ನಯನ ಮೋಟಮ್ಮ. ಮೂಡಿಗೆರೆ ಕ್ಷೇತ್ರದ ಶಾಸಕಿ. ಮಾಜಿ ಸಚಿವೆ ಮೋಟಮ್ಮನವರ ಪುತ್ರಿ. ಮೊದಲ ಬಾರಿಗೆ ಶಾಸಕಿಯಾಗಿರುವ ನಯನ ಮೋಟಮ್ಮನವರ ಚಾರಿತ್ರ್ಯ ಹರಣಕ್ಕೆ ಮುಂದಾಗಿದ್ದಾರೆ ದುಷ್ಕರ್ಮಿಗಳು. ನಯನ ಮೋಟಮ್ಮ ಖಾಸಗಿ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವಿಕೃತಿ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ನಯನ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಮಾತು, ಕೃತಿ ಮತ್ತು ಕಾನೂನು ಕ್ರಮ.. ಮೂರೂ ಉತ್ತರ ಕೊಟ್ಟಿದ್ದಾರೆ ನಯನ ಮೋಟಮ್ಮ.
ತಮ್ಮ ಖಾಸಗಿ ಫೋಟೋಗಳನ್ನು ಸ್ವತಃ ತಾವೇ ಬಿಡುಗಡೆ ಮಾಡಿರುವ ನಯನ ಮೋಟಮ್ಮ ಸೋಲಿನ ಹತಾಶೆ ನಿಮ್ಮನ್ನು ಇನ್ನಷ್ಟು ಕಾಡದಿರಲಿ. ಹೌದು, ರಾಜಕೀಯವಾಗಿ ನಾನು, ನನ್ನತನ, ನನ್ನ ವೈಯಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು ಎಂದಿದ್ದಾರೆ.
ನಯನ ಮೋಟಮ್ಮ ಅವರು ಸ್ವಿಮ್ಮಿಂಗ್ ಪೂಲ್`ನಲ್ಲಿದ್ದಾಗ ತೆಗೆದಿರುವ ಫೋಟೋಗಳಿವು ಎನ್ನಲಾಗಿದೆ. ನಯನ, ಲಾಯರ್ ಓದಿದವರು. ಹಲವು ಕಾರ್ಪೊರೇಟ್ ಕಂಪೆನಿಗಳಿಗೆ ವಕೀಲರಾಗಿ ಕೆಲಸ ಮಾಡಿದ್ದವರು. ಇದರಲ್ಲಿ ಮುಚ್ಚಿಡುವಂತದ್ದೇನೂ ಇಲ್ಲ. ನಾನೊಬ್ಬ ಲಾಯರ್. ಕ್ಲೈಂಟ್`ಗಳನ್ನು ಭೇಟಿ ಮಾಡುವಾಗ ಕಾರ್ಪೊರೇಟ್ ಡ್ರೆಸ್ ಧರಿಸುತ್ತೇನೆ. ಸೀರೆಯನ್ನೂ ಧರಿಸುತ್ತೇನೆ. ನನಗೆ ಡ್ಯಾನ್ಸ್ ಗೊತ್ತಿದೆ. ಅಥ್ಲೆಟ್ ಕೂಡಾ. ಸಭೆ, ಸಮಾರಂಭಗಳಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತೇನೆ. ಇದರಲ್ಲಿ ಮುಚ್ಚಿಡುವಂತದ್ದೇನಿದೆ ಎಂದಿರುವ ನಯನ ಮೋಟಮ್ಮ ನಾನು ಮಾಡುವ ಕೆಲಸದ ಮೇಲೆ ನನ್ನ ಬಗ್ಗೆ ನಿರ್ಧಾರ ಮಾಡಬೇಕು ಎಂದಿದ್ದಾರೆ.
ಈ ವಿಡಿಯೋ ರಿಲೀಸ್ ಮಾಡಿದ್ದವರು ನಾರಿ ವಿತ್ ಸ್ಯಾರಿ ಎಂದು ಕ್ಯಾಪ್ಷನ್ ಕೊಟ್ಟು ಅವಹೇಳನ ಮಾಡಿದ್ದರು. ಶಿವಮೊಗ್ಗದ ಬಿಜೆಪಿ ಸಂಘಟನೆಗೆ ಹತ್ತಿರವಾದವರೇ ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸ್ ದೂರನ್ನೂ ಕೊಡಲಾಗಿದೆ. ಈ ವಿಡಿಯೋಗಳು ನಯನ ಅವರ ಸೋಷಿಯಲ್ ಮೀಡಿಯಾ ಪೇಜಿನಲ್ಲೇ ಇವೆ. ನಾನು ಯಾವುದನ್ನು ಮುಚ್ಚಿಟ್ಟಿಲ್ಲ. ನಾನು ಹೇಗಿರುತ್ತೇನೆ ಎನ್ನುವುದು ಜನರಿಗೆ ಗೊತ್ತಿರಬೇಕು. ಮತದಾರರ ಮುಂದೆ ನಾಟಕ ಮಾಡಬಾರದು.ಜನ ನನ್ನ ಕೆಲಸವನ್ನಷ್ಟೇ ನೋಡಬೇಕು ಎಂದಿದ್ದಾರೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ.ನಯನ ಮೋಟಮ್ಮ ಅವರಿಗೀಗ 43 ವರ್ಷ. ಹೈಕೋರ್ಟ್ ಸೇರಿದಂತೆ ಹಲವೆಡೆ ವಕೀಲಿಕೆ ಮಾಡಿದ್ದವರು. ಮಾಸ್ಟರ್ ಡಿಗ್ರಿ ಮಾಡಿದ್ದು ಪೆನ್ಸುಲ್ವೇನಿಯಾ ಯುನಿವರ್ಸಿಟಿಯಲ್ಲಿ. ಈಗ ಅತ್ಯಂತ ಕಿರಿಯ ವಯಸ್ಸಿನ ಶಾಸಕಿ ಎನ್ನುವ ಹೆಗ್ಗಳಿಕೆಯೂ ಅವರದ್ದಾಗಿದೆ.



