ಬೆಂಗಳೂರಿನ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು ಎ ಖಾತಾ. ಬಿ ಖಾತಾ. ಏನಿದು ಎನ್ನಬೇಡಿ. ಸಿಂಪಲ್ ಆಗಿ ಹೇಳಬೇಕೆಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸೈಟು, ಮನೆಗಳನ್ನು ಎ ಖಾತಾ ಎಂದು ಗುರುತಿಸಲಾಗುತ್ತದೆ. ಅದಾದ ನಂತರ ಬಿಬಿಎಂಪಿ ವ್ಯಾಪ್ತಿ ವಿಸ್ತರಿಸಿದೆ. ದೊಡ್ಡದಾಗಿದೆ. ಹೊಸ ಹೊಸ ವಾರ್ಡ್ ಸೇರ್ಪಡೆಯಾಗಿವೆ. ಹಾಗೆ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಬಂದ ಪ್ರದೇಶಗಳಲ್ಲಿದ್ದ ರೆವಿನ್ಯೂ ಲ್ಯಾಂಡ್`ಗೆ ನೀಡಿರುವ ಖಾತಾಪತ್ರಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ಎಂದು ಗುರುತಿಸಲಾಗುತ್ತದೆ. ಇರಲಿ ಬಿಡಿ ಎಂದು ಸುಮ್ಮನಿರೋಕೆ ಸಾಧ್ಯವಿಲ್ಲ. ತಮ್ಮ ಭೂಮಿ ಡೆವಲಪ್ ಮಾಡುವುದರ ಸಂದರ್ಭದಲ್ಲಿ, ಸೈಟಿನಲ್ಲಿ ಮನೆ ಕಟ್ಟೋಕೆ ಹೊರಟಾಗ.. ನಿರೀಕ್ಷಿಸಿದಷ್ಟು ಸಾಲವೂ ಸಿಕ್ಕಲ್ಲ. ಬಡ್ಡಿದರವೂ ದುಬಾರಿ. ನ್ಯಾಷನಲ್ ಬ್ಯಾಂಕುಗಳಲ್ಲಿ ಗೃಹಸಸಾಲಕ್ಕೆ ಬಡ್ಡಿದರ ಕಡಿಮೆಯೇನೋ ಇರುತ್ತದೆ. ಆದರೆ ಅನ್ವಯವಾಗುವುದು ಎ ಖಾತಾದಾರರಿಗೆ ಮಾತ್ರ. ಬಿ ಖಾತೆಯಿದ್ದವರಿಗೆ ಸಾಲ ಕೊಡುವುದು ಪ್ರೈವೇಟ್ ಬ್ಯಾಂಕುಗಳು. ಅಲ್ಲಿಯೂ ಅಷ್ಟೆ, ಎ ಖಾತೆಯವರಿಗೆ ಶೇ.6ರ ಬಡ್ಡಿದರದಲ್ಲಿ ಹೆಚ್ಚು ಸಾಲ ಸಿಗುತ್ತದೆ. ಇಎಂಐ ಕೂಡಾ ಕಡಿಮೆ.


ಆದರೆ ಬಿ ಖಾತಾಗಳನ್ನು ಎ ಖಾತಾ ಮಾಡೋಕೆ ನೂರಾರು ಅಡ್ಡಿ. ಹಲವು ವರ್ಷಗಳಿಂದ ಕೋರ್ಟಿನಲ್ಲಿರುವ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಬಹುಶಃ ತೀರ್ಪು ಬರುವ ಹೊತ್ತಿಗೆ ಎ ಖಾತಾ, ಬಿ ಖಾತಾಗಳಲ್ಲಿ ವ್ಯತ್ಯಾಸವೇ ಇಲ್ಲದಂತೆ ಮೌಲ್ಯ ಕಳೆದುಕೊಳ್ಳುತ್ತದೇನೋ.. ಇದು ಹಳೆ ಕಥೆ.
ಈಗ ಹೊಸದೇನೆಂದರೆ ಶಕದಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರಿನ ಸುಮಾರು 6 ಲಕ್ಷ ‘ಬಿ ಖಾತಾ ಆಸ್ತಿಗಳನ್ನು ಎ’ ಖಾತಾ ಆಗಿ ಬದಲಾವಣೆಗೆ ರಾಜ್ಯ ಸರ್ಕಾರವು ಮೊದಲ ಹೆಜ್ಜೆ ಇಟ್ಟಿದೆ, 2,400 ಚದರ ಅಡಿ ಒಳಗಿನ ಖಾಲಿ ನಿವೇಶನಗಳಿಗೆ ‘ಎ’ ಖಾತಾ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಕಳೆದ 2022-23ನೇ ಸಾಲಿನ ಆಯವ್ಯಯದಲ್ಲಿ ಬಿಬಿಎಂಪಿ ವ್ಯಾಪ್ತಿಯ ‘ಬಿ ಖಾತಾ ಆಸ್ತಿಗಳನ್ನು ‘ಎ’ ಖಾತಾ ಆಗಿ ಬದಲಾವಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೀಗ ರಾಜ್ಯದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಬದಲಾವಣೆಗೆ ಸಂಬಂಧಿಸಿದಂತೆ ತಯಾರಿ ಆರಂಭಿಸಿದೆ.
40*60 ಸೈಟುಗಳನ್ನು ಹೊರತುಪಡಿಸಿ ಬೇರೆ ಸೈಟುಗಳಿಗೆ ಬಿ ಖಾತಾ ಬದಲಿಸಿ ಎ ಖಾತೆ ನೀಡುವ ಕುರಿತಂತೆ ಪರಿಶೀಲನೆ ನಡೆಯುತ್ತಿದೆ. 40*60 ಅಥವಾ 2400 ಅಡಿ ಚದರ ಅಡಿಗಿಂತ ಕಡಿಮೆ ಇರುವ ಸೈಟು/ಜಾಗಗಳಿಗೆ ಮಾತ್ರವೇ ಎ ಖಾತೆ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ನೆನಪಿಡಿ, ಇದಿನ್ನೂ ಚಿಂತನೆ ಮಾತ್ರ. ಆದರೆ ಇವುಗಳಲ್ಲಿ ಯಾವುದೇ ರೀತಿಯ ಜಾಗಗಳಲ್ಲಿ ಯಾವುದೇ ಕಟ್ಟಡ, ಶೆಟ್ ಇರಲೇಬಾರದು.ಖಾಲಿ ಜಾಗಗಳಿಗೆ ಈ ಸೂತ್ರ ಅನ್ವಯವಾಗಲಿ ಎಂದು ಖುದ್ದು ಸಿಎಂ ಬೊಮ್ಮಾಯಿಯವರೇ ಸೂಚಿಸಿದ್ದಾರಂತೆ. ಅಂದರೆ ಈಗಾಗಲೇ ಬಿ ಖಾತಾದಲ್ಲಿ ಮನೆ/ಕಟ್ಟಡ/ಶೆಡ್ ನಿರ್ಮಾಣ ಮಾಡಿದ್ದರೆ ಅವರಿಗೆ ಇದು ಅನ್ವಯವೂ ಆಗಲ್ಲ. ಲಾಭವೂ ಇಲ್ಲ.
ಆದರೆ ಎಲೆಕ್ಷನ್ ಹೊತ್ತಿಗೆ ಇದನ್ನು ಜಾರಿಗೆ ತಂದೇ ಬಿಡುವ ಉತ್ಸಾಹದಲ್ಲಿ ಹೊರಟಿದ್ದಾರೆ. ಆದರೆ ಕಳೆದ ಬಜೆಟ್`ನಲ್ಲಿ ಘೋಷಿಸಿದ್ದ ಯೋಜನೆ ಇದೂವರೆಗೆ ಒಂದು ಹೆಜ್ಜೆ ಮುಂದೆ ಚಲಿಸಿಲ್ಲ. ವರ್ಷದಿಂದ ಸಾಧ್ಯವಾಗದ ಕೆಲಸವನ್ನು ಕೆಲವೇ ದಿನಗಳಲ್ಲಿ ಮಾಡುವುದು, ಗೈಡ್ ಲೈನ್ಸ್ ರೂಪಿಸುವುದು ಅಧಿಕಾರಿಗಳ ಮುಂದಿರುವ ಸವಾಲು. ಅಕಸ್ಮಾತ್ ಜಾರಿಗೆ ತರುವುದಾಗಿ ಘೋಷಿಸಿದರೂ, ಯಾರೋ ಒಬ್ಬರು ಕೋರ್ಟಿಗೆ ಹೋಗುವುದು, ಅಲ್ಲಿ ಸ್ಟೇ ತರುವುದು.. ಮತ್ತೊಂದಷ್ಟು ವರ್ಷ ನೆನೆಗುದಿಗೆ ಬೀಳುವುದು.. ಇವುಗಳನ್ನು ಹಲವು ವರ್ಷಗಳಿಂದ ನೋಡಿಕೊಂಡೇ ಬಂದಿರುವ ಬೆಂಗಳೂರು ನಾಗರಿಕರಿಗೆ ಇದು ಭರವಸೆಯನ್ನೇನೂ ಹುಟ್ಟಿಸಿಲ್ಲ.



