ಒಂದೊಂದು ಹೆಜ್ಜೆಯೂ ರೋಚಕ. ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಈತ ಕೆಎಎಸ್ ಅಧಿಕಾರಿ. ಎಸಿಬಿಯಲ್ಲೂ ಕೆಲಸ ಮಾಡಿದ್ದವರು. ಒಂದು ಕಾಲದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯಾಗಿದ್ದ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ. ಈತನನ್ನು ಖೆಡ್ಡಾಗೆ ಕೆಡವಿದವರ ಹೆಸರು ಶ್ರೇಯಸ್ ಕಶ್ಯಪ್. ಕೆಮಿಕಲ್ಸ್ ಕಂಪೆನಿಯೊಂದರ ಮಾಲೀಕ.
ಎಸ್ಡಿಎಲ್ನ ಟೆಂಡರ್ ಹಣ ಬಿಡುಗಡೆ ಹಾಗೂ ಕಾರ್ಯಾದೇಶ ನೀಡುವ ಸಂಬಂಧ ಕೆಎಸ್ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕ ಪ್ರಶಾಂತ್ ಅವರು 81 ಲಕ್ಷ ರು.ಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ಕೆಮಿಕ್ಸಿಲ್ ಕಂಪನಿ ಮಾಲಿಕ ಶ್ರೇಯಸ್ ಕಶ್ಯಪ್ ದೂರು ಸಲ್ಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್, ಈ ಬಗ್ಗೆ ತನಿಖೆ ನಡೆಸುವಂತೆ ಎಸ್ಪಿ ಅಶೋಕ್ ಅವರಿಗೆ ಸೂಚಿಸಿದರು. ಈ ವೇಳೆ ಐಜಿಪಿಗೆ ಡೀಲ್ ಕುರಿತ ಆಡಿಯೋ ತುಣುಕನ್ನು ಕಶ್ಯಪ್ ಸಲ್ಲಿಸಿದರು ಎನ್ನಲಾಗಿದೆ. ನಂತರ ಆಪರೇಷನ್ ಶುರುವಾಯ್ತು.


ಡೀಲ್ ಸಂಬಂಧ ಸಂಜೆ 6.30ಕ್ಕೆ ಕ್ರೆಸೆಂಟ್ ರಸ್ತೆಯ ತಮ್ಮ ಖಾಸಗಿ ಕಚೇರಿಗೆ ಬರುವಂತೆ ದೂರುದಾರ ಕಶ್ಯಪ್ಗೆ ಪ್ರಶಾಂತ್ ಸೂಚಿಸಿದ್ದರು. ಕೂಡಲೇ ನಾಲ್ವರು ಡಿವೈಎಸ್ಪಿಗಳ ನೇತೃತ್ವದಲ್ಲಿ ಪ್ರತ್ಯೇಕ ಮೂರು ತಂಡ ಸಿದ್ಧವಾದವು. ನಂತರ ಪ್ರಶಾಂತ್ ಕಚೇರಿಗೆ ಸಂಜೆ 6.30ಕ್ಕೆ ಕಶ್ಯಪ್ರ ಕಾರು ಹಿಂಬಾಲಿಸಿ ಮತ್ತೊಂದು ಕಾರಿನಲ್ಲಿ ಲೋಕಾಯುಕ್ತ ಪೊಲೀಸರು ತೆರಳಿದರು. ಕಚೇರಿಯೊಳಗೆ ಕಶ್ಯಪ್ ತೆರಳಿ ಹಣದ ಕಂತೆಗಳನ್ನು ಪ್ರಶಾಂತ್ ನೀಡಿದ ಕೂಡಲೇ ಅವರ ಕಚೇರಿಗೆ ಡಿವೈಎಸ್ಪಿ ಪ್ರಮೋದ್ ತಂಡ ಪ್ರವೇಶಿಸಿದೆ. ತಾವು ಲೋಕಾಯುಕ್ತ ಪೊಲೀಸರೆಂದ ಕೂಡಲೇ ಪ್ರಶಾಂತ್ ಬೆವೆತರು. ಅಲ್ಲಿ ದೊಡ್ಡ ಮೊತ್ತದ ಹಣ ಜಪ್ತಿಯಾದ ಕೂಡಲೇ ಶಾಸಕರು ಹಾಗೂ ಕೆಎಸ್ಡಿಎಲ್ ಎಂಡಿ ಮನೆ ಮೇಲೆ ದಾಳಿಗೆ ಅಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ.
ದುಡ್ಡು ನೀವೇ ಇಟ್ಕೊಳಿ.. ನಮ್ಮನ್ನು ಬಿಟ್ಟು ಬಿಡಿ : ಶಾಸಕರ ಮನೆ ಮೇಲೆ ದಾಳಿ ನಡೆದಾಗ ಅಲ್ಲಿ ಶಾಸಕರ ಇಬ್ಬರು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮಾತ್ರ ಇದ್ದರು. ಲಂಚ ಸ್ವೀಕರಿಸುವಾಗ ತಮ್ಮ ಸೋದರ ಸಿಕ್ಕಿಬಿದ್ದ ವಿಚಾರ ತಿಳಿದ ಕೂಡಲೇ ಶಾಸಕರ ಹಿರಿಯ ಪುತ್ರ ಮಾಡಾಳು ಮಲ್ಲಿಕಾರ್ಜುನ್ ರಾತ್ರಿ 1 ಗಂಟೆಗೆ ನಗರಕ್ಕೆ ದೌಡಾಯಿಸಿ ಬಂದಿದ್ದರು. ಆಗ ಮನೆಯಲ್ಲಿ ಪತ್ತೆಯಾದ ಕೋಟಿ ಕೋಟಿ ಹಣಕ್ಕೆ ಲೋಕಾಯುಕ್ತ ಪೊಲೀಸರು ಲೆಕ್ಕ ಕೇಳಿದಾಗ ಮಲ್ಲಿಕಾರ್ಜುನ್ ಆತಂಕಗೊಂಡಿದ್ದಾರೆ. ‘ಸರ್ ಈ ಹಣದ ಲೆಕ್ಕ ಕೊಡಲು ಸಾಧ್ಯವಿಲ್ಲ. ನೀವೇ ಮಡಿಕ್ಕೊಳಿ. ನಾವು ಯಾರಿಗೂ ಹೇಳೋದಿಲ್ಲ. ನೀವೂ ಯಾರಿಗೂ ಹೇಳ್ಬೇಡಿ. ಈ ವಿಚಾರ ಇಲ್ಲಿಗೆ ಮುಗಿಸಿಬಿಡಿ’ ಎಂದು ಗೋಗರೆದಿದ್ದಾರೆ. ಇದಕ್ಕೆ ಪೊಲೀಸರು ಕ್ಯಾರೆ ಎನ್ನಲಿಲ್ಲ ಎಂದು ತಿಳಿದುಬಂದಿದೆ.


ವಾಂತಿಯಲ್ಲೂ ದಾಖಲೆ ಹುಡುಕಾಟ : ದಾಳಿ ವೇಳೆ ಮಾಡಾಳ್ ಪ್ರಶಾಂತ್ ಕೆಲವು ದಾಖಲೆಗಳನ್ನು ನುಂಗಿದ್ದಾನೆ ಎನ್ನಲಾಗಿದ್ದು, ಪೊಲೀಸರು ವಾಂತಿ ಮಾಡಿಸಿ ಅದರಿಂದಲೂ ಕಾಗದ ತೆಗೆದು ಶೋಧಿಸಿದ್ದಾರೆ. ಆದರೆ, ಹೊಟ್ಟೆಗೆ ಹೋಗಿದ್ದ ದಾಖಲೆಯಿಂದ ಯಾವುದೇ ಸಾಕ್ಷ್ಯಾಧಾರಗಳು ಸಇಕ್ಕಿಲ್ಲ ಎನ್ನಲಾಗಿದೆ. ಇದೀಗ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಎಂಎಲ್‍ಎ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಮುಖ್ಯಮಂತ್ರಿಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕಾರ ಮಾಡಬೇಕಿರುವುದು ಸ್ಪೀಕರ್. ಇನ್ನು ಈ ವಿಧಾನಸಭೆಯ ಅಧಿವೇಶನ ನಡೆಯುವುದಿಲ್ಲವಾದ ಕಾರಣ, ಇನ್ನೂ ಸ್ಪೀಕರ್ ಅವರಿಗೆ ರವಾನಿಸಿಲ್ಲ. ಶಾಸಕರಿನ್ನೂ ಅಧಿಕೃತವಾಗಿ ಮಾಜಿಯಾಗಿಲ್ಲ. ಮುಖ್ಯಮಂತ್ರಿಯ ಭೇಟಿಗೆ ಹೋದಾಗ ಸಿಎಂ ಬಸವರಾಜ ಬೊಮ್ಮಾಯಿ ವಿರೂಪಾಕ್ಷಪ್ಪನವರನ್ನು ಹಿಗ್ಗಾಮುಗ್ಗ ಬೈದರಂತೆ.



