ಜೆಡಿಎಸ್‍ಗೆ ಮತ ಹಾಕಿ ನಿಮ್ಮ ಮತ ವೇಸ್ಟ್ ಮಾಡಿಕೊಳ್ಳಬೇಡಿ.. 15-20 ಸೀಟು ಗೆಲ್ತಾರೆ. ಆಮೇಲೆ ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಿ ನಿಲ್ತಾರೆ. ಅದರ ಬದಲು ನಮಗೆ ಮತ ನೀಡಿ. ಒಂದು ಕುಟುಂಬದವರಿಗಷ್ಟೇ ಸೀಮಿತವಾದ ಪಕ್ಷಕ್ಕೆ ಮತ ನೀಡಬೇಡಿ.. ಇದು ಬಿಜೆಪಿ ನಾಯಕರ ಮಾತು. ಅಮಿತ್ ಶಾ ಕರ್ನಾಟಕಕ್ಕೆ ಬಂದಾಗಲೆಲ್ಲ ಹೇಳುತ್ತಿರುವುದು ಇದೇ ಮಾತನ್ನು. ನರೇಂದ್ರ ಮೋದಿ ಪರೋಕ್ಷವಾಗಿ ಕೊಡುತ್ತಿರುವ ಮಾತಿನ ಸೂಚನೆಯೂ ಅದೇ.




ಹಾಗಾದರೆ ಎರಡೂ ಪಕ್ಷಗಳಿಗೆ ಜೆಡಿಎಸ್ ಮೇಲೆ ಏಕೆ ಕಣ್ಣು? ಅದಕ್ಕೆ ಕಾರಣಗಳಿವೆ.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಇವತ್ತಿಗೂ ದೇವೇಗೌಡರ ಹಿಂಬಾಲಕರು. ಬೇರೆ ಪಕ್ಷಗಳಲ್ಲಿ ಒಕ್ಕಲಿಗ ನಾಯಕರಿಲ್ಲ ಎಂದಲ್ಲ, ಆದರೆ ಸಿಂಹಪಾಲು ಒಕ್ಕಲಿಗರು ದೇವೇಗೌಡರನ್ನು ತಮ್ಮ ಸಮುದಾಯದ ಹೆಮ್ಮೆ ಎಂಬಂತೆ ನೋಡುತ್ತಾರೆ. ಕಳೆದ ಬಾರಿ ಅದರ ಹೊಡೆತವನ್ನು ಹೆಚ್ಚಾಗಿ ಅನುಭವಿಸಿದ್ದು ಕಾಂಗ್ರೆಸ್. ಈ ಬಾರಿಯೂ ಹಾಗೆಯೇ ಆದರೆ ಎಂಬ ಮುಂಜಾಗ್ರತೆ ಅದಕ್ಕಿದೆ. ಜೊತೆಗೆ ಕುಮಾರಸ್ವಾಮಿವರಿಗೆ ಪಂಚರತ್ನ ಯಾತ್ರೆಯಲ್ಲಿ ದೊರಕುತ್ತಿರುವ ಮುಸ್ಲಿಂ ಮತದಾರರ ಬೆಂಬಲ. ಇದು ಕಾಂಗ್ರೆಸ್ಸಿಗೆ ಹೊಡೆತ ಕೊಟ್ಟರೆ ಏನಾಗಬಹುದು ಎಂಬ ಆತಂಕ ಕಾಂಗ್ರೆಸ್ಸಿಗರಲ್ಲಿದೆ. ಕುರುಬ, ಬಲಗೈ ದಲಿತರು, ಅಲ್ಪಸಂಖ್ಯಾತರು ಅದರಲ್ಲಿಯೂ ವಿಶೇಷವಾಗಿ ಮುಸ್ಲಿಮರ ಮತಗಳು ತಮ್ಮವು ಎಂದು ನಂಬಿಕೊಂಡಿದೆ ಕಾಂಗ್ರೆಸ್. ಹೀಗಾದರೆ ಕಾಂಗ್ರೆಸ್ ಬಹುಪಾಲು ನಂಬಿಕೊಂಡಿರುವ ಮುಸ್ಲಿಮ್ ಮತಗಳು ಚದುರಿ ಹೋದರೆ ಎನ್ನುವ ಆತಂಕ ಕಾಂಗ್ರೆಸ್ಸಿಗರದ್ದು.
ಅತ್ತ ಬಿಜೆಪಿಯಲ್ಲಿಯೂ ಇದೇ ಕಥೆ. ಜೆಡಿಎಸ್‍ಗೆ ಉತ್ತರ ಕರ್ನಾಟಕದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಲ್ಲ ಎನ್ನುವುದು ವಾಸ್ತವ. ಆದರೆ ಮತಗಳಂತೂ ಇವೆ. ಈಗ ಆಗುತ್ತಿರುವ ಬೆಳವಣಿಗೆಯಲ್ಲಿ ಮೊದಲಿಗಿಂತ ಹೆಚ್ಚು ಬಲ ವೃದ್ಧಿಸಿಕೊಂಡಿದೆ ಎಂಬ ಭಾವನೆ ಹೊಮ್ಮಿಸಿರುವುದು ಜೆಡಿಎಸ್. ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರಿ ಸಮಾನ ಎದುರಾಳಿಗಳು. ಜೆಡಿಎಸ್ ಯಾವ ಕ್ಷೇತ್ರದಲ್ಲಿ ಪ್ರಬಲವಾಗಿ ಯಾವ ಪಕ್ಷದವರ ವೋಟುಗಳನ್ನು ಹೆಚ್ಚು ಗಿಟ್ಟಿಸಿಕೊಳ್ಳುತ್ತದೆಯೋ ಅರ್ಥವಾಗುತ್ತಿಲ್ಲ. ಹೆಚ್ಚು ಕಮ್ಮಿಯಾದರೆ ನಮಗೇ ಸೋಲು ಎಂಬ ಭಾವನೆ ಬಿಜೆಪಿ ನಾಯಕರದ್ದು. ಹೀಗಾಗಿಯೇ ಬಿಜೆಪಿಯೂ ಜೆಡಿಎಸ್‍ನ್ನೇ ಟಾರ್ಗೆಟ್ ಮಾಡುತ್ತಿದೆ.
ರಾಜಕೀಯದಲ್ಲಿ ಗೆಲ್ಲುವ ಮತ್ತು ಸೋಲುವವರಷ್ಟೇ ಮುಖ್ಯ, ಸೋಲಿಸುವ ಮತ್ತು ಗೆಲ್ಲಿಸುವ ನಾಯಕರು.



