ರಾಜ್ಯ ಕಾಂಗ್ರೆಸ್‍ನ ಪ್ರಭಾವಿ ಮುಖಂಡರಾಗಿದ್ದ, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಧ್ರುವನಾರಾಯಣರಿಗೆ ಹಠಾತ್ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವ ನಾರಾಯಣ ಅವರು ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಇನ್ನು ಇಂದಿನ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗಳನ್ನು ಮುಂದೂಡುವ ಸಾಧ್ಯತೆಯಿದ್ದು, ರಾಣೆಬೆನ್ನೂರಿನಲ್ಲಿ ನಡೆಯಲಿರುವ ಪ್ರಜಾಧ್ವನಿ ಸಮಾವೇಶವನ್ನು ಮುಂದೂಡುವ ಸಾಧ್ಯತೆಯಿದೆ. ಧ್ರುವನಾರಾಯಣ ಅವರಿಗೆ ನಂಜನಗೂಡು ಕ್ಷೇತ್ರಕ್ಕೆ ಬಹುತೇಕ ಟಿಕೆಟ್ ಖಚಿತವಾಗಿತ್ತು. ಮಹಾದೇವಪ್ಪ ಹಾಗೂ ಧ್ರುವನಾರಾಯಣ ನಡುವೆ ಸಿದ್ದರಾಮಯ್ಯ, ಡಿಕೆಶಿ ಸಂಧಾನ ಕೂಡ ಮಾಡಿದ್ದರು.
1983ರಲ್ಲಿ ಕಾಂಗ್ರೆಸ್ ಸೇರಿದ ಆರ್. ಧ್ರುವನಾರಾಯಣ, 2004ರಲ್ಲಿ ಸಂತೇಮರಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ಕ್ಷೇತ್ರಗಳಿಂದ ಶಾಸಕರಾಗಿ ಜಯ ಗಳಿಸಿದ್ದರು. 1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎ.ಆರ್. ಕೃಷ್ಣಮೂರ್ತಿ ಅವರ ಎದುರು ಪರಾಜಿತರಾದರು. ಆದರೆ ಇದೇ ಕೃಷ್ಣಮೂರ್ತಿ ಅವರನ್ನು 2004ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1 ಮತದಿಂದ ಧೃವನಾರಾಯಣ ಸೋಲಿಸಿದ್ದರು. ಹಾಗೆಯೇ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕೂಡ ಕೃಷ್ಣಮೂರ್ತಿ ಅವರನ್ನು ಸೋಲಿಸಿ ಸಂಸದರಾದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಧ್ರುವನಾರಾಯಣ ಮೂಲತಃ ವೃತ್ತಿಯಿಂದ ಕೃಷಿಕರು.
ಧ್ರುವ ನಾರಾಯಣ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.



