ಕಿಚ್ಚ ಸುದೀಪ್ ಯಾವ ಜಾತಿ..? ಛೆ..ಛೆ.. ಸಿನಿಮಾ ನಟರಿಗೆಲ್ಲ ಯಾವ ಜಾತಿ.. ಅಂತೀರೇನೋ.. ಬರೀ ಸಿನಿಮಾದಲ್ಲಷ್ಟೇ ಇದ್ದರೆ ಜಾತಿ ಲೆಕ್ಕಕ್ಕೆ ಬರಲ್ಲ. ಅದರಲ್ಲಿಯೂ ಕೆಲವರಿರುತ್ತಾರೆ. ರಾಜಕೀಯಕ್ಕೆ ಬಾರದಿದ್ದರೂ ಜಾತಿ ಹುಡುಕುವುದೇ ಅವರ ಕೆಲಸ. ಹಾಗೆ ಗೊತ್ತಾದರೂ ಕಲಾವಿದರಿಗೆ ಯಾರೂ ಜಾತಿ ಕೇಳುವುದಿಲ್ಲ. ಆದರೆ ಆ ಕಲಾವಿದರು ರಾಜಕೀಯಕ್ಕೆ ಬಂದರೆ.. ಅನುಮಾನವೇ ಇಲ್ಲ.
ಬಂಗಾರಪ್ಪ ಕುಟುಂಬದ ಬೀಗರಾಗದೇ ಇದ್ದಿದ್ದರೆ ರಾಜ್ ಕುಮಾರ್ ಜಾತಿ ಗೊತ್ತಾಗುತ್ತಲೇ ಇರಲಿಲ್ಲವೇನೋ.. ಅಂಬರೀಷ್ ಜಾತಿ ಅರಿವಿಗೆ ಬಂದಿದ್ದು ರಾಜಕೀಯಕ್ಕೆ ಬಂದಾಗಲೇ. ಜಗ್ಗೇಶ್, ಶಶಿಕುಮಾರ್, ಉಮಾಶ್ರೀ, ಜಯಮಾಲ, ತಾರಾ, ಮುಖ್ಯಮಂತ್ರಿ ಚಂದ್ರು, ರಮ್ಯಾ, ಅನಂತನಾಗ್.. ಹೀಗೆ ಯಾರನ್ನೂ ಅಭಿಮಾನಿಗಳು ಚಿತ್ರ ರಸಿಕರು ಜಾತಿಯ ತಕ್ಕಡಿಯಲ್ಲಿಟ್ಟು ತೂಗಲಿಲ್ಲ. ಆದರೆ, ವೋಟು ಹಾಕುವಾಗ, ರಾಜಕೀಯಕ್ಕೆ ಬಂದಾಗ ಥಟ್ಟನೆ ಉತ್ತರಿಸಬೇಕಾದ ಪ್ರಶ್ನೆ ಜಾತಿಯದ್ದು.
ಕಲಾವಿದರ ಜಾತಿ ಯಾವುದು..? ಈ ಪ್ರಶ್ನೆಯನ್ನ ಅಭಿಮಾನಿಗಳನ್ನು ಕೇಳಿದರೆ ಅಣ್ಣಾವ್ರ ಶೈಲಿಯಲ್ಲಿ ಕಲಾವಿದರ ಜಾತಿ ಅಂತಾರೆ. ರಾಜ್ ಹೇಳುತ್ತಿದ್ದುದೇ ಹಾಗೆ.. ನಾವೆಲ್ಲ ಸರಸ್ವತಿ ದೇವಿಯ ಮಕ್ಕಳು. ಬಣ್ಣ ಹಚ್ಚಿದ ಮೇಲೆ ನಾವೆಲ್ಲರೂ ಒಂದೇ ಜಾತಿ, ಕಲಾವಿದರ ಜಾತಿ ಎನ್ನುತ್ತಿದ್ದರು. ಆದರೆ ರಾಜಕೀಯಕ್ಕೆ ಯಾವುದೋ ಒಂದು ರೀತಿಯಲ್ಲಿ ಒಂದು ಕಾಲಿಟ್ಟ ಮೇಲೆ ಜಾತಿ, ಒಳ ಪಂಗಡ ಸೇರಿ ಎಲ್ಲವನ್ನೂ ಅಳೆದು ಬಿಡ್ತಾರೆ. ಸುದೀಪ್ ಅವರ ಜಾತಿಯೂ ಹಾಗೆಯೇ ಗೊತ್ತಾಗಿದ್ದು.
ಸುದೀಪ್ ಬೊಮ್ಮಾಯಿ ಹಾಗೂ ಬಿಜೆಪಿಯ ಕೆಲವರ ಪರ ಪರ ಪ್ರಚಾರ ಮಾಡುತ್ತಿದ್ದಾರೆ. ಅದನ್ನು ಅವರು ಅಧಿಕೃತವಾಗಿ ಘೋಷಿಸಿಯೇ ಪ್ರಚಾರಕ್ಕೆ ಹೊರಟವರು. ಹೀಗಾಗಿ ಸುದೀಪ್ ಎಲ್ಲಿಗೇ ಹೋದರೂ ಸುದೀಪ್ ಅವರ ಜಾತಿಯ ಪ್ರಶ್ನೆಯೂ ಎದುರಾಗುತ್ತಿದೆ.
ಇತ್ತೀಚೆಗೆ ಬೆಳಗಾವಿಯ ಯಮಕನಮರಡಿಗೆ ಪ್ರಚಾರಕ್ಕೆ ಹೋಗಿದ್ದಾರೆ ಸುದೀಪ್ ಅವರಿಗೆ ಮತ್ತೊಮ್ಮೆ ಈ ಪ್ರಶ್ನೆ ಎದುರಾಯ್ತು. ನಾನು ಎಲ್ಲಿ ಹುಟ್ಟಿದೆ. ಯಾವ ಜನಾಂಗ ಅನ್ನೋದು ಮುಖ್ಯ ಅಲ್ಲ. ಒಬ್ಬ ಮನುಷ್ಯನಾಗಿರುವುದು, ಸ್ನೇಹಿತನಾಗಿರುವುದು ಮೊದಲು ಮುಖ್ಯ. ಆವಾಗ ಮಾತ್ರ ಮನಸ್ಸುಗಳನ್ನು ಗೆಲ್ಲಲು ಸಾಧ್ಯ. ಇಲ್ಲಿ ನಾನು ನಿಮ್ಮ ಸಹೋದರ, ಸ್ನೇಹಿತನಾಗಿ ಬಂದಿದ್ದೇನೆ. ನನ್ನ ಬಾಂಧವರ ಪರ ತುಂಬಾ ಪ್ರೀತಿ ಇದೆ. 25 ವರ್ಷ ಚಿತ್ರರಂಗದಲ್ಲಿ ಇದ್ದೀನಿ ಅಂದ್ರೆ ನಿಮ್ಮಿಂದಾ. ನನ್ನ ಮೊದಲನೇ ಪ್ರೀತಿ ಕನ್ನಡ, ಕನ್ನಡಚಿತ್ರರಂಗ, ಅಭಿಮಾನಿಗಳು. ನನ್ನ ತಂದೆ ತಾಯಿ ಹೆಸರಿಟ್ಟಿದ್ದು ಬಹಳಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲಾ. ಆದರೆ ಕಿಚ್ಚ ಕಿಚ್ಚ ಎನ್ನುವ ಹೊಸ ಜನ್ಮ ಕೊಟ್ಟಿದ್ದೀರಾ ನೀವೆಲ್ಲ. ಕೊನೆವರೆಗೂ ಅದನ್ನ ಕಾಪಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ ಸುದೀಪ್.
ರೋಡ್ ಶೋ, ಪ್ರಚಾರವನ್ನೆಲ್ಲ ಮುಗಿಸಿ ಹೊರಡುವಾಗ ವೀರ ಮದಕರಿ ಚಿತ್ರದ ಡೈಲಾಗ್ ಹೇಳುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ರು. ಮದಕರಿ ಚಿತ್ರದ ಡೈಲಾಗ್ ಹೇಳಿ ಅಂತೀರಾ.. ಹೇಳಿದ್ರೆ ಜಾತಿ ಹೆಸರು ಹೇಳಿ ಟೀಕೆ ಮಾಡ್ತಾರೆ. ಇದು ಯಾವ ನ್ಯಾಯ ಎಂದ ಸುದೀಪ್, ಅಭಿಮಾನಿಗಳ ಆಸೆಯನ್ನೇನೂ ಹುಸಿ ಮಾಡಲಿಲ್ಲ. ವೀರ ಮದಕರಿ ಚಿತ್ರದ ಡೈಲಾಗ್ ಹೊಡೆದರು.
ಅಂದಹಾಗೆ ಸುದೀಪ್ ಈ ಪ್ರಚಾರಕ್ಕೆ ಬರುತ್ತಿರುವುದು ಬೊಮ್ಮಾಯಿ ಮಾಮನಿಗಾಗಿ ಎಂದಿದ್ದರು. ಬಸವರಾಜ ಬೊಮ್ಮಾಯಿ ಸುದೀಪ್ ಜಾತಿಯವರಲ್ಲ. ಬೊಮ್ಮಾಯಿ ಜೊತೆಯಲ್ಲಿ ಈ ಮಾತು ಹೇಳಿದಾಗ ವೇದಿಕೆಯಲ್ಲಿದ್ದ ಸುಧಾಕರ್, ಮುನಿರತ್ನ, ಆರ್.ಅಶೋಕ್ ಕೂಡಾ ಸುದೀಪ್ ಜಾತಿಗೆ ಸೇರಿದವರಲ್ಲ.
ಸುದೀಪ್ ಜಾತಿಯೇನ್ನೇನೂ ರಹಸ್ಯವಾಗಿಟ್ಟುಕೊಂಡವರಲ್ಲ. ಬಹಿರಂಗವಾಗಿಯೇ ಗೊತ್ತಿದ್ದ ವಿಷಯ. ವಾಲ್ಮೀಕಿ ಸಮುದಾಯದವರ ಜಾತ್ರೆಗೆ ಸುದೀಪ್ ಹೋಗುತ್ತಿರುವಾಗಲೇ ಅದು ಗೊತ್ತಾಗಿತ್ತು. ಆದರೆ ವಿಷಯ ಅದಲ್ಲ, ರಾಜಕೀಯಕ್ಕೆ ಎಂಟ್ರಿ ಕೊಟ್ಟ ತಕ್ಷಣ ಜಾತಿ ನೆನಪಾಗೋದ್ಯಾಕೆ? ಜಾತಿ ಅಷ್ಟೊಂದು ಅನಿವಾರ್ಯವಾ..? ಭಾರತ ಬದಲಾಗಿಲ್ವಾ..?
ಹಾಗೇನಿಲ್ಲ. ಜಾತಿಯನ್ನ ಹುಡುಕೋರಿಗೆ ರಾಜಕೀಯದಿಂದ ದೂರ ಇದ್ದ ಕಲಾವಿದರ ಜಾತಿಯೂ ಅಷ್ಟೇ ಚೆನ್ನಾಗಿ ಗೊತ್ತು. ರಾಜಕೀಯಕ್ಕೆ ಬರಲೇಬೇಕೆಂದೇನೂ ಇಲ್ಲ.



