ಒಂದು ಗೆಲುವಿನ ಮಾಡೆಲ್, ಇನ್ನೊಂದು ರಾಜ್ಯಕ್ಕೆ ಸ್ಫೂರ್ತಿಯಾಗಬಹುದು. ಮಾದರಿಯಾಗಬಹುದು. ಅದರಂತೆಯೇ ಆಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಉಚಿತ ಕೊಡುಗೆಗಳ ಭರವಸೆ ನೀಡಿ ಗೆಲ್ಲುತ್ತಿದ್ದಂತೆಯೇ ಮಧ್ಯಪ್ರದೇಶದಲ್ಲಿ ಕೂಡ ಕಾಂಗ್ರೆಸ್ ಇಂಥದ್ದೇ ಭರವಸೆಗಳನ್ನು ನೀಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ 100 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. 101ರಿಂದ 200 ಯೂನಿಟ್ವರೆಗೆ ಅರ್ಧ ದರ ವಿಧಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಘೋಷಿಸಿದ್ದಾರೆ.
ಬಡ ಮಹಿಳೆಯರಿಗೆ ಮಾಸಿಕ 1500 ರು. ಸಹಾಯಧನ ನೀಡಲಾಗುವುದು. ಹಳೇ ಪಿಂಚಣಿ ಯೋಜನೆ ಜಾರಿಗೆ ತರಲಾಗುವುದು ಎಂದೂ ಹೇಳಿದರು. ಆಡಳಿತಾರೂಢ ಬಿಜೆಪಿ ಕೂಡ ಇತ್ತೀಚೆಗೆ ವಾರ್ಷಿಕ 2 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವ ಕುಟುಂಬಕ್ಕೆ ಮಾಸಿಕ 1000 ರು. ನೀಡುವ ಭರವಸೆ ನೀಡಿತ್ತು. 200 ಯೂನಿಟ್ ಉಚಿತ ವಿದ್ಯುತ್ ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸ್ಪಷ್ಟಬಹುಮತ ಪಡೆದು ಗೆದ್ದ ಬೆನ್ನಲ್ಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಿದ್ಯುತ್ ಬಿಲ್ ಕಟ್ಟಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಇಂತಹ ವಿದ್ಯಮಾನಗಳು ಹೆಚ್ಚಾಗಿ ನಡೆಯುತ್ತಿಲ್ಲ. ಮೊದಲಿನಂತೆಯೇ ಸಾಮಾನ್ಯ ರೀತಿಯಲ್ಲಿ ಜನರು ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ.
ಇದು ಹೀಗಾದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಚುನಾವಣೆ ಗೆಲ್ಲಿಸಲು ಶ್ರಮಿಸಿದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಬಿಟ್ಟು, ಕಮಲ್ ನಾಥ್ ಅವರಿಗೆ ಪಟ್ಟ ಕಟ್ಟಲಾಗಿತ್ತು. ಅಧಿಕಾರ ಹಂಚಿಕೆ ಸೂತ್ರವೂ ನಡೆಯದ ಕಾರಣ, ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಅವರೀಗ ಕೇಂದ್ರ ಸಚಿವ. ಇತ್ತ ರಾಜ್ಯ ಕಾಂಗ್ರೆಸ್ ಇಬ್ಭಾಗವಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿತ್ತು. ಇನ್ನು ಈ ವರ್ಷದ ನವೆಂಬರ್`ನಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.



