ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ನ್ಯಾಯಾಲಯದಿಂದ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದಾರೆ. ಬೆಂಗಳೂರಿನ 21ನೇ ಸಿಸಿಹೆಚ್ ಕೋರ್ಟ್ ನಿಂದ ಈ ಆದೇಶ ತಂದಿದ್ದಾರೆ. ಈ ಇಂಜಂಕ್ಷನ್ ಆದೇಶದಿಂದಾಗಿ ಯಾವುದೇ ಮಾಧ್ಯಮಗಳು, ಸುದ್ದಿ ಸಂಸ್ಥೆಗಳು, ವೆಬ್‍ಸೈಟುಗಳು, ಯೂಟ್ಯೂಬ್ ಚಾನೆಲ್ಲುಗಳು.. ಯಾರೊಬ್ಬರೂ ಈ ವಿಡಿಯೋ ಪ್ರಸಾರ ಮಾಡುವಂತಿಲ್ಲ. ಸುಳ್ಳು ಸುಳ್ಳು ವಿಡಿಯೋಗಳನ್ನು ವಾಟ್ಸಪ್ ಮೊದಲಾದ ಮೀಡಿಯಾಗಳ ಮೂಲಕ ಟ್ರಾನ್ಸ್‍ಫರ್ ಮಾಡುವುದೂ ಕೂಡಾ ಅಪರಾಧವೇ. ಈ ಮೂಲಕ ಸುದೀಪ್ ಕೋರ್ಟ್ ರಕ್ಷಣೆ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ಸುದೀಪ್ ಅವರಿಗೆ ನಿಮ್ಮ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುತ್ತೇವೆ ಎಂದು ಎರಡು ಬೆದರಿಕೆ ಪತ್ರ ಬಂದಿತ್ತು. ಪುಟ್ಟೇನಹಳ್ಳಿ ಸ್ಟೇಷನ್ನಿನಲ್ಲಿ ಕೇಸ್ ಕೂಡಾ ದಾಖಲಾಗಿತ್ತು. ಐಪಿಸಿ ಸೆಕ್ಷನ್ 506, 504 ಅಡಿಯಲ್ಲಿ ಪ್ರಕರಣವನ್ನ ಪೊಲೀಸರು ದಾಖಲಿಸಿಕೊಂಡಿದ್ದರು. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ಕಿಚ್ಚ ಸುದೀಪ್ ಪ್ರತಿಬಂಧಕಾಜ್ಞೆ ತಂದಿದ್ದಾರೆ.
ವಿಚಾರಣೆ, ತನಿಖೆಗೆ ಮುಂದಾದ ಪೊಲೀಸರಿಗೆ ಆರೋಪಿಗಳು ಪ್ಲಾನ್ ಮಾಡಿ ಪತ್ರಗಳನ್ನು ಪೋಸ್ಟ್ ಮಾಡಿರುವುದು ಗೊತ್ತಾಗಿದೆ. ಸ್ವಿಫ್ಟ್ ಕಾರು ಬಳಸಿದ್ದಾರೆ. ಆದರೆ ನಂಬರ್ ಪ್ಲೇಟ್ ಚೇಂಜ್ ಮಾಡಿದ್ದಾರೆ. ಯಾರದ್ದೋ ಕಾರಿನ ನಂಬರ್ ಅದು, ಕಾರಿನ ನಿಜವಾದ ಓನರ್`ಗೆ ಈ ವಿಷಯವೇ ಗೊತ್ತಿಲ್ಲ. ಮುಖದ ಗುರುತು ಸಿಗುತ್ತಿಲ್ಲ. ಹೀಗೆಲ್ಲ ಸಂಚು ಮಾಡಿ ಪತ್ರವನ್ನು ಪೋಸ್ಟ್ ಮಾಡಲಾಗಿದ್ದು, ಇದರ ಹಿಂದೆ ದೊಡ್ಡ ಕೈವಾಡವೇ ಇದೆ ಎಂದು ಶಂಕಿಸಲಾಗಿದೆ. ಹೀಗಾಗಿಯೇ ಸುದೀಪ್ ಇಂಜಂಕ್ಷನ್ ಆರ್ಡರ್ ತಂದಿದ್ದಾರೆ.
ಈ ತಡೆಯಾಜ್ಞೆ ಉಲ್ಲಂಘಿಸಿದರೆ ಏನಾಗುತ್ತೆ..?
ಇನ್ನು ಮುಂದೆ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಆದರೂ ಅದನ್ನು ಶೇರ್ ಮಾಡುವುದಾಗಲೀ, ಸುದ್ದಿ ಮಾಡುವುದಾಗಲೀ ಅಪರಾಧ. ನ್ಯಾಯಾಂಗ ನಿಂದನೆಯಾಗಲಿದೆ. ಶಿಕ್ಷೆಯಾಗಲಿದೆ. ಇದು ಎಲ್ಲ ರೀತಿಯ ಟಿವಿ, ಪತ್ರಿಕೆ, ಡಿಜಿಟಲ್ ಮೀಡಿಯಾಗಳಿಗೂ ಅನ್ವಯಿಸಲಿದೆ. ಅಕಸ್ಮಾತ್ ಸುದ್ದಿ ಮಾಡಿದರೆಂದೇ ಇಟ್ಟುಕೊಳ್ಳಿ, ಏಕೆಂದರೆ ಆಗ ಅದು ಮಾನನಷ್ಟ ಮೊಕದ್ದಮೆಯಷ್ಟೇ ಆಗಿರಲ್ಲ. ಸ್ಸೋ.. ಸುದ್ದಿಯನ್ನು ಹಾಕಿ ಆ ಕ್ಷಣದ ಮಟ್ಟಿಗೆ ಟ್ರೆಂಡ್ ಏನೋ ಆಗಬಹುದು. ಆದರೆ ನ್ಯಾಯಾಂಗ ನಿಂದನೆ ಕೇಸ್ ಬೆನ್ನು ಬಿದ್ದರೆ ಕಷ್ಟ ಕಷ್ಟ. ಜೈಲೂ ಆಗಬಹುದು. ದಂಡವನ್ನಂತೂ ಕಟ್ಟಲೇಬೇಕು.
ನಿರ್ಬಂಧಕಾಜ್ಞೆ ನಂತರ ಸುದೀಪ್ ಸ್ಪಷ್ಟನೆ :
ಕಿಡಿಗೇಡಿಗಳು ನನ್ನದಲ್ಲದ ಫೇಕ್ ವಿಡಿಯೋಗಳನ್ನ ವೈರಲ್ ಮಾಡಬಹುದು. ಅದರ ವಿರುದ್ಧ ಇದು ಮುನ್ನೆಚ್ಚರಿಕೆ ಕ್ರಮವಷ್ಟೇ. ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಡಿಜಿಟಲ್ ವೇದಿಕೆಗಳಿವೆ. ಅವುಗಳನ್ನ ದುರ್ಬಳಕೆ ಮಾಡಿಕೊಂಡು ಮಾನಹಾನಿ ಮಾಡುವ ಹುನ್ನಾರದ ವಿರುದ್ಧ ಈ ತಡೆಯಾಜ್ಞೆ ತಂದಿದ್ದೇವೆ. ಇದನ್ನು ಮಾಧ್ಯಮ ಮಿತ್ರರು ಅರ್ಥ ಮಾಡಿಕೊಳ್ಳಬೇಕು. ಪ್ರೀತಿ ಇರಲಿ ಎಂದು ಹೇಳಿದ್ದಾರೆ ಸುದೀಪ್.



