ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಯಲ್ಲಿ ಟಿಕೆಟ್ ಬಹುತೇಕ ಫೈನಲ್ ಆಗಿವೆ. ಬಹುತೇಕ ಯುಗಾದಿ ಹೊತ್ತಿಗೆ ಅಧಿಕೃತ ಪಟ್ಟಿ ಹೊರಬೀಳಬಹುದು. ಈಗಾಗಲೇ ಕೆಲವು ಕಡೆ ಸಿದ್ದರಾಮಯ್ಯ, ಇನ್ನೂ ಕೆಲವು ಕಡೆ ಡಿಕೆ ಶಿವಕುಮಾರ್ ಬಹಿರಂಗವಾಗಿ ಟಿಕೆಟ್ ಘೋಷಿಸಿ ಆಗಿದೆ. ಕೆಲವನ್ನು ಅಳೆದೂ ತೂಗಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈಗ 120 ಕ್ಷೇತ್ರಗಳ ಟಿಕೆಟ್ ಫೈನಲ್ ಆಗಿದೆ. 104 ಕ್ಷೇತ್ರಗಳಿಗೆ ಮೂರು ಜನರ ಶಾರ್ಟ್ ಲಿಸ್ಟ್ ರೆಡಿ ಮಾಡಿ ಕಳಿಸಿಕೊಡಲಾಗಿದೆ. ಈ ಒಟ್ಟಾರೆ ಪ್ರಕ್ರಿಯೆಯಲ್ಲಿ 30 ಜನ ಪಕ್ಷಾಂತರಿಗಳು ಕಾಂಗ್ರೆಸ್‍ಗೆ ಬರುತ್ತಿದ್ದು, ಅವರಿಗೆ ಟಿಕೆಟ್ ಪಕ್ಕಾ ಆಗಿದೆ ಎನ್ನಲಾಗಿದೆ.
ಕೆಲ ಹಾಲಿ ಶಾಸಕರಿಗೆ ಟಿಕೆಟ್ ಫೈನಲ್ ಆಗಿಲ್ಲ
120 ಫೈನಲ್ ಮಾಡಿದ್ದರೂ ಕೆಲವು ಹಾಲಿ ಶಾಸಕರಿಗೇ ಟಿಕೆಟ್ ಫೈನಲ್ ಆಗಿಲ್ಲ. ಮೂಲಗಳ ಪ್ರಕಾರ ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾ ಶಿವಳ್ಳಿ (ಪತಿ ಸಿ.ಎಸ್.ಶಿವಳ್ಳಿ ಅಕಾಲಿಕ ನಿಧನದಿಂದ ತೆರವಾಗಿದ್ದ ಕ್ಷೇತ್ರ) ಅವರಿಗೆ ಟಿಕೆಟ್ ಕ್ಲಿಯರ್ ಆಗಿಲ್ಲ. ವಿ.ಮುನಿಯಪ್ಪ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕಾರಣ ಶಿಡ್ಲಘಟ್ಟಕ್ಕೆ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದ ಗೌಡರಿಗೆ ಟಿಕೆಟ್ ಆಗಿದೆಯಂತೆ. ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ತಮ್ಮ ಬದಲು ಮಗ ಅರುಣ್ ಕುಮಾರ್ ಅವರಿಗೆ, ಪಾವಗಡ ಕ್ಷೇತ್ರದ ಶಾಸಕ ವೆಂಕಟರಮಣಪ್ಪ ಪುತ್ರ ವೆಂಕಟೇಶ್ ಅವರಿಗೆ ಟಿಕೆಟ್ ಬಯಸಿದ್ದಾರೆ. ಅಲ್ಲಿ ಸ್ಥಳೀಯ ಸಮಸ್ಯೆ ಹಿನ್ನಲೆಯಲ್ಲಿ ಟಿಕೆಟ್ ಅಂತಿಮ ಮಾಡಿಲ್ಲ.
ಪಕ್ಷೇತರರಿಗೆ 30 ಟಿಕೆಟ್ ಫಿಕ್ಸ್
ಕಾಂಗ್ರೆಸ್ ಮುಂಚೂಣಿಯಲ್ಲಿದ್ದರೂ ಗೆಲ್ಲುವುದೇ ಮಾನದಂಡ ಎಂದು ಫಿಕ್ಸ್ ಆಗಿದೆ. ಅರಸೀಕೆರೆಯ ಶಿವಲಿಂಗೇಗೌಡ, ಅರಕಲಗೂಡಿನ ಎ.ಟಿ.ರಾಮಸ್ವಾಮಿ ಈಗಾಗಲೇ ಕಾಂಗ್ರೆಸ್ ಜೊತೆಯಲ್ಲಿದ್ದಾರೆ. ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿರುವ ಕೋಲಾರ ಕೂಡಾ ಹಾಲಿ ಜೆಡಿಎಸ್ ಶಾಸಕರೇ ಆಗಿರುವ ಶ್ರೀನಿವಾಸ್ ಗೌಡ ಬಿಟ್ಟುಕೊಟ್ಟಿರುವ ಕ್ಷೇತ್ರ. ಇದೀಗ ಬಿಜೆಪಿಯ ವಿ.ಸೋಮಣ್ಣ, ಕೆ.ಆರ್.ಪೇಟೆ ಕ್ಷೇತ್ರದ ಕೆ.ಸಿ.ನಾರಾಯಣ ಗೌಡ ಅವರಿಗೆ ಕಾಂಗ್ರೆಸ್ ಬಾಗಿಲು ಓಪನ್ ಆಗಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಅವರು ಕಾಂಗ್ರೆಸ್ ಸೇರಲೂಬಹುದು. ಕೊನೆಯ ಕ್ಷಣದಲ್ಲಿ ಯಡಿಯೂರಪ್ಪನವರೇ ಖುದ್ದು ಅಖಾಡಕ್ಕಿಳಿದರೆ ನಿಯಂತ್ರಿಸಲೂಬಹುದು. ಸದ್ಯ ಬಿಜೆಪಿಯಲ್ಲಿ ಮೂವರು ಸಚಿವರು ಕಾಂಗ್ರೆಸ್ ಸೇರಲು ತವಕಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಹಾಗೆ ಬರುತ್ತಿರುವವರಿಗೆ ಸಚಿವ ಸ್ಥಾನದ ಗ್ಯಾರಂಟಿ ಕೊಡಲು ಕಾಂಗ್ರೆಸ್ ನಾಯಕರು, ಅದರಲ್ಲಿಯೂ ವಿಶೇಷವಾಗಿ ಸಿದ್ದರಾಮಯ್ಯ ಒಪ್ಪಿಲ್ಲ. ಡಿಕೆ ಶಿವಕುಮಾರ್ ಕೂಡಾ ಈ ಷರತ್ತಿಗೆ ನೋ ಎಂದಿರುವ ಕಾರಣಕ್ಕೆ ಬಾಗಿಲು ತಟ್ಟುತ್ತಿರುವವರು ಇನ್ನೂ ಗೊಂದಲದಲ್ಲೇ ಇದ್ದಾರೆ.



