ನ ಮೇಲೆ ಕೈ ಹಾಕಿದ. ಹೊರಗೆ ಹೇಳಿಕೊಂಡರೆ ಮತ್ತೊಂದು ಸಮಸ್ಯೆ. ತಾಯಿಯೋ ನಂಬೋದಿಲ್ಲ. ಆ ರೀತಿಯ ಕಿರುಕುಳ, ಲೈಂಗಿಕ ದೌರ್ಜನ್ಯ 15ನೇ ವಯಸ್ಸಿನವರೆಗೆ ತಡೆದುಕೊಂಡೆ. 15ನೇ ವಯಸ್ಸಿಗೆ ಬರುವ ಹೊತ್ತಿಗೆ ತಿರುಗಿಬಿದ್ದೆ. ಅಪ್ಪ, ನನ್ನನ್ನೂ ತಾಯಿಯನ್ನೂ ಬಿಟ್ಟು ಹೊರಟು ಹೋದ. ಊಟಕ್ಕೂ ಗತಿಯಿಲ್ಲದ ಸ್ಥಿತಿಗೆ ತಂದುಬಿಟ್ಟಿದ್ದ.. ಇದು ಸ್ವತಃ ಖುಷ್‍ಬೂ ಹೇಳಿಕೊಂಡಿರುವ ಕಥೆ.


ತಂದೆ ತಮ್ಮನ್ನು ಬಿಟ್ಟು ಹೋದ ಕಥೆಯ ಬಗ್ಗೆ ಹೇಳಿಕೊಂಡಿದ್ದರಾದರೂ, ಲೈಂಗಿಕ ಕಿರುಕುಳವನ್ನು ಮುಚ್ಚಿಟ್ಟಿದ್ದರು. ಮನೆಯನ್ನು ಬಿಟ್ಟು ಹೋಗುವಾಗ ನೀವೆಲ್ಲ ನನ್ನ ಬಳಿ ಭಿಕ್ಷೆ ಬೇಡಿಕೊಂಡು ಬರುತ್ತೀರಿ ಎಂದಿದ್ದ. ಸೂಸೈಡ್ ಮಾಡಿಕೊಳ್ಳುತ್ತೇನೆಯೇ ಹೊರತು ನಿನ್ನ ಬಳಿ ಭಿಕ್ಷೆ ಕೇಳಲ್ಲ ಎಂದು ದೂರ ಹೋಗಿದ್ದೆ. ತಂದೆ ದೂರ ತಳ್ಳಿದಾಗ ಖುಷ್‍ಬೂ ಅವರ ತಾಯಿ ಮತ್ತು ಮೂವರು ಸಹೋದರರು ಖುಷ್ ಜೊತೆಯಲ್ಲೇ ಉಳಿದಿದ್ದರು. ಮುಸ್ಲಿಮರಾದ ಖುಷ್`ಬೂಗೆ ತಂದೆಯಿಲ್ಲದ ಬಾಲ್ಯವನ್ನು ಎದುರಿಸುವುದು ಇನ್ನೂ ಕಷ್ಟವಾಗಿತ್ತು. ಸಿನಿಮಾದಲ್ಲಿ ನಟಿಸುತ್ತಲೇ ಎಲ್ಲ ತಮ್ಮಂದಿರನ್ನೂ ದಡ ಸೇರಿಸಿದ ಖುಷ್ ಬೂ, ತಮ್ಮ ತಂದೆ ತಮ್ಮನ್ನು ಬಿಟ್ಟು ಹೋಗಿದ್ದರ ನಿಜ ಕಾರಣವನ್ನು ಇದೀಗ ಬಾಯ್ಬಿಟ್ಟಿದ್ದಾರೆ.
ಅಂದಹಾಗೆ ಖುಷ್`ಬೂ ಈಗ ರಾಜಕಾರಣದಲ್ಲಿದ್ದಾರೆ. ಡಿಎಂಕೆ, ಕಾಂಗ್ರೆಸ್‍ನಲ್ಲಿದ್ದ ಖುಷ್`ಬೂ ಈಗ ಬಿಜೆಪಿ ನಾಯಕಿ.



