ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದರೆ, ರೋಡ್ ಶೋ ಮಾಡಿದರೆ, ಭಾಷಣೆ ಮಾಡಿದರೆ.. ಬಿಜೆಪಿಗೆ ಲಾಭವಾಗಲಿದೆ ಎನ್ನುವುದು ಗೊತ್ತಿಲ್ಲದ ವಿಷಯವೇನಲ್ಲ. ಅಭ್ಯರ್ಥಿಯೂ ಪ್ರಬಲರಾಗಿದ್ದರೆ, ಮೋದಿಯ ಎಂಟ್ರಿ ಭೀಮಬಲ ತಂದುಕೊಡಲಿದೆ ಎನ್ನುವುದು ಬಿಜೆಪಿ ನಾಯಕರಿಗೆ ಗೊತ್ತು. ಆದರೆ ಅಭ್ಯರ್ಥಿ ವೀಕ್ ಇದ್ದರೆ ಮೋದಿಯೂ ಏನೂ ಮ್ಯಾಜಿಕ್ ಮಾಡೋಕೆ ಸಾಧ್ಯವಿಲ್ಲ. ಈಗ ಬಿಜೆಪಿ ರಾಜ್ಯದಲ್ಲಿ ಮೋದಿ, ಅಮಿತ್ ಶಾ ಸೇರಿದಂತೆ ಸರಿ ಸುಮಾರು 100 ಕೇಂದ್ರ ನಾಯಕರನ್ನು ಪ್ರಚಾರಕ್ಕೆ ಕರೆ ತಂದಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಎಲ್ಲರಿಗೂ ಟೆನ್ಷನ್ ಇಡುವುದು ಮೋದಿ ರ್ಯಾಲಿಗಳೇ.
ಈಗ ಆ ಮೋದಿ ಪ್ರಚಾರಕ್ಕೆ ಬ್ರೇಕ್ ಹಾಕಲು ಸಿದ್ಧವಾಗುತ್ತಿದೆ ಕಾಂಗ್ರೆಸ್.
ಅಭ್ಯರ್ಥಿಗಳ ಪರ ಪ್ರಚಾರ ನಡೆಸಲೆಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಹಲವೆಡೆ ಭೇಟಿ ನೀಡಲಿದ್ದಾರೆ. ಉತ್ತರಕನ್ನಡ ಜಿಲ್ಲೆಗೂ ಪ್ರಧಾನಿ ನರೇಂದ್ರ ಮೋದಿ ಆಗಮಿಸಲು ಒಪ್ಪಿದ್ದು, ಸುರಕ್ಷತೆಯ ದೃಷ್ಠಿಯಿಂದ ಹಾಗೂ ಜನರ ಆಗಮನಕ್ಕೆ ವ್ಯವಸ್ಥೆಯಾಗಲೆಂದು ಅಂಕೋಲಾ ತಾಲೂಕಿನ ಹಟ್ಟಿಕೇರಿಯ ನೌಕಾನೆಲೆಯ ಜಾಗ ಸೇರಿದಂತೆ ಸುಮಾರು 4 ಜಾಗಗಳನ್ನು ಬಿಜೆಪಿ ಮುಖಂಡರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ನೌಕಾನೆಲೆಯ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಬಿಜೆಪಿ ಮುಖಂಡರು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿ ಕೂಡಾ ಸಲ್ಲಿಸಿದ್ದಾರೆ. ಆದರೆ, ಈ ಸ್ಥಳದಲ್ಲಿ ಮೋದಿ ಕಾರ್ಯಕ್ರಮ ನಡೆಸಿದ್ರೆ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರುವ ಜತೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.
ಅಂಕೋಲಾದ ಹಟ್ಟಿಕೇರಿ ಗ್ರಾಮದ ಬಳಿ ನೌಕಾದಳವು ವಿವಾನ ನಿಲ್ದಾಣ ನಿರ್ಮಿಸಲು ವಶಪಡಿಸಿಕೊಂಡ ಜಾಗದಲ್ಲಿ ಮೋದಿಯವರ ಚುನಾವಣಾ ಪ್ರಚಾರ ಸಭೆ ನಡೆಸಲು ಅನುಮತಿ ಕೋರಿ ನೌಕಾದಳಕ್ಕೆ ಬಿಜೆಪಿ ನಾಯಕರು ಪತ್ರ ವ್ಯವಹಾರ ನಡೆಸಿದ್ದಾರೆ. ಆದ್ರೆ, ನೌಕಾನೆಲೆಯ ಜಾಗದಲ್ಲಿ ಚುನಾವಣಾ ಪ್ರಚಾರ ನಡೆಸುವುದು ನೀತಿ ಸಂಹಿತಿ ಉಲ್ಲಂಘನೆಯಲ್ಲದೇ, ದೇಶದ ಭದ್ರತಾ ದೃಷ್ಠಿಯಿಂದ ಕೂಡಾ ಇದು ಸರಿಯಲ್ಲ. ಅಧಿಕಾರ ದುರುಪಯೋಗ ಪಡಿಸುವುದು ಬಿಜೆಪಿಗೆ ಹೊಸತೇನಲ್ಲ. ಯಾವುದೇ ಕಾರಣಕ್ಕೂ ನೌಕಾನೆಲೆ ಜಾಗದಲ್ಲಿ ಸಮಾವೇಶ ನಡೆಸಲು ಅವಕಾಶ ಕೊಡಬಾರದು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್, ಒಂದು ವೇಳೆ ಅವಕಾಶ ಮಾಡಿಕೊಟ್ಟಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡುವ ಜತೆ ಕೋರ್ಟ್ ನಲ್ಲಿ ದಾವೆ ಹೂಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಮೇ 1 ಅಥವಾ 3 ನೇ ತಾರೀಕಿನಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಕಾರವಾರ ಕ್ಷೇತ್ರಕ್ಕೆ ಆಗಮಿಸಲು ಒಪ್ಪಿಗೆ ಕೊಟ್ಟಿದ್ದಾರೆ ಎನ್ನಲಾಗಿದ್ದು, ಸುಮಾರು ಎಂಟು ವಿಧಾನಸಭಾ ಕ್ಷೇತ್ರದಿಂದ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಆದ್ರೆ, ಸೂಕ್ತ ಸ್ಥಳಕ್ಕಾಗಿ ಇತರ ಜಾಗವನ್ನು ನೋಡಿದರೂ, ಹಟ್ಟಿಕೇರಿ ಗ್ರಾಮದ ನೌಕಾನೆಲೆಯ ವ್ಯಾಪ್ತಿಯ ಜಾಗದಲ್ಲಿ ಸಮಾವೇಶ ನಡೆಸಲು ನೌಕಾದಳದ ಅನುಮತಿ ಕೇಳಲಾಗಿದೆ. ಆದರೆ, ನೌಕಾನೆಲೆಯ ಜಾಗದಲ್ಲಿ ಸಾರ್ವಜನಿಕರಿಗೇ ನಿರ್ಬಂಧವಿದೆ. ಇನ್ನು ರಾಜಕೀಯ ಕಾರ್ಯಕ್ರಮಕ್ಕೆ ಹೇಗೆ ಅವಕಾಶ ಕೊಡುತ್ತಾರೆ ಎನ್ನುವ ಆರೋಪ ಕಾಂಗ್ರೆಸ್ಸಿನದ್ದು.
ಕಾಂಗ್ರೆಸ್ ಗೆ ಮೋದಿ ಭಯ ಇರೋದರಿಂದಲೇ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದ್ದಾರೆ. ನಾವು ನೌಕಾನೆಲೆಯ ಅಧಿಕಾರಿಗಳ ಅನುಮತಿ ಪಡೆದೇ ಕಾರ್ಯಕ್ರಮ ಮಾಡುತ್ತೇವೆ. ನೌಕಾನೆಲೆಯ ಜಾಗವಲ್ಲದೇ ಇನ್ನೂ ಕೆಲವು ಜಾಗವನ್ನು ಗುರುತಿಸಲಾಗಿದೆ. ನೂರು ಎಕರೆಗೂ ಹೆಚ್ಚು ಜಾಗ ಹೊಂದಿರುವ ಸ್ಥಳ ಹಾಗೂ ವಾಹನಗಳು ತಂಗಲು ಸೂಕ್ತ ವ್ಯವಸ್ಥೆ ಇರುವ ಪ್ರದೇಶ ಇದಾಗಿದೆ. ನಾವು ಅನುಮತಿ ಪಡೆದೇ ಕಾರ್ಯಕ್ರಮ ಮಾಡುತ್ತೇವೆ ಎನ್ನುತ್ತಾರೆ ಬಿಜೆಪಿ ಲೀಡರ್ಸ್. ಅಷ್ಟೇ ಅಲ್ಲ, ಹಾಗೇನಾದರೂ ಅನುಮತಿ ನೀಡಿದರೆ ಚುನಾವಣಾ ಆಯೋಗ ಹಾಗೂ ಕೋರ್ಟ್ ಮೆಟ್ಟಿಲೇರುವುದಕ್ಕೂ ಕಾಂಗ್ರೆಸ್ ತಯಾರಿ ಮಾಡಿಕೊಳ್ಳುತ್ತಿದೆ.



