ರಾಜ್ಯ ರಾಜಕೀಯ ಈ ಬಾರಿ ಹತೋಟಿ ತಪ್ಪಿದೆ. ಎಲ್ಲವೂ ಕಂಟ್ರೋಲಿನಲ್ಲಿಲ್ಲ. ಮಾತುಗಳು, ವರ್ತನೆಗಳು ಮಿತಿ ಮೀರಿವೆ. ರಾಜಕೀಯದಲ್ಲಿ ಹೀಗಾಗ ಬಾರದಿತ್ತು. ಆದರೆ ಆಗಿ ಹೋಗಿದೆ. ಹಲವು ಕಡೆ ಇಂತಹ ಸಣ್ಣ ಸಣ್ಣ ಘಟನೆಗಳು ಜರುಗುತ್ತಿದ್ದರೂ ಅದರ ಪೀಕ್ ತಲುಪಿದ್ದು ಮಾತ್ರ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿರುವ ವರುಣಾ ಕ್ಷೇತ್ರದಲ್ಲಿಯೇ.
ಆರಂಭದಲ್ಲಿ ವಿ.ಸೋಮಣ್ಣ, ಪ್ರತಾಪ್ ಸಿಂಹ ಪ್ರಚಾರಕ್ಕೆ ಹೋದಾಗ ಪ್ರಶ್ನಿಸುವ ಭರದಲ್ಲಿ ಪ್ರಚಾರಕ್ಕೆ ಅಡ್ಡಿ ಪಡಿಸಿದ್ದು ಕಾಂಗ್ರೆಸ್ ಕಾರ್ಯಕರ್ತರೇ. ಆ ವಿಡಿಯೋವನ್ನು ಕಾಂಗ್ರೆಸ್ ಅಧಿಕೃತ ಖಾತೆಯಲ್ಲಿ ಹಾಕಿಕೊಂಡು ಸಂಭ್ರಮಿಸಿತು. ಪೂರ್ತಿ ವಿಡಿಯೋ ಹಾಕಿ, ಈಗ ಅದೇ ಊರಿಗೆ ಹೋಗಿ ಸಮಾವೇಶ ಮಾಡುತ್ತಿದ್ದೇವೆ ಎಂದು ತಿರುಗೇಟು ಕೊಟ್ಟ ಪ್ರತಾಪ್ ಸಿಂಹ, ಗಲಾಟೆ ನಡೆದಿದ್ದ ಊರಿನಲ್ಲಿಯೇ ಪ್ರಚಾರ ಮಾಡಿ ಸವಾಲು ಹಾಕಿದರು. ಸೋಮಣ್ಣ ಅವರಿಗೂ ಹಲವೆಡೆ ಪ್ರಚಾರಕ್ಕೆ ಅಡ್ಡಿ ಎದುರಾಯ್ತು. ಇದು ತುತ್ತತುದಿ ಮುಟ್ಟಿದ್ದು ಸಿದ್ದರಾಮನ ಹುಂಡಿಯಲ್ಲಿ. ಅದು ಸಿದ್ದರಾಮಯ್ಯ ಅವರ ಹುಟ್ಟೂರು.
ಸಿದ್ದರಾಮನ ಹುಂಡಿಯಲ್ಲಿ ಪ್ರಚಾರ ಮಾಡುತ್ತಿದ್ದಾಗ ಬಿಜೆಪಿ ಕಾರ್ಯಕರ್ತರ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಲಾಗಿದೆ. ಆ ವೇಳೆ ಸಚಿವರೂ ಆಗಿರುವ ಸೋಮಣ್ಣ, ಸಂಸದರಾಗಿರುವ ಪ್ರತಾಪ್ ಸಿಂಹ ಕೂಡಾ ಇದ್ದರು ಎನ್ನುವುದು ವಿಶೇಷ. ಬಕೆಟ್ಟುಗಳಲ್ಲಿ ಕಲ್ಲು ತುಂಬಿಕೊಂಡು ಬಂದು, ಒಂದು ಸಮುದಾಯದವರಿಂದ ಹೊಡೆಸಿದ್ದಾರೆ ಎನ್ನುವುದು ಪ್ರತಾಪ್ ಸಿಂಹ ವಾದ. ಯ್ಯುಸ್ಸೀ.. ಹಲ್ಲೆ ಮಾಡಿದ್ದು ನಾವಲ್ಲ. ನಮ್ಮವರಲ್ಲ. ಬಿಜೆಪಿಯವರೇ ಕೆರಳಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಯಾರು ಪ್ರಚಾರಕ್ಕೆ ಬಂದಾಗಲೂ ಹಲ್ಲೆ, ಹೊಡೆದಾಟ ಮಾಡುವುದು ಸರಿಯಲ್ಲ. ಅದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ ಸಿದ್ದರಾಮಯ್ಯ.
ಇತ್ತ ಕೊರಟಗೆರೆಯಲ್ಲಿ. ಅದು ಪರಮೇಶ್ವರ್ ಸ್ಪರ್ಧೆ ಮಾಡಿರುವ ಕ್ಷೇತ್ರ. ಅಲ್ಲಿ ಕೊರಟಗೆರೆ ನಗರದಲ್ಲಿ ಪರಮೇಶ್ವರ್ ಅಭಿಮಾನಿಗಳು ಅವರನ್ನು ಹೊತ್ತಿಕೊಂಡು ಕುಣಿಯುತ್ತಿದ್ದಾಗ ಅವರ ತಲೆಗೆ ಪೆಟ್ಟಾಗಿದೆ. ಪರಮೇಶ್ವರ್ ಅವರ ಪರ ನಿಂತಿರುವ ಕೆಲವರ ವಾದದ ಪ್ರಕಾರ ಅದು ಕಲ್ಲೇಟು. ಯಾರೋ ಹೂವುಗಳ ನಡುವೆ ಕಲ್ಲಿಟ್ಟು ಹೊಡೆದಿದ್ದಾರೆ, ನೋಡಿ ಎಂದು ಹೂವುಗಳ ಕಲೆ ಇರುವ ಕಲ್ಲು ತೋರಿಸ್ತಾರೆ. ಇಲ್ಲ..ಇಲ್ಲ.. ಕಾಂಗ್ರೆಸ್ ಬಾವುಟ ಹಿಡಿದು ಕುಣಿಯುವಾಗ ಸ್ಲಿಪ್ ಆಗಿ ದೊಣ್ಣೆ ಬಿದ್ದು, ರಕ್ತ ಬಂದಿದೆ ಎನ್ನುವುದು ಇನ್ನೂ ಕೆಲವರ ವಾದ. ಒಟ್ಟಿನಲ್ಲಿ ಪರಮೇಶ್ವರ್ ತಲೆಗೆ ಪೆಟ್ಟಾಗಿರುವುದು ನಿಜ. ಹೊಲಿಗೆಯನ್ನೇನೂ ಹಾಕಿಲ್ಲ. ಅಷ್ಟು ಗಂಭೀರವಾಗಿಲ್ಲ. ರಕ್ತ ಬಂದಿರುವುದೂ ನಿಜ. ಗಂಭೀರ ಗಾಯವೇನೂ ಆಗಿಲ್ಲ. ಆದರೆ ಇದನ್ನು ಒಪ್ಪಲು ಸಾಧ್ಯವೂ ಇಲ್ಲ.
ಇಂತಹ ಹಲ್ಲೆ, ಹೊಡೆದಾಟ, ಬಡಿದಾಟದ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ದೊಡ್ಡ ಮಟ್ಟದಲ್ಲಿ ಆದ ಕೆಲವು ಘಟನೆಗಳಷ್ಟೇ ಬೆಳಕಿಗೆ ಬರುತ್ತಿದೆ. ಸಿದ್ದರಾಮಯ್ಯನವರ ಹುಟ್ಟೂರಿನಲ್ಲಿ ಸೋಮಣ್ಣ, ಪ್ರತಾಪ್ ಸಿಂಹ ಇದ್ದಾಗಲೇ ಗಲಾಟೆ ಆಯಿತು ಎಂಬ ಕಾರಣಕ್ಕೆ ಆ ಪ್ರಕರಣ, ಏಟು ತಿಂದವರು ಕೆಪಿಸಿಸಿ ಮಾಜಿ ಅಧ್ಯಕ್ಷ, ದಲಿತ ನಾಯಕ ಪರಮೇಶ್ವರ್ ಎಂಬ ಕಾರಣಕ್ಕೆ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿವೆ, ಅಷ್ಟೆ.



