ಸೆಂಗೋಲ್ ಎಂಬುದು ರಾಜದಂಡವೇ ಅಲ್ಲ. ಇದು ಕೇವಲ ತಮಿಳುನಾಡಿನ ರಾಜಕೀಯ ಲಾಭಕ್ಕಾಗಿ ಮೋದಿ ಸೃಷ್ಟಿಸಿರುವ ಸುಳ್ಳಿನ ಕಂತೆ ಎನ್ನುತ್ತಿದೆ ಕಾಂಗ್ರೆಸ್. ಇದೊಂದು ವಾಟ್ಸಪ್ ಯೂನಿವರ್ಸಿಟಿಯ ಕಟ್ಟುಕಥೆ ಎನ್ನುವುದು ಕಾಂಗ್ರೆಸ್ ಮುಖಂಡ ಆರೋಪ. ಕಾಂಗ್ರೆಸ್ ಅಷ್ಟೇ ಅಲ್ಲ, ಕಾಂಗ್ರೆಸ್ ಪರ ಇರುವ ನೂರಾರು ಬುದ್ದಿಜೀವಿಗಳೂ ಇದೇ ರೀತಿ ಹೇಳುತ್ತಿದ್ದಾರೆ. ಆದರೆ ಬಿಜೆಪಿ ಅದನ್ನು ನಿರಾಕರಿಸುತ್ತಿದೆ. ಸಂಬಂಧಪಟ್ಟವರೇ ಗುರುತಿಸಿ, ಸಾಕ್ಷಿ ತೋರಿಸಿ ಹೇಳಿದ ಮೇಲೆ ಇದನ್ನು ಒಪ್ಪಿದ್ದೇವೆ. ಕಾಂಗ್ರೆಸ್ ಹಾಗೂ ಬುದ್ದಿಜೀವಿಗಳಿಗೆ ಸಂಸ್ಕøತಿಯ ಬಗ್ಗೆ ಗೌರವವೇ ಇಲ್ಲ ಎನ್ನುತ್ತಿದೆ ಬಿಜೆಪಿ. ಹಾಗಾದರೆ ನಿಜಕ್ಕೂ ಏನಾಗಿದೆ? ಸಾಕ್ಷಿಗಳಿವೆಯಾ? ಕಟ್ಟುಕಥೆಯಾ? ವಾಟ್ಸಪ್ ಯೂನಿವರ್ಸಿಟಿ ಸೃಷ್ಟಿಯಾ? ಸಾಕ್ಷಿಗಳು ಬೆಳಕಿಗೆ ಬಂದಿದ್ದು ಯಾವಾಗ..? ಈ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.
ಮೊದಲಿಗೆ.. ಗುರುಮೂರ್ತಿ ಅವರ ಲೇಖನ
2021ರ ಮೇ 5ರಂದು ‘ತುಘಲಕ್’ ಪತ್ರಿಕೆಯಲ್ಲಿ ಗುರುಮೂರ್ತಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ತಮಿಳುನಾಡಿನ ಸ್ವಾಮೀಜಿಯೊಬ್ಬರು ದೇಶದ ಸ್ವಾತಂತ್ರ್ಯ ಹಸ್ತಾಂತರದ ಪ್ರತೀಕವಾಗಿ ಸೆಂಗೋಲ್ ಹಸ್ತಾಂತರ ಮಾಡಿದ್ದರು ಎಂದು ಲೇಖನ ಬರೆದಿದ್ದರು. ಕೆಲ ದಿನಗಳ ನಂತರ ಖ್ಯಾತ ನೃತ್ಯಗಾತಿ ಡಾ.ಪದ್ಮಾ ಸುಬ್ರಮಣ್ಯಂ ಅದರ ಇಂಗ್ಲಿಷ್ ಪ್ರತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದರು. ಅದರ ಜೊತೆಗೆ ಬರೆದ ಪತ್ರದಲ್ಲಿ ‘ಪವಿತ್ರ ಹಾಗೂ ಐತಿಹಾಸಿಕ ‘ಸೆಂಗೋಲ್ ಹಸ್ತಾಂತರ’ ಸಮಾರಂಭದ ಇತಿಹಾಸವನ್ನು ಜನರಿಂದ ಮರೆಮಾಚಲಾಗಿದೆ. ಮೋದಿ ಸರ್ಕಾರ 2021ರ ಸ್ವಾತಂತ್ರೋತ್ಸವದಂದು ಅದನ್ನು ಬಹಿರಂಗಗೊಳಿಸಬೇಕು’ ಎಂದು ಕೋರಿದ್ದರು.
ಪ್ರಧಾನಿ ಕಚೇರಿಯಿಂದ ಶೋಧನೆ ಕಾರ್ಯ ಶುರುವಾಯ್ತು
ಪ್ರಧಾನಿ ಕಾರ್ಯಾಲಯ ಹಾಗೂ ಸಂಸ್ಕೃತಿ ಸಚಿವಾಲಯ ಹಳೆಯ ದಾಖಲೆಗಳ ಹುಡುಕಾಟಕ್ಕೆ ಇಳಿಯಿತು. ‘ಸೆಂಗೋಲ್’ನ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಪತ್ರಿಕಾ ಲೇಖನಗಳು, ಪ್ರಸಿದ್ಧ ಲೇಖಕರು ಬರೆದ ಪುಸ್ತಕಗಳು ಹಾಗೂ ಆನ್ಲೈನ್ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಸೋಸಿ, ಕೊನೆಗೆ ನೆಹರೂ ಅವರ ಮನೆಯಲ್ಲೇ ಅವರಿಗೆ ‘ಸೆಂಗೋಲ್’ ಹಸ್ತಾಂತರ ಮಾಡಲಾಗಿತ್ತು ಎಂಬುದನ್ನು ಪತ್ತೆಹಚ್ಚಿತು. ನೆಹರೂ ಸ್ಮಾರಕ ಮ್ಯೂಸಿಯಂನ ಚೇರ್ಮನ್ ನೃಪೇಂದ್ರ ಮಿಶ್ರಾ ಅವರಿಗೆ ಸೆಂಗೋಲ್ ಹಸ್ತಾಂತರ ಸಮಾರಂಭದ ಫೋಟೋ ಅಥವಾ ಮಾಹಿತಿಯೇನಾದರೂ ನೆಹರು ಅವರ ಖಾಸಗಿ ದಾಖಲೆಗಳಲ್ಲಿ ಲಭ್ಯವಿದೆಯೇ ಎಂದು ಹುಡುಕುವಂತೆ ಮನವಿ ಮಾಡಲಾಯಿತು.
ಸಿಕ್ಕಿರುವ ದಾಖಲೆಗಳು ಏನೇನು?
1. 1947ರ ಆಗಸ್ಟ್ 25ರಂದು ‘ಟೈಮ್’ ನಿಯತಕಾಲಿಕೆ ತನ್ನ ‘ವಿದೇಶಿ ಸುದ್ದಿ’ ವಿಭಾಗದಲ್ಲಿ ಸೆಂಗೋಲ್ ಸಮಾರಂಭದ ಕುರಿತು ವಿಸ್ತಾರವಾಗಿ ಪ್ರಕಟಿಸಿದ್ದ ವರದಿ.
2. ಪೆರಿ ಆ್ಯಂಡರ್ಸನ್ ಬರೆದ ‘ದಿ ಇಂಡಿಯನ್ ಐಡಿಯಾಲಜಿ’ ಹಾಗೂ ತಾಯ್ ಯಾಂಗ್ ತಾನ್ ಮತ್ತು ಗ್ಯಾನೇಶ್ ಕುದೈಸಿಯಾ ಬರೆದ ‘ದಿ ಆಫ್ಟರ್ಮಾತ್ ಆಫ್ ಪಾರ್ಟಿಶನ್ ಇನ್ ಸೌತ್ ಏಷ್ಯಾ’ ಪುಸ್ತಕದಲ್ಲಿ ಸೆಂಗೋಲ್ ಬಗ್ಗೆ ಇರುವ ಪ್ರಸ್ತಾಪ. ವಿವರಗಳು. ಇದನ್ನು ಗುರುತಿಸಿದವರ ಹೆಸರು ನೃಪೇಂದ ಮಿಶ್ರಾ.
3.1950ರಲ್ಲಿ ಡಿ.ಎಫ್. ಕಾರಕ ಅವರ ಪುಸ್ತಕದಲ್ಲಿಯೂ ರಾಜದಂಡ ಹಸ್ತಾಂತರದ ವಿವರಗಳಿದ್ದವು. ತಂಜಾವೂರಿನ ಪುರೋಹಿತರು ಹೊಸ ರಾಜನಿಗೆ ರಾಜದಂಡವನ್ನು ಹಸ್ತಾಂತರಿಸುವ ರೀತಿಯಲ್ಲಿ ನೆಹರೂ ಅವರಿಗೆ ಸೆಂಗೋಲ್ ಹಸ್ತಾಂತರ ಮಾಡಿದ್ದರು’ ಎಂಬ ಮಾಹಿತಿ ಸಿಕ್ಕಿತು.
4.1955ರಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಬರೆದಿದ್ದ ಲೇಖನದಲ್ಲಿಯೂ ಸಿಂಗೋಲ್ ಪ್ರಸ್ತಾಪ ಇತ್ತು.
5. ಡೊಮಿನಿಕ್ ಲೇಪಿಯೇರ್ ಹಾಗೂ ಲ್ಯಾರಿ ಕಾಲಿನ್ಸ್ ಬರೆದ ‘ಫ್ರೀಡಂ ಅಟ್ ಮಿಡ್ನೈಟ್’ ಪುಸ್ತಕ ಮತ್ತು ಯಾಸ್ಮಿನ್ ಖಾನ್ ಅವರ ‘ಗ್ರೇಟ್ ಪಾರ್ಟಿಷನ್: ದಿ ಮೇಕಿಂಗ್ ಆಫ್ ಇಂಡಿಯಾ ಅಂಡ್ ಪಾಕಿಸ್ತಾನ್’ ಕೃತಿಯಲ್ಲಿ ಸೆಂಗೋಲ್ ಬಗ್ಗೆ ಇರುವ ಮಾಹಿತಿಗಳು ಲಭ್ಯವಾದವು.
6. 1947ರಲ್ಲಿ ಪ್ರಕಟವಾಗಿದ್ದ ಹಲವು ಸುದ್ದಿಗಳಲ್ಲಿ ಸಿಂಗೋಲ್ ಬಗ್ಗೆ ಪ್ರಸ್ತಾಪವಾಗಿದ್ದ ವರದಿಗಳು ಸಿಕ್ಕವು
7. ತಮಿಳುನಾಡಿನ ಡಿಎಂಕೆ ಸರ್ಕಾರ ಪ್ರಕಟಿಸಿದ ಹಿಂದೂ ಧಾರ್ಮಿಕ ಮತ್ತು ಮುಜರಾಯಿ ನೀತಿ 2021-22ರಲ್ಲೂ 1947ರ ಸೆಂಗೋಲ್ ಪ್ರದಾನ ಸಮಾರಂಭದ ಬಗ್ಗೆ ಮಾಹಿತಿಯಿತ್ತು.
8. ಮೊದಲ ಪ್ರಧಾನಿ ಜವಹರ ಲಾಲ್ ನೆಹರು ಅವರು ರಾಜದಂಡ ಅರ್ಥಾತ್ ಸಿಂಗೊಲ್`ನೊಂದಿಗೆ ಇರುವ ಭಾವಚಿತ್ರಗಳೂ ಲಭ್ಯವಾದವು. ಈಗಲೂ ಆ ಫೋಟೋಗಳಿವೆ.
9. 1947ರ ಆಗಸ್ಟ್ 29ರಂದು ದಿ ಹಿಂದೂ ಪತ್ರಿಕೆ ಫೋಟೋ ಸಮೇತ ವಿವರವಾದ ವರದಿಯನ್ನು ಪ್ರಕಟ ಮಾಡಿತ್ತು.
10. ಹಲವು ಸಾಕ್ಷಿಗಳಿದ್ದರೂ ಕೂಡಾ ವಿರೋಧ ಮಾಡುತ್ತಿರುವುದು ಏಕೆ ಎಂದರೆ ಈ ಬಗ್ಗೆ ಆಗಿನ ಸರ್ಕಾರಿ ದಾಖಲೆಗಳಲ್ಲಿ ಯಾವುದೇ ಉಲ್ಲೇಖ ಇಲ್ಲದೇ ಇರುವುದು. ಯಾಕೆ ಉಲ್ಲೇಖ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲ.



