ಚಾಮುಂಡೇಶ್ವರಿ ಮತ್ತು ವರುಣಾ ಎರಡೂ ಕೂಡಾ ಒಂದು ಕಾಲದಲ್ಲಿ ಒಂದೇ ಆಗಿದ್ದವು. ಕ್ಷೇತ್ರ ಪುನರ್ ವಿಂಗಡನೆ ನಂತರ ವರುಣಾ ಬೇರೆ ಆಯ್ತು. ಚಾಮುಂಡೇಶ್ವರಿ ಬೇರೆ ಆಯ್ತು. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿಯೇ ತಮ್ಮ ಹುಟ್ಟೂರು ಇದೆ ಎಂಬ ಕಾರಣ ಹೇಳಿ ವರುಣಾಗೆ ಶಿಫ್ಟ್ ಆದರು. ಜೆಡಿಎಸ್`ನಿಂದ ಕಾಂಗ್ರೆಸ್ಸಿಗೆ ಬಂದಾಗ ಚಾಮುಂಡೇಶ್ವರಿಯಲ್ಲಿ ಅಪಮಾನಕಾರಿ ಸೋಲನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ನೆನಪು ಸಿದ್ದರಾಮಯ್ಯಗೆ ಕಾಡಿದ್ದರೆ ಆಶ್ಚರ್ಯವಿಲ್ಲ. ಕಾಂಗ್ರೆಸ್ಸಿಗೆ ಜಾತ್ಯತೀತ ಜನತಾದಳದಿಂದ ಕಾಂಗ್ರೆಸ್‍ಗೆ ವಲಸೆ ಬಂದಾಗ ತಪ್ಪಿಸಿಕೊಂಡಿದ್ದ ಸೋಲು, 2018ರಲ್ಲಿ ರಪ್ಪಂತ ಬಡಿದಿತ್ತು. ವೈದ್ಯನಾಗಿದ್ದ ಮಗನನ್ನು ಬಲವಂತವಾಗಿ ರಾಜಕೀಯಕ್ಕೆ ಎಳೆದು ತಂದು ತಮ್ಮ ಕ್ಷೇತ್ರವನ್ನು ಮಗನಿಗಾಗಿ ಬಿಟ್ಟು ಕೊಟ್ಟು ಯಾಮಾರಿದ್ದರು ಸಿದ್ದರಾಮಯ್ಯ. ಮೊದಲೇ ವಾಸನೆ ಬಡಿದು ಬಾದಾಮಿಗೂ ನಿಲ್ಲದೇ ಹೋಗಿದ್ದರೆ, 2018ರಲ್ಲಿಯೇ ಮಾಜಿ ಶಾಸಕರಾಗುತ್ತಿದ್ದರು. ಹಾಗಾಗಲಿಲ್ಲ. ಆ ಮಾತು ಬೇರೆ. ಇದೀಗ ವರುಣಾದಲ್ಲಿಯೂ ಚಾಮುಂಡೇಶ್ವರಿ ವ್ಯೂಹ ಸಿದ್ದವಾಗುತ್ತಿರುವ ಮಾತು ಕೇಳಿ ಬರುತ್ತಿದೆ. ಇವುಗಳ ಮಧ್ಯೆಯೇ ತಮ್ಮ ಸೋಲಿಗೆ ಬಿಜೆಪಿ ಹಾಗೂ ಜೆಡಿಎಸ್ ಕೈಜೋಡಿಸಿವೆ ಎಂಬ ಅರ್ಥದ ಸಿದ್ದು ಹೇಳಿಕೆ ಸಂಚಲನ ಸೃಷ್ಟಿಸಿದೆ.


ಯಾಕಂದ್ರೆ ಸಿದ್ದುಗೆ ವರುಣಾ ಕ್ಷೇತ್ರ ಫೈನಲ್ ಆದ್ಮೇಲೆ, ಆ ಕ್ಷೇತ್ರದ ಗೇಮ್ ಪ್ಲ್ಯಾನ್ಗಳೇ ಬದಲಾಗಿವೆ. ಸಿದ್ದರಾಮಯ್ಯರನ್ನ ಸೋಲಿಸಲು ವರುಣಾದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಅನ್ನೋ ಚರ್ಚೆಯೂ ನಡೀತಿದೆ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನ ಸೋಲಿಸೋದಕ್ಕೆ ಮಾಡಿದ ತಂತ್ರದಂತೆ, ಈ ಬಾರಿ ವರುಣಾದಲ್ಲೂ ಮಾಡೋ ಲೆಕ್ಕಾಚಾರವನ್ನ ಹಾಕಿಕೊಳ್ಳಲಾಗಿದೆ ಎನ್ನಲಾಗಿದೆ. ಅದರ ಭಾಗವಾಗೇ ಬಿಜೆಪಿಯಿಂದ ಸಿದ್ದು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸೋ ಮಾತುಕತೆ ನಡೀತಿದೆ. ಸಿದ್ದು ವಿರುದ್ಧ ವರುಣಾದಲ್ಲಿ ಸ್ಪರ್ಧೆಗೆ ಬಿಎಸ್ವೈ ಪುತ್ರ ವಿಜಯೇಂದ್ರ ಹೆಸರು ಕೇಳಿ ಬರ್ತಿದೆ. ಹೀಗಾಗಿ ಒಳ ಒಪ್ಪಂದ ಏನಾದ್ರೂ ನಡೆದ್ರೆ, ಬಿಜೆಪಿ ಅಭ್ಯರ್ಥಿಗೆ ಜೆಡಿಎಸ್ ಪರೋಕ್ಷ ಬೆಂಬಲ ನೀಡುವ ಸಾಧ್ಯತೆ ಇದೆ.


ವರುಣಾ ಕ್ಷೇತ್ರದಲ್ಲಿ ಲಿಂಗಾಯ ಮತಗಳು ಹೆಚ್ಚಿವೆ. ಒಟ್ಟು 2 ಲಕ್ಷದ 23ಸಾವಿರದ 7 ಮತದಾರರು ಇದ್ದಾರೆ. ಪುರುಷ ಮತದಾರರು 1ಲಕ್ಷದ 11 ಸಾವಿರದ 777 ಇದ್ದಾರೆ. ಇತ್ತ 1ಲಕ್ಷದ11ಸಾವಿರದ 230 ಮಹಿಳಾ ವೋಟರ್ಸ್ ಇದ್ದಾರೆ. 48 ಸಾವಿರ ದಲಿತ ಮತಗಳಿವೆ. ಒಕ್ಕಲಿಗ 12 ಸಾವಿರ, ಕುರುಬ ಸಮುದಾಯದ 27 ಸಾವಿರ ಮತಗಳಿವೆ. ಅಲ್ಲದೇ ಉಪ್ಪಾರ ಸಮುದಾಯದ 14 ಸಾವಿರ ಮತದಾರರು ಇದ್ದರೆ, ಎಸ್ಟಿ ಸಮುದಾಯದ 23 ಸಾವಿರ ಮತಳು ಇವೆ. ಮುಸ್ಲಿಮ್ ಸಮುದಾಯದ 15 ಸಾವಿರ ಮತಗಳಿದ್ರೆ, ಇತರೆ 35 ಸಾವಿರ ಮತಗಳಿವೆ.
ಲಿಂಗಾಯತರು ಹೆಚ್ಚಿರುವ ಕ್ಷೇತ್ರದಲ್ಲಿ ಲಿಂಗಾಯತರ ಜೊತೆ ಒಕ್ಕಲಿಗ, ಬಿಜೆಪಿ ಜೊತೆ ಇರುವ ದಲಿತ ಎಡಗೈ ಮತದಾರರು ಕೈಜೋಡಿಸಿಬಿಟ್ಟರೆ, ಸಿದ್ದರಾಮಯ್ಯ ಗೆಲುವು ಅಸಾಧ್ಯ. ಕ್ಯಾಂಡಿಡೇಟ್ ಯಾರಾಗಲಿದ್ದಾರೆ ಅನ್ನೋದು ಮುಖ್ಯ.



