ಜೆಡಿಎಸ್ ಸೋತಿದ್ದು ಕಾಂಗ್ರೆಸ್ಸಿನ ಎದುರು, ಅದರಲ್ಲೇನು ವಿಶೇಷ ಅಂತೀರೇನೋ.. ಆದರೆ ಜೆಡಿಎಸ್`ನ್ನು ಸೋಲಿಸಿದ್ದು ಬಿಜೆಪಿ. ಅಚ್ಚರಿಯಾದರೂ ಇದು ಸತ್ಯ. ಹಳೆ ಮೈಸೂರು ಭಾಗದ 61 ಕ್ಷೇತ್ರಗಳಲ್ಲಿ ಒಂದು ಕೋಟಿಗೂ ಹೆಚ್ಚು ಮತಗಳು ಚಲಾವಣೆಯಾಗಿವೆ. ಇವುಗಳಲ್ಲಿ ಬಿಜೆಪಿ ಪಡೆದ ವೋಟುಗಳ ಸಂಖ್ಯೆ 24,60,429 ಮತ. ಇದು ಈ ಭಾಗದಲ್ಲಿ ಜೆಡಿಎಸ್ ಪಡೆದ ಮತಗಳಿಗಿಂತ ಕೇವಲ 6 ಲಕ್ಷ ಕಡಿಮೆ. ಜೆಡಿಎಸ್ ಈ ಭಾಗದಲ್ಲಿ 30,55,584 ಮತಗಳನ್ನು ಪಡೆದುಕೊಂಡಿದೆ.
ಮೈಸೂರು ಭಾಗದಲ್ಲಿ ಮೊದಲಿಗಿಂತ ಕಡಿಮೆ ಸೀಟುಗಳನ್ನು ಗೆದ್ದುಕೊಂಡಿದೆ.
ಬಿಜೆಪಿ ವೋಟ್ ಶೇರ್ ಶೇ.18.3ರಿಂದ ಶೇ.23.4ಕ್ಕೆ ಏರಿಕೆಯಾಗಿದೆ. ಅಂದರೆ ಶೇ.5ರಷ್ಟು ಏರಿಕೆಯಾಗಿದೆ. ಅಷ್ಟೇ ಅಲ್ಲ, 24 ಕ್ಷೇತ್ರಗಳಲ್ಲಿ ಜೆಡಿಎಸ್‍ಗಿಂತಲೂ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ವಿಶೇಷವಾಗಿ ತುಮಕೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಜೆಡಿಎಸ್‍ಗಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿದೆ.
ಇದೇ ವೇಳೆ ಜೆಡಿಎಸ್ ಈ ಭಾಗದಲ್ಲಿ 2018ರಲ್ಲಿ ಶೇ.37ರಷ್ಟು ಮತದಾರರ ಪ್ರಾಬಲ್ಯ ಹೊಂದಿತ್ತು. ಇದು 2023ರಲ್ಲಿ ಶೇ.28.5ಕ್ಕೆ ಇಳಿಕೆಯಾಗಿದೆ. ಇದರ ಪರಿಣಾಮ ರಿಸಲ್ಟ್ ನಲ್ಲಿ ಕಾಣಿಸಿದೆ.
ಕರ್ನಾಟದಲ್ಲಿ ಬಿಜೆಪಿಗೆ ಏರಿಕೆ ಕಂಡಿರುವ ಏಕೈಕ ವಲಯ ಮೈಸೂರು ಕರ್ನಾಟಕ. ಉಳಿದಂತೆ ಮದ್ಯ ಕರ್ನಾಟಕ, ಕಲ್ಯಾಣ ಕರ್ನಾಟಕಗಳಲ್ಲಿ ಕೊಚ್ಚಿ ಹೋಗಿದೆ. ಬೆಂಗಳೂರು ನಗರ ಮತ್ತು ಕರಾವಳಿಯಲ್ಲಿ ಪ್ರಾಬಲ್ಯ ಉಳಿಸಿಕೊಂಡಿದ್ದರೂ, 2018ಕ್ಕೆ ಹೋಲಿಸಿದರೆ ಮತಗಳಿಕೆ ಪ್ರಮಾಣ ಕಡಿಮೆಯಾಗಿದೆ.
ಇನ್ನು ಕಾಂಗ್ರೆಸ್ ಮತಗಳಿಕೆ ಏರಿಕೆಯ ರಹಸ್ಯವೂ ಇಷ್ಟೆ. ಯಡಿಯೂರಪ್ಪ ನಿರ್ಗಮನ, ಬಿ.ಎಲ್. ಸಂತೋಷ್ ವಿವಾದದಿಂದಾಗಿ ಅಸಮಾಧಾನಗೊಂಡಿದ್ದ ಲಿಂಗಾಯತರು, ಒಳ ಮೀಸಲಾತಿಯಿಂದಾಗಿ ರೊಚ್ಚಿಗೆದ್ದಿದ್ದ ದಲಿತರು, ಈಶ್ವರಪ್ಪ ಅವರ ನಿರ್ಗಮನದಿಂದಾಗಿ ಅಷ್ಟೋ ಇಷ್ಟೋ ಇದ್ದ ಕುರುಬರು, ಹಲವು ಗಲಾಟೆಗಳಿಂದಾಗ ಆಕ್ರೋಶಗೊಂಡಿದ್ದ ಮುಸ್ಲಿಮರು.. ವಿಶೇಷವಾಗಿ ಮುಸ್ಲಿಮರು ಬೇರೆ ಆಯ್ಕೆಯನ್ನೇ ನೋಡದೆ ಸಾಲಿಡ್ ಆಗಿ ಕಾಂಗ್ರೆಸ್ಸಿಗೆ ವೋಟು ಒತ್ತಿದ ಪರಿಣಾಮ ಕಾಂಗ್ರೆಸ್ ಶೇ.45ಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಜಿಡಿಎಸ್‍ನಿಂದ ವರ್ಗಾವಣೆಯಾದ ಮತಗಳೂ ಕಾಂಗ್ರೆಸ್ಸಿಗೆ ಬಂದಿವೆ. ಬಿಜೆಪಿಯಿಂದ ಟ್ರಾನ್ಸಫರ್ ಆದ ವೋಟುಗಳೂ ಕಾಂಗ್ರೆಸ್ಸಿಗೆ ಬಂದಿವೆ. ಮುಸ್ಲಿಮರ ವೋಟುಗಳನ್ನು ಸೆಳೆಯುತ್ತಿದ್ದ ಎಸ್‍ಡಿಪಿಐ, ಎಐಎಂಐಎಂ, ಜೆಡಿಎಸ್ ಮೊದಲಾದ ಪಕ್ಷಗಳು ಈ ಬಾರಿ ಶೂನ್ಯ ಸುತ್ತಿವೆ.



