ಈ ಚುನಾವಣೆ ಘೋಷಣೆಯಾದಾಗಿನಿಂದಲೂ ನಾಯಕರು ಹತೋಟಿ ತಪ್ಪುತ್ತಲೇ ಇದ್ದಾರೆ. ಮಾತಿನ ಭರವೋ.. ಅತ್ಯುತ್ಸಾಹವೋ.. ಗೊತ್ತಿಲ್ಲ. ನಾಯಕರ ನಾಲಿಗೆಗಳು ನಿಯಂತ್ರಣದಲ್ಲಂತೂ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ನಾಯಿಮರಿಗೆ ಹೋಲಿಸಿದ್ದು, ನಳೀನ್ ಕುಮಾರ್ ಕಟೀಲು, ಅಭಿವೃದ್ಧಿಯನ್ನೆಲ್ಲ ಬಿಟ್ಹಾಕಿ, ಲವ್ ಜಿಹಾದ್ ನೋಡಿ ವೋಟ್ ಹಾಕಿ ಎಂದಿದ್ದು, ಸಿಟಿ ರವಿಯವರ ಸಿದ್ರಾಮುಲ್ಲಾಖಾನ್ ಹೇಳಿಕೆ, ಕುಮಾರಸ್ವಾಮಿಯವರ ಬ್ರಾಹ್ಮಣ ಸಿಎಂ ವಿವಾದ, ಎದುರಾಳಿ ನಾಯಕರನ್ನೆಲ್ಲ ಸಿದ್ದರಾಮಯ್ಯ ಏಕವಚನದಲ್ಲೇ ಟೀಕಿಸುವುದು.. ಇವೆಲ್ಲವೂ ಇದುವರೆಗಿನ ಎಲೆಕ್ಷನ್ ಕೌಂಟರ್ ಮತ್ತು ಎನ್ ಕೌಂಟರ್. ಅದರಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವುದು ಸಚಿವ ಅಶ್ವಥ್ ನಾರಾಯಣ್.

ಟಿಪ್ಪು ಇದ್ದರೆ ಸಿದ್ದರಾಮಯ್ಯ ಬಂದು ಬಿಡುತ್ತಾರೆ. ಟಿಪ್ಪು ಬೇಕಾ..? ಸಾವರ್ಕರ್ ಬೇಕಾ.?ಯೋಚಿಸಿ.
ಟಿಪ್ಪು ಸುಲ್ತಾನ್ನನ್ನು ಎಲ್ಲಿಗೆ ಕಳಿಸಬೇಕು..?. ಉರಿಗೌಡ, ನಂಜೇಗೌಡ ಏನು ಮಾಡಿದರು?. ಹಂಗೆ ಇವರನ್ನು ಕೂಡ ಹೊಡೆದು ಹಾಕಬೇಕು. ಅ ರೀತಿ ಕಳಿಸಿಕೊಡುವಂತಹದ್ದು ಆಗಬೇಕು. ನಮ್ಮತನ ಕಾಪಾಡುವುದು ಬಿಜೆಪಿ ಮಾತ್ರ. ಇದು ಅಶ್ವತ್ಥ್ ನಾರಾಯಣ್ ಮಾತಿನ ಸಾರಾಂಶ. ಉರಿಗೌಡ ಮತ್ತು ನಂಜೇಗೌಡ, ಟಿಪ್ಪುವಿನ ಸಂಹಾರಕ್ಕೆ ಹೋರಾಡಿದ್ದು ಇತಿಹಾಸದ ಪುಟಗಳಲ್ಲಿದೆ. ಆದರೆ ಅದು ಯುದ್ಧ. ಅವರಂತೆಯೇ ಸಿದ್ದರಾಮಯ್ಯಗೆ ಮಾಡಬೇಕು ಎನ್ನುವ ಹೇಳಿಕೆಯ ಅರ್ಥ ಏನು ಎನ್ನುವುದು ಎಲ್ಲರಿಗೂ ಅರ್ಥವಾಗುವಂಥದ್ದೇ.
ಸಚಿವ ಅಶ್ವಥ್ ನಾರಾಯಣ್ ಟೀಕೆಗೆ ಸಿದ್ದರಾಮಯ್ಯ ಕೆರಳಿ ನಿಂತಿದ್ದಾರೆ. ಅವನು ಮನುಷ್ಯನೋ..? ರಾಕ್ಷಸರೋ? ನೀವೆ ತಿಳಿದುಕೊಳ್ಳಿ? ಸಿದ್ದರಾಮಯ್ಯರನ್ನ ಟಿಪ್ಪುವಿನಂತೆ ಹೊಡೆದು ಹಾಕಬೇಕು ಅಂದ್ರಂತೆ..? ಹೊಡೆದು ಹಾಕೋಕೆ ನೀವು ಬಿಡ್ತಿರಾ..? ಟಿಪ್ಪು ಬಸವಣ್ಣ, ಸಂಗೊಳ್ಳಿ ರಾಯಣ್ಣ, ಎಲ್ಲರನ್ನೂ ಗೌರವಿಸ್ತೇನೆ. ನಾನು ಮನುಷ್ಯತ್ವ ಇರೋನು. ಹಿಂದುಗಳನ್ನ ಪ್ರೀತಿಸ್ತೀನಿ, ಮುಸ್ಲಿಂ, ಕ್ರೈಸ್ತರನ್ನೂ ಪ್ರೀತಿಸುತ್ತೀನಿ ಎಂದು ಉತ್ತರ ಕೊಟ್ಟಿದ್ದಾರೆ ಸಿದ್ದರಾಮಯ್ಯ.


ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಹಾಗೂ ಶಾಸಕ ಸಿ.ಟಿ. ರವಿ ಅವರು ಕೂಡಲೇ ಸಿದ್ದರಾಮಯ್ಯ ಅವರ ಬಳಿ ಕ್ಷಮೆಯಾಚಿಸುವಂತೆ ಕರ್ನಾಟಕ ಪ್ರದೇಶ ಕುರುಬ ಸಮಾಜ ಯುವ ಘಟಕದ ತಾಲೂಕು ಅಧ್ಯಕ್ಷ ಪಂಚವಳ್ಳಿ ಲೋಹಿತ್ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವಾಗ ತಮ್ಮ ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು ಎಂದು ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ಕ್ಷಮೆಯಾಚಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದ ಆ ವಿಡಿಯೋದಲ್ಲೇನಿದೆ?
ಸಾತನೂರು ತಾಲೂಕಿನ ಹೊರವಲಯದಲ್ಲಿ ಕಂಬದ ನರಸಿಂಹಸ್ವಾಮಿ ದೇಗುಲ ಇದೆ. ಆ ದೇಗುಲದಲ್ಲಿ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಸಿದ್ದರಾಮಯ್ಯರನ್ನು ಟಿಪ್ಪುಗೆ ಹೋಲಿಸುತ್ತಾರೆ. ಟಿಪ್ಪುವಿಗೆ ಉರಿಗೌಡ, ನಂಜೇಗೌಡ ಏನು ಮಾಡಿದರು ಎಂದು ಸಭಿಕರನ್ನು ಪ್ರಶ್ನಿಸುತ್ತಾರೆ. ಆಗ ಸಭಿಕರು ಮೇಲಕ್ಕೆ ಕಳಿಸಿದ್ರು, ಹೊಡೆದು ಹಾಕಿದ್ರು ಎನ್ನುತ್ತಾರೆ. ಅದೇ ರೀತಿ ಇವರನ್ನೂ ಹೊಡೆದು ಹಾಕಬೇಕು. ಮೇಲಕ್ಕೆ ಕಳುಹಿಸಬೇಕುಎನ್ನುತ್ತಾರೆ ಅಶ್ವತ್ಥ್ ನಾರಾಯಣ್. ಆಮೇಲೆ ಟಿಪ್ಪು ಬೇಕಾ..? ಸಾವರ್ಕರ್ ಬೇಕಾ? ಎಂದು ಪ್ರಶ್ನಿಸುತ್ತಾರೆ.



