ಚುನಾವಣೆ ಘೋಷಣೆಯಾದಾಗಿನಿಂದ ಕಾಂಗ್ರೆಸ್ ಮೇಲ್ನೋಟಕ್ಕೆ ಮೇಲುಗೈ ಸಾಧಿಸಿತ್ತು. ಕೇವಲ ಭ್ರಷ್ಟಾಚಾರವನ್ನೇ ಪ್ರಮುಖ ಅಸ್ತ್ರವಾಗಿಟ್ಟುಕೊಂಡಿದ್ದ ಕಾಂಗ್ರೆಸ್, ಬಿಜೆಪಿ ವಿರುದ್ಧ ನಿಜಕ್ಕೂ ಜನಾಭಿಪ್ರಾಯ ರೂಪಿಸಿತ್ತು. 40% ಆರೋಪವನ್ನು ಮಾಡಿದವರು ಯಾವುದೇ ದಾಖಲೆಗಳನ್ನು ಜನರ ಕೈಗೂ ಕೊಡಲಿಲ್ಲ. ನ್ಯಾಯಾಲಯಕ್ಕೂ ಕೊಡಲಿಲ್ಲ. ತಾವು ಪತ್ರ ಬರೆದವು ಎನ್ನುತ್ತಿದ್ದ ಪ್ರಧಾನಿ ಕಚೇರಿಗೂ ಕೊಡಲಿಲ್ಲ. ಆದರೆ ಮಾಧ್ಯಮಗಳಲ್ಲಿ ಸುದ್ದಿಯನ್ನಂತೂ ಮಾಡಿದರು. ಅದಕ್ಕೆ ತಕ್ಕಂತೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ದುಡ್ಡಿನ ಸಮೇತ ಸಿಕ್ಕಿಬಿದ್ದದ್ದು ಈ ಎಲ್ಲ ವಾದಕ್ಕೂ ಪುಷ್ಟಿ ಒದಗಿಸಿತು.
ಚುನಾವಣೆ ಆರಂಭಕ್ಕೂ ಮೊದಲು ಧರ್ಮದ ವಿಷಯದಲ್ಲಿ, ಮೋದಿಯ ವಿಷಯದಲ್ಲಿ ಬೌಂಡರಿ ಹಾಕಿಟ್ಟುಕೊಂಡಿದ್ದ ಕಾಂಗ್ರೆಸ್ ತಾನೇ ದಾರಿ ತಪ್ಪಿಬಿಟ್ಟಿತು. ಬಹುಶಃ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಕಾಂಗ್ರೆಸ್ಸಿಗೆ ಬಂದ ಸಂಭ್ರಮವೋ ಏನೋ.. ಎಡವಟ್ಟುಗಳ ಸರಮಾಲೆಯೇ ಶುರುವಾಯಿತು. ಮೊದಲಿಗೆ ದಾರಿ ತಪ್ಪಿದ್ದು ಸಿದ್ದರಾಮಯ್ಯ. ಆನಂತರ ಮಲ್ಲಿಕಾರ್ಜುನ ಖರ್ಗೆ. ಅದಾದ ಮೇಲೆ ಪ್ರಿಯಾಂಕ ಖರ್ಗೆ. ಇದೀಗ ಒಟ್ಟಾರೆ ಕಾಂಗ್ರೆಸ್ ಪಕ್ಷವೇ ದಾರಿ ತಪ್ಪಿ ಎಡವಟ್ಟು ಮಾಡಿದೆ.
ಮೊದಲು ಎಡವಟ್ಟು : ಲಿಂಗಾಯತರೆಲ್ಲರೂ ಭ್ರಷ್ಟರೆಂದ ಸಿದ್ದರಾಮಯ್ಯ
ಸಿದ್ದರಾಮಯ್ಯ ಹೇಳೋಕೆ ಹೊರಟಿದ್ದ ವಿಷಯ ಅದಲ್ಲವೇ ಅಲ್ಲ. ಬೊಮ್ಮಾಯಿ ಅವರನ್ನು ಭ್ರಷ್ಟರು ಎನ್ನುವುದಕ್ಕೆ ಪ್ರಯತ್ನಿಸಿದ್ದು. ಆದರೆ ಆಗಿದ್ದೇ ಬೇರೆ ಎಂದೆಲ್ಲ ಸಮರ್ಥನೆ ಕೊಡುವವರು, ಸಮರ್ಥನೆ ಕೊಡಬಹುದು. ಲಿಂಗಾಯತರಲ್ಲಿ ಬೆಂಕಿ ಹೊತ್ತಿದ್ದಂತೂ ನಿಜ. ಖುದ್ದು ಸಮುದಾಯಗಳ ಮುಖಂಡರೇ ನಿಮ್ಮ ರಾಜಕೀಯಕ್ಕೆ ಬೇಕಾದರೆ ರಾಜಕೀಯ ಮಾಡಿಕೊಳ್ಳಿ, ನಮ್ಮ ಜಾತಿಯನ್ನೇಕೆ ಎಳೆದು ತಂದು ಅವಮಾನಿಸುತ್ತೀರಿ ಎಂದು ಕಿಡಿ ಕಾರುವ ಹಂತಕ್ಕೆ ಹೋಯಿತು. ಹೀಗಾಗಿ ಈಗಲೂ ಸಿದ್ದರಾಮಯ್ಯ ಎಲ್ಲಿಗೇ ಹೋದರೂ ಆ ಎಡವಟ್ಟಿನ ಹೇಳಿಕೆಗೆ ಸ್ಪಷ್ಟನೆ ಕೊಡುವ ಸವಾಲು ಎದುರಾಗಿರುವುದು ನಿಜ.
ಎರಡನೇ ಎಡವಟ್ಟು : ಮೋದಿ ವಿಷದ ಹಾವು ಎಂಬ ಖರ್ಗೆ ಹೇಳಿಕೆ
ಮೋದಿ ವಿಷದ ಹಾವಿದ್ದಂತೆ. ನೋಡೋಣ ಎಂದು ನೆಕ್ಕಿದ್ರೆ ಸತ್ತ ಎಂದು ಹೇಳಿಕೆ ನೀಡಿದರು ಮಲ್ಲಿಕಾರ್ಜುನ ಖರ್ಗೆ. ಇದನ್ನು ಖರ್ಗೆ ನಾನು ಹಾಗೆ ಹೇಳಲಿಲ್ಲ ಎಂದರು. ಬಿಜೆಪಿಯನ್ನು ಬೈದಿದ್ದು, ಮೋದಿಯನ್ನಲ್ಲ ಎಂದರು. ಆದರೆ ವಿಡಿಯೋ ಸ್ಪಷ್ಟವಾಗಿತ್ತು. ಅದೇ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಮೋದಿ 91 ಬಾರಿ ನನ್ನನ್ನು ಕೆಟ್ಟ ಪದಗಳಿಂದ ಬೈದಿದ್ದಾರೆ. ನನ್ನನ್ನು ಹಾವು ಎಂದರೆ ಅಂದುಕೊಳ್ಳಲಿ, ಹಾವು ಎಂದರೆ ಶಿವನ ಕೊರಳಿನ ಆಭರಣ ಎಂದರು. ಅಲ್ಲಿಗೆ ಎರಡನೇ ಖೇಲ್ ಖತಂ.
ಮೂರನೇ ಎಡವಟ್ಟು : ಮೋದಿ ನಾಲಾಯಕ್ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ
ಅಪ್ಪ ಮಾಡಿದ್ದ ಎಡವಟ್ಟನ್ನು ಪ್ರಿಯಾಂಕ್ ಖರ್ಗೆ ಮುಂದುವರೆಸಿದ್ರು. ನಾಯಕ್-ನಾಲಾಯಕ್ ಎಂಬ ಪ್ರಾಸ ಜೋಡಿಸುವ ಸಮಯದಲ್ಲಿ ಮೋದಿಯನ್ನು ನಾಲಾಯಕ್ ಎಂದರು. ಮತ್ತೊಮ್ಮೆ ಮೋದಿಯನ್ನು ವೈಯಕ್ತಿಕವಾಗಿ ಅಟ್ಯಾಕ್ ಮಾಡುವುದು ಬೇಡ ಎಂಬ ಕಾಂಗ್ರೆಸ್ ನಾಯಕರ ನಿರ್ಧಾರನ್ನು ಹೇಗೆ ಅಪ್ಪ ಖರ್ಗೆ ಮೊದಲು ಮುರಿದರೋ, ಎರಡನೇ ಬಾರಿ ಮಗ ಖರ್ಗೆ ಮುರಿದರು.
ನಾಲ್ಕನೆ ಎಡವಟ್ಟು : ಭಜರಂಗ ದಳ ನಿಷೇಧದ ಪ್ರಣಾಳಿಕೆ
ಮೊದಲ ಮೂರು ಎಡವಟ್ಟುಗಳನ್ನು ಅದು ಸರಿಯೋ.. ತಪ್ಪೋ.. ಮಾಧ್ಯಮಗಳ ಮೇಲೆ ಕೂರಿಸಬಹುದು. ಆದರೆ ಈ ನಾಲ್ಕನೇ ಎಡವಟ್ಟಿದೆಯಲ್ಲ, ಅದನ್ನು ಹೊತ್ತುಕೊಳ್ಳಲೇಬೇಕು. ಏಕೆಂದರೆ ಭಜರಂಗ ದಳ ನಿಷೇಧದಂತಹ ವಿಷಯ ಇರೋದು ಕಾಂಗ್ರೆಸ್ಸಿನವರ ಪ್ರಣಾಳಿಕೆಯಲ್ಲಿ. ಯಾವುದೇ ಕಾರಣಕ್ಕೂ ಧರ್ಮದ ವಿಷಯದಲ್ಲಿ ತಲೆ ಹಾಕಿ ಸಿಕ್ಕಿಕೊಳ್ಳಬಾರದು ಎಂದು ಆಟಕ್ಕೂ ಸಿಕ್ಕದಂತೆ ನುಣುಚಿಕೊಳ್ಳುತ್ತಿದ್ದ ಕಾಂಗ್ರೆಸ್, ಪ್ರಣಾಳಿಕೆಯಲ್ಲೇ ಭಜರಂಗದಳ ನಿಷೇಧ ಪ್ರಸ್ತಾಪಿಸಿ ಕೈಸುಟ್ಟುಕೊಂಡಿದೆ. ನಾನೂ ಭಜರಂಗದಳದವರು ಎಂದು ಹಿಂದೂಗಳು ಬಹಿರಂಗವಾಗಿ ಹೇಳುತ್ತಿದ್ದಾರಷ್ಟೇ ಅಲ್ಲ, ಸಿಎಂ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಪ್ರಮೋದ್ ಮುತಾಲಿಕ್.. ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ನೇರವಾಗಿ ದನಿಯೆತ್ತಿದ್ದಾರೆ.
ತಾಕತ್ ಇದ್ರೆ ಬ್ಯಾನ್ ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಪಿಎಫ್‍ಐನಂತಹ ಉಗ್ರ ಸಂಘಟನೆಗಳು, ಭಜರಂಗದಳದಂತಹ ಧಾರ್ಮಿಕ ಸಂಘಟನೆಗೂ ಹೋಲಿಕೆ ಮಾಡಿದ್ದು ಹಿಂದೂಗಳಿಗೆ ಒಮ್ಮತವಾಗಿಲ್ಲ. ಇನ್ನೊಂದು ವಿಷಯವೆಂದರೆ ಈಗಾಗಲೇ ನಿಷೇಧವಾಗಿರುವ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಹೊತ್ತಿರುವ ಪಿಎಫ್`ಐನ್ನು ಮತ್ತೊಮ್ಮೆ ಬ್ಯಾನ್ ಮಾಡುತ್ತೇವೆ ಎಂದು ಕಾಮಿಡಿ ಪೀಸ್ ಆಗಿದೆ ಕಾಂಗ್ರೆಸ್.
ಪ್ರಧಾನಿ ನರೇಂದ್ರ ಮೋದಿಯಂತೂ ಕಾಂಗ್ರೆಸ್ಸಿನವರು ರಾಮನನ್ನೂ ಬಂಧನದಲ್ಲಿಟ್ಟಿದ್ದರು. ಈಗ ಹನುಮಂತನನ್ನೂ ಜೈಲಿಗೆ ತಳ್ಳೋ ಮಾತನಾಡುತ್ತಿದ್ದಾರೆ ಎಂದು ಹೇಳಿ, ಹನುಮನ ಊರು ಕರ್ನಾಟಕ ಎಂದೂ ನೆನಪಿಸಿದ್ದಾರೆ.
ವಿಶೇಷವೇನು ಗೊತ್ತೇ.. ಹೀಗೆ ಕಾಂಗ್ರೆಸ್ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಿದ್ದರೂ, ಮೋದಿ ಇಲ್ಲಿಯೇ ಬೀಡು ಬಿಟ್ಟು ಬಿಜೆಪಿಯನ್ನು ಗೆಲ್ಲಿಸಲು ಹಠ ತೊಟ್ಟಿದ್ದರೂ ಸ್ಥಳೀಯ ಬಿಜೆಪಿ ನಾಯಕರಿಗೆ ಅದನ್ನು ಬಳಸಿಕೊಳ್ಳುವ ಶಕ್ತಿ, ಸಾಮಥ್ರ್ಯ, ಉತ್ಸಾಹ



