ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ. ಹೀಗೆಂದು ಸಿಟಿ ರವಿ ಹೇಳಿದ್ದಾರೆ ಎಂದು ಕೆಲವು ದಿನಗಳ ಹಿಂದೆ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಇಂಥಾದ್ದೊಂದು ಸುದ್ದಿ ನಿಜವಾ..? ಸುಳ್ಳಾ..? ಚುನಾವಣೆ ಹತ್ತಿರದಲ್ಲಿರುವಾಗ ಯಾರಾದರೂ ಇಂಥಾ ಹೇಳಿಕೆ ಕೊಡುವುದು ಸಾಧ್ಯವೇ ಎಂಬ ವಿಚಾರ ಮಾಡುವ ಮೊದಲೇ ವೀರಶೈವ ಲಿಂಗಾಯತ ಸಮುದಾಯ ಸಿಡಿದೆದ್ದು ನಿಂತಿತ್ತು. ಸಿಟಿ ರವಿ ಮನೆಗೆ ಮುತ್ತಿಗೆ ಹಾಕಲು ಕರೆಕೊಟ್ಟಿತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಿಟಿ ರವಿ ವಿರುದ್ಧ ಕೆಂಡ ಕಾರತೊಡಗಿದ್ದರು. ಬಿಜೆಪಿ ನಾಯಕರು ಸಿಟಿ ರವಿ ಹಿಂಗ್ಯಾಕ್ ಹೇಳಿದ್ರು ಎಂದು ಯೋಚನೆ ಮಾಡೋಕೆ ಶುರು ಮಾಡಿದ್ದರು.
ಕೊನೆಗೆ ನಾನು ಹಾಗೆ ಹೇಳಿಲ್ಲ ಎಂದು ಸ್ವತಃ ಸಿಟಿ ರವಿ ಸ್ಪಷ್ಟನೆ ಕೊಡಬೇಕಾಗಿ ಬಂದಿತ್ತು. ನಂತರವೇ ಬಿಜೆಪಿ ನಾಯಕರು ಧ್ವನಿಯೆತ್ತಿದ್ದು. ಅದು ವಿಜಯೇಂದ್ರ ಮೇಲಿನ ಆಕ್ರೋಶವನ್ನು ಈ ರೀತಿ ಹೊರಹಾಕಿದ್ದಾರೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ಸುಳ್ ಸುದ್ದಿ ವೈರಲ್ ಆಗುವ ಹಿಂದಿನ ದಿನ ಸಿಟಿ ರವಿ “ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಕಿಚನ್`ನಲ್ಲಿ ಡಿಸೈಡ್ ಆಗುವುದಿಲ್ಲ’’ ಎಂದು ಹೇಳಿಕೆ ನೀಡಿದ್ದರು. ವಿಜಯೇಂದ್ರ ಅವರಿಗೆ ಶಿಕಾರಿಪುರ ಟಿಕೆಟ್ ಘೋಷಿಸಿದ್ದ ಯಡಿಯೂರಪ್ಪನವರಿಗೆ ಇದು ಪರೋಕ್ಷ ಟಾಂಗ್ ಎಂದೇ ವಿಶ್ಲೇಷಣೆ ಮಾಡಲಾಗಿತ್ತು. ಈ ಕ್ಷಣಕ್ಕೂ ಕೂಡಾ ಯಡಿಯೂರಪ್ಪ ಮತ್ತು ಸಿಟಿ ರವಿ ನಡುವೆ ಎಲ್ಲವೂ ಸರಿಯಾಗಿದೆ ಎಂಬ ವಿಷಯವನ್ನ ಖುದ್ದು ಬಿಜೆಪಿಯವರೂ ಒಪ್ಪುವುದಿಲ್ಲ. ಅದು ಬೇರೆ ವಿಷಯ.


ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಕಾಂಗ್ರೆಸ್ ಪಕ್ಷ ಸುಳ್ಳು ಸುದ್ದಿ ಹರಡಿ ಜಾತಿ ಆಧಾರದ ಮೇಲೆ ಚುನಾವಣೆ ಮಾಡಲು ಹೊರಟಿತ್ತು ಎಂದು ಆಪಾದಿಸಿದ್ದಾರೆ. ಪ್ರಕಟಿತ ಸುದ್ದಿಯ ಸತ್ಯಾ ಸತ್ಯತೆ ಪರಿಶೀಲಿಸಿ ಪ್ರಕರಣದ ದಾಖಲಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗೆ ದೂರನ್ನು ಸಲ್ಲಿಸಿದ್ದು ಐಟಿ ಸೆಲ್ನ ಕಾರ್ಯದರ್ಶಿ ಹರೀಶ್ ಕೆಂಗಲಹಳ್ಳಿ ,ಕಾಂಗ್ರೆಸ್ನ ಮುಖಂಡ ಗುರು ಪಾಟೀಲ್ , ಯುವ ಕಾಂಗ್ರೆಸ್ನ ಕಾರ್ಯದರ್ಶಿಸುವರ್ಣ ಗಿರಿಕುಮಾರ್ ಸುಳ್ಳು ಸುದ್ದಿ ಹರಿಬಿಟ್ಟಿರುವುದು ಸಾಬೀತಾಗಿ ಮೂವರ ಮೇಲು ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.



