ಗೃಹಿಣಿಯರಿಗೆ ಪ್ರತಿ ತಿಂಗಳೂ 2 ಸಾವಿರ ರೂ. ಗೃಹಲಕ್ಷ್ಮೀ ಘೋಷಣೆ
ಗೃಹ ಜ್ಯೋತಿ ಘೋಷಣೆ ಅಡಿಯಲ್ಲಿ ಎಲ್ಲ ಮನೆಗೂ ಪ್ರತಿ ತಿಂಗಳೂ 200 ಯುನಿಟ್ ವಿದ್ಯುತ್ ಉಚಿತ.
ಅದಾದ ಮೇಲೆ ಪ್ರತಿ ತಿಂಗಳೂ ಬಡ ಕುಟುಂಬಗಳಿಗೆ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತ..
ಹೀಗೆ ಘೋಷಣೆಗಳ ಮೇಲೆ ಘೋಷಣೆ ಕೂಗಿರುವ ಕಾಂಗ್ರೆಸ್ ಈಗ ನಿರುದ್ಯೋಗ ಭತ್ಯೆ ಘೋಷಣೆ ಮಾಡಿದೆ. ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ ಪ್ರಭಾವವೂ ಇರಬಹುದು.
ಯುವ ಜನಾಂಗವನ್ನು ಉದ್ದೇಶಿಸಿ ನಿರುದ್ಯೋಗ ಯುವಕ, ಯುವತಿಯರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುವುದು. ಡಿಪ್ಲೋಮಾ ಆದವರಿಗೆ 1500 ರೂ., ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆ ಕೊಡಲಾಗುವುದು. ರಾಹುಲ್ ಗಾಂಧಿ ಘೋಷಣೆ ಮೂಲಕ ಯುವಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಒಂದು ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದರೆ ಮುಖ್ಯವಾಗಿ ಗಮನ ಸೆಳೆಯಬೇಕಿರುವುದು ಮಹಿಳೆಯರು ಮತ್ತು ಯುವ ಜನಾಂಗವನ್ನು. ಅದನ್ನು ಟಾರ್ಗೆಟ್ ಮಾಡಿಕೊಂಡೇ ಈ ಉಚಿತ ಭಾಗ್ಯಗಳನ್ನು ಘೋಷಿಸಿದೆ ಕಾಂಗ್ರೆಸ್. ಈಗಾಗಲೇ ಇರುವ ಹಲವು ಉಚಿತ ಸ್ಕೀಂಗಳಿಗೆ ಜೊತೆ ಜೊತೆಯಾಗಿ ಈ ಯೋಜನೆಗಳೂ ಜಾರಿಯಾಗುತ್ತವೆ.
ಅರ್ಥ ತಜ್ಞರು ಏನಂತಾರೆ..?
ಈ ಯೋಜನೆ ಬಗ್ಗೆ ಆರ್ಥಿಕ ತಜ್ಞರು ಅಪಾಯದ ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಬಜೆಟ್ ಎರಡೂವರೆ ಲಕ್ಷ ಕೋಟಿ. ಇದರಲ್ಲಿ ಸುಮಾರು ಒಂದು ಲಕ್ಷ ಕೋಟಿ ಕೇವಲ ಸರ್ಕಾರಿ ನೌಕರರ ಸಂಬಳ, ಸವಲತ್ತು, ಭತ್ಯೆಗಳಿಗೇ ಖರ್ಚಾಗುತ್ತದೆ. ಇನ್ನು ಈ ಎಲ್ಲ ಯೋಜನೆಗಳನ್ನು ಈಗ ಘೋಷಿಸಿದಂತೆಯೇ ಯಥಾವತ್ ಜಾರಿಗೆ ತಂದರೆ ಅದರ ವೆಚ್ಚ 50 ಸಾವಿರ ಕೋಟಿಯ ಸಮೀಪ ಬರುತ್ತದೆ. ಹೀಗೆ ಖರ್ಚಾದರೆ ಅದು ಸರ್ಕಾರಕ್ಕೆ ಬರುವ ತೆರಿಗೆಗಳ ಮೇಲೂ ಪರಿಣಾಮ ಬೀರುತ್ತದೆ. ಖರ್ಚು ಹೆಚ್ಚಿ, ಆದಾಯವೇ ಕಡಿಮೆಯಾದರೆ ಆಗ ಆರ್ಥಿಕ ವ್ಯವಸ್ಥೆ ಹಳಿ ತಪ್ಪಬಹುದು ಎಂಬ ಎಚ್ಚರಿಕೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಸ್ವತಃ 12ಕ್ಕೂ ಹೆಚ್ಚು ಬಜೆಟ್ ಮಂಡಿಸಿದವರು. ಸಿದ್ದರಾಮಯ್ಯನವರ ಪ್ರಕಾರ ಯಾವ ಆರ್ಥಿಕ ಪಲ್ಲಟವೂ ಆಗಲ್ಲ. ನಾವು ಎಲ್ಲವನ್ನೂ ಲೆಕ್ಕ ಹಾಕಿಯೇ ಮಾಡಿದ್ದೇವೆ. ಯಾವುದೂ ಸಮಸ್ಯೆಯಾಗಲ್ಲ ಎನ್ನುತ್ತಾರೆ ಇಂಧನ ಸಚಿವರೂ ಆಗಿದ್ದ ಡಿಕೆ ಶಿವಕುಮಾರ್.


ಕಾಂಗ್ರೆಸ್ ಈ ರೀತಿ ಉಚಿತ ಘೋಷಣೆಗಳನ್ನು ಘೋಷಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಛತ್ತೀಸ್‍ಘಡ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ರೀತಿಯ ಉಚಿತ ಸ್ಕೀಮ್ ಘೋಷಿಸಿದ್ದಾರೆ. ಆದರೆ ಜಾರಿಗೆ ಬಂದಿವೆಯೇ ಎಂದು ಹುಡುಕಿದರೆ ಇಲ್ಲ. ರಾಜಸ್ಥಾನದಲ್ಲಿ ಪದವೀಧರರಿಗೆ ಪ್ರತಿತಿಂಗಳು .3,500 ಮಾಸಾಶನ ಕೊಡುತ್ತೇವೆ ಎಂದಿದ್ದರೂ ಈವರೆಗೂ ಕೊಟ್ಟಿಲ್ಲ.
ಛತ್ತೀಸ್ಗಡನಲ್ಲಿ 1500 ಕೊಡುತ್ತೇವೆ ಅಂತ ಹೇಳಿದ್ದರು. ಅದನ್ನೂ ಈವರೆಗೆ ಕೊಟ್ಟಿಲ್ಲ. ಹೀಗೆ ಅವರು 4 ರಾಜ್ಯಗಳಲ್ಲಿ ಹೇಳಿದಂತೆ ಎಲ್ಲೂ ನಡೆದುಕೊಂಡಿಲ್ಲ. ಗೆಲ್ಲಲು ಅಸಾಧ್ಯವಾಗಿರುವ ಕಾರಣ ಬೋಗಸ್ ಘೋಷಣೆ ಮಾಡುತ್ತಿದ್ದಾರೆ. ಸುಳ್ಳು ಹೇಳಿ ಜನರನ್ನು ಮೋಸ ಮಾಡಲು ಹೊರಟ್ಟಿದ್ದಾರಷ್ಟೆ. ಇದನ್ನು ಜನ ನಂಬಲ್ಲ ಎಂದರು. ಹಿಂದೆ ಇವರೇ 2013ರಲ್ಲಿ ಹತ್ತು ಕೆ.ಜಿ. ಅಕ್ಕಿ ಕೊಡುತ್ತಿದ್ದರು. ಬಳಿಕ ಇವರೇ 5 ಕೆ.ಜಿ. ಅಕ್ಕಿ ಕೊಡುವುದನ್ನು ನಿಲ್ಲಿಸಿದರು. ಚುನಾವಣೆ ಬಂದಾಗ ಏಳು ಕೆ.ಜಿ. ಅಕ್ಕಿಯನ್ನು ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಚುನಾವಣೆ ಬಂದಾಗ ಈ ರೀತಿ ಬೋಗಸ್ ನೀತಿ ಮಾಡಿ, ಸುಳ್ಳು ಹೇಳುವುದು ಕಾಂಗ್ರೆಸ್ನ ಗುಣ ಎಂದು ಟೀಕಿಸಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.



