ಆದಾಯ ತೆರಿಗೆದಾರರಿಗೆ ಇಲ್ಲ. ಪತಿ ಟ್ಯಾಕ್ಸ್ ಕಟ್ಟುತ್ತಿದ್ದರೂ ಇಲ್ಲ. ಜಿಎಸ್ಟಿ ಕಟ್ಟುತ್ತಿದ್ದರೆ ಇಲ್ಲ. ಜಿಎಸ್ಟಿ ರಿಟನ್ಸ್ ಸಲ್ಲಿಸುತ್ತಿದ್ದರೂ ಇಲ್ಲ. ಸರ್ಕಾರಿ ನೌಕರರಾಗಿದ್ದರೆ ಇಲ್ಲ. ಪೆನ್`ಷನ್ ಪಡೆಯುತ್ತಿದ್ದರೆ ಇಲ್ಲ. ಉದ್ಯಮಿಗಳಾಗಿದ್ದರೆ ಇಲ್ಲ. ಹೀಗೆ ಗೃಹಲಕ್ಷ್ಮಿ ಯೋಜನೆಗೆ ಹಲವು ಷರತ್ತುಗಳಿವೆ. ಗೃಹಿಣಿಯರಿಗೆ ತಿಂಗಳಿಗೆ ಎರಡು ಸಾವಿರ ರೂ. ಕಲ್ಪಿಸುವ ಗೃಹ ಲಕ್ಷ್ಮೀ ಯೋಜನೆ, ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಬೇರೆಯದೇ ಸ್ವರೂಪ ಪಡೆಯುತ್ತಿದೆ.
ಮೇಲೆ ಹೇಳಿದವರಿಗಷ್ಟೇ ಅಲ್ಲ, ಮಕ್ಕಳು ಆದಾಯ ತೆರಿಗೆ ಕಟ್ಟುತ್ತಿದ್ದರೂ, ಗೃಹಲಕ್ಷ್ಮೀ ಯೋಜನೆ ಅನ್ವಯವಾಗುವುದಿಲ್ಲವಂತೆ. ಹೌದು, ಈ ಮಾತನ್ನು ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ತೆರಿಗೆ ಪಾವತಿದಾರರಾಗಿದ್ದರೆ ಅಥವಾ ಜಿಎಸ್ಟಿ ನೋಂದಣಿ ಮಾಡಿಕೊಂಡಿದ್ದರೆ ‘ಗೃಹಲಕ್ಷ್ಮೇ’ ಯೋಜನೆ ಅನ್ವಯ ಇಲ್ಲ ಎಂದು ಸರ್ಕಾರಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಆದರೆ, ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಮಕ್ಕಳು ತೆರಿಗೆ ಪಾವತಿ ಮಾಡಿದ್ದರೂ ಆ ಕುಟುಂಬಕ್ಕೆ ಯೋಜನೆ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಸೇರಿ ಯಾವುದಾದರೂ ಒಂದು ಕಾರ್ಡ್ ಇರಬೇಕು. ಇಲ್ಲದಿದ್ದರೆ ಸದ್ಯಕ್ಕೆ ಯೋಜನೆ ಅನ್ವಯವಿಲ್ಲ. ಎಪಿಎಲ್ಗೆ ಹೊಸದಾಗಿ ಅರ್ಜಿ ಹಾಕಿರುವವರು, ಜಿಎಸ್ಟಿ ರಿಟರ್ನ್ ಮಾಡುವವರನ್ನು ಸಹ ಯೋಜನೆಗೆ ಸೇರಿಸುವ ಬಗ್ಗೆ ಮನವಿಗಳು ಬಂದಿವೆ. ಮುಂದಿನ ದಿನಗಳಲ್ಲಿ ನಾವು ಸೇರಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್.
ಗೃಹಲಕ್ಷ್ಮಿ ಯೋಜನೆಯಡಿ 2000 ರು. ಪಡೆಯಲು ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಸೇರಿ ಯಾವುದಾದರೂ ಒಂದು ಕಾರ್ಡ್ ಇರಬೇಕು. ಇಲ್ಲದಿದ್ದರೆ ಯೋಜನೆಯ ಲಾಭ ಸಿಗುವುದಿಲ್ಲ. ಹೊಸದಾಗಿ ಅರ್ಜಿ ಹಾಕಿದವರಿಗೂ ಇಲ್ಲ. ಸದ್ಯಕ್ಕಿಲ್ಲ. ಹೊಸದಾಗಿ ಕಾರ್ಡ್ ಮಾಡಿಸುವವರನ್ನು ಯೋಜನೆಗೆ ಸೇರಿಸಬೇಕೋ ಬೇಡವೋ ಎಂದು ಆಮೇಲೆ ನಿರ್ಧಾರ ಮಾಡ್ತಾರಂತೆ.



